ಗೋದ್ರೋತ್ತರ ಹಿಂಸಾಚಾರಗಳಿಗೆ ಸಂಬಂಧಪಟ್ಟಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಸಮರ್ಪಕ ಸಾಕ್ಷ್ಯಗಳಿಲ್ಲ ಎಂದು ಸುಪ್ರೀಂ ಕೋರ್ಟ್ ನೇಮಕಗೊಳಿಸಿರುವ ಸಿಟ್ ತಂಡವು ಕ್ಲೀನ್ ಚಿಟ್ ನೀಡಿರುವ ವರದಿಗಳು ನನ್ನಲ್ಲಿ ತೀವ್ರ ಸಂತಸವನ್ನು ಉಂಟು ಮಾಡಿವೆ ಎಂದು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಭಾನುವಾರ ತಿಳಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿರುವ ಅಡ್ವಾಣಿ, ನರೇಂದ್ರ ಮೋದಿಯವರಿಗೆ ಎದುರಾಳಿಗಳು ನೀಡಿದಷ್ಟು ಕಿರುಕುಳ ಮತ್ತು ಅವರ ವಿರುದ್ಧ ನಡೆಸಿದ ಅಪಪ್ರಚಾರಗಳನ್ನು ತನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಬೇರೆ ಯಾವುದೇ ತನ್ನ ಪಕ್ಷದ ಸಹಪಾಠಿಗೆ ನೀಡಿರುವುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ತನ್ನ ಬ್ಲಾಗಿನಲ್ಲಿ ವಿಸ್ತೃತವಾಗಿ ಬರೆದುಕೊಂಡಿರುವ ಮಾಜಿ ಉಪ ಪ್ರಧಾನಿ, ಗೋದ್ರಾ ಹತ್ಯಾಕಾಂಡದ ನಂತರ ಗುಜರಾತಿನಲ್ಲಿನ ಹಿಂಸಾಚಾರವನ್ನು ಮೋದಿ ತಡೆದಿಲ್ಲ ಎಂಬುದನ್ನು ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಕೆಲವು ವ್ಯಕ್ತಿಗಳು ಅಪಪ್ರಚಾರ ನಡೆಸಿದರು ಎಂದಿದ್ದಾರೆ.
ಗೋದ್ರೋತ್ತರ ಹಿಂಸಾಚಾರವನ್ನು ಉದ್ದೇಶಪೂರ್ವಕವಾಗಿ ಮೋದಿಯವರು ನಡೆಯಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಆರೋಪಗಳಲ್ಲಿ ಹುರುಳಿಲ್ಲ ಎಂದು ಸಿಟ್ ತನಿಖಾ ತಂಡವು ಕಂಡುಕೊಂಡಿದೆ ಎಂಬ ವರದಿಗಳು ನನ್ನಲ್ಲಿ ಸುದೀರ್ಘ ಕಾಲದ ನಂತರ ಉಂಟು ಮಾಡಿದ ಬಹು ಸಂತಸದ ಸುದ್ದಿ ಎಂದು ಅಡ್ವಾಣಿ ತಿಳಿಸಿದ್ದಾರೆ.
ಸಿಟ್ ತನಿಖಾ ತಂಡವು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯ ಪೂರ್ಣ ಪಾಠಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ ಎಂದಿರುವ ಬಿಜೆಪಿಯ ಮುತ್ಸದ್ದಿ, ಮೋದಿಯವರ ವಿರುದ್ಧ ಸುಳ್ಳು ಆಪಾದನೆಗಳನ್ನೊಳಗೊಂಡ ಪ್ರಚಾರಗಳು ಭಾರೀ ಮಟ್ಟದಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿ ಅವರು ಗುಜರಾತನ್ನು ದೇಶಕ್ಕೆ ಮಾದರಿ ರಾಜ್ಯವಾಗಿ ಪರಿವರ್ತಿಸಿದುದಕ್ಕೆ ಭಾರತ ಮತ್ತು ವಿದೇಶಗಳಿಂದ ಭಾರೀ ಪ್ರಶಂಸೆಯನ್ನು ಪಡೆದರು. ಅವರು ಪ್ರಾಮಾಣಿಕ ಮತ್ತು ಅತ್ಯುತ್ತಮವಾಗಿರುವ ಸರಕಾರವನ್ನು ನೀಡಿದ್ದಾರೆ ಎಂದು ಬರೆದಿದ್ದಾರೆ.
ಅಯೋಧ್ಯೆಯಿಂದ ವಾಪಸ್ ಬರುತ್ತಿದ್ದ 58 ಕರಸೇವಕರು ಸುಟ್ಟು ಕರಕಳಾದ ಘಟನೆಯ ಬೆನ್ನಿಗೆ ಗುಜರಾತಿನ ಕೆಲವು ಭಾಗಗಳಲ್ಲಿ ನಡೆದ ಹಿಂಸಾಚಾರಗಳ ಬಳಿಕ ಮೋದಿ ಗಲಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪವನ್ನು ಮೋದಿಯವರ ಮೇಲೆ ಹೊರಿಸಲಾಗಿತ್ತು.
ಈ ಸಂಬಂಧ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿಯವರು ಮೋದಿ ವಿರುದ್ಧ ದೂರು ನೀಡಿರುವುದು, ಸುಪ್ರೀಂ ಕೋರ್ಟ್ ಸಿಟ್ ತನಿಖೆಗೆ ಆದೇಶ ನೀಡಿರುವುದನ್ನು ಕೂಡ ಅಡ್ವಾಣಿಯವರು ತನ್ನ ಬರಹದಲ್ಲಿ ನೆನಪಿಸಿದ್ದಾರೆ.