ಕಾಂಗ್ರೆಸ್ ಬೆರಳು ತೋರಿಸಿ ಕೈ ನುಂಗುತ್ತಿದೆ: ಬಿಜೆಪಿ
ಕಿಡಿ
ನವದೆಹಲಿ, ಶನಿವಾರ, 4 ಡಿಸೆಂಬರ್ 2010( 11:24 IST )
ನಿರಂತರ ಅಡ್ಡಿಗಳಿಂದಾಗಿ ಸಂಸತ್ ಕಲಾಪ ನಡೆಯದೇ ಇರುವುದರಿಂದ ತಾವು ದಿನ ಭತ್ಯೆಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಸಂಸದರನ್ನು ಲೇವಡಿ ಮಾಡಿರುವ ಬಿಜೆಪಿ, ಲಕ್ಷಾಂತರ ಕೋಟಿ ಮೊತ್ತದ 2ಜಿ ಹಗರಣವನ್ನು ಮುಚ್ಚಿ ಹಾಕಲು ತಮಗೆ 2,000 ರೂಪಾಯಿ ಬೇಡ ಎನ್ನುತ್ತಿದ್ದಾರೆ ಎಂದಿದೆ.
ಕೇವಲ ಎರಡು ಸಾವಿರ ರೂಪಾಯಿಗಳನ್ನು ತೋರಿಸಿ ಲಕ್ಷಾಂತರ ಕೋಟಿ ರೂಪಾಯಿಗಳ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸಂಸದರು ಮುಂದಾಗಿದ್ದಾರೆ. ನಿಜಕ್ಕೂ ಕಾಂಗ್ರೆಸ್ ಸಂಸದರಿಗೆ ಭ್ರಷ್ಟಾಚಾರ ಆತಂಕ ತಂದಿದ್ದರೆ, ಅಕ್ರಮಗಳನ್ನು ನಿಲ್ಲಿಸುವಂತೆ ತಮ್ಮ ಪಕ್ಷಕ್ಕೆ ಹೇಳಲು ಯತ್ನಿಸಬೇಕು. ಅದು ಬಿಟ್ಟು ಕೇವಲ 2,000 ರೂಪಾಯಿ ಬೇಡ ಎಂದು ಹೇಳುವ ಮೂಲಕ ಹುತಾತ್ಮರಾಗಲು ಯತ್ನಿಸುವುದಲ್ಲ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಸಂಸತ್ತಿನ ಹೊರಗಡೆ ಮಾತನಾಡುತ್ತಾ ತಿಳಿಸಿದ್ದಾರೆ.
2ಜಿ ಹಗರಣದ ಸಂಬಂಧ ಜಂಟಿ ಸಂಸದೀಯ ಸಮತಿ ತನಿಖೆ ನಡೆಯಬೇಕೆಂದು ಯುಪಿಎಯೇತರ ಪಕ್ಷಗಳು ಆಗ್ರಹಿಸುತ್ತಾ ಬಂದಿರುವುದರಿಂದ, ಸಂಸತ್ತಿನ ಚಳಿಗಾಲದ ಅಧಿವೇಶನ ಇದುವರೆಗೂ ಸುಲಲಿತವಾಗಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದರು, ತಾವು ದಿನ ಭತ್ಯೆಯನ್ನು ಪಡೆಯುವುದಿಲ್ಲ ಎಂದು ಪ್ರಕಟಿಸಿದ್ದರು. ಈ ಕುರಿತು ತಮ್ಮ ಪ್ರತಿಕ್ರಿಯೆಯೇನು ಎಂಬ ಪ್ರಶ್ನೆಗೆ ಹುಸೇನ್ ಮೇಲಿನಂತೆ ಉತ್ತರಿಸಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು ಮನಬಂದಂತೆ ಟಿಕೆಟ್ ದರ ಏರಿಸುತ್ತಿರುವುದರ ಕುರಿತು ಪ್ರಶ್ನಿಸಿದಾಗ, ಸರಕಾರವು ವಿಮಾನಯಾನ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಸ್ವಘೋಷಿತ ಅಗ್ಗದ ದರ ಕಂಪನಿಗಳು ಸಾಮಾನ್ಯ ಜನರಿಂದ ಬಹು ದೂರ ಹೋಗಿವೆ ಎಂದು ಮಾಜಿ ನಾಗರಿಕ ವಾಯುಯಾನ ಸಚಿವ ಅಭಿಪ್ರಾಯಪಟ್ಟರು.