ಎದುರಾಳಿಗಳ ಪಿತೂರಿಯಿಂದ ಮತ್ತು ಮಾಧ್ಯಮಗಳ ಚಿತಾವಣೆಯಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು ಒಂದೊಂದೇ ಸುಳ್ಳು ಎಂದು ಸಾಬೀತಾಗುತ್ತಿದೆ. ಗೋದ್ರಾ ಹಿಂಸಾಚಾರ ನಂತರದ ಗಲಭೆಯಲ್ಲಿ ಮೋದಿ ಪಾತ್ರದ ಬಗ್ಗೆ ಯಾವುದೇ ಮಹತ್ವದ ಪುರಾವೆಗಳಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನೇಮಿಸಿರುವ ವಿಶೇಷ ತನಿಖಾ ದಳವು ಕ್ಲೀನ್ ಚಿಟ್ ನೀಡಿದೆ.
ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಸತತ ಒಂಬತ್ತು ಗಂಟೆಗಳ ಕಾಲ ಮೋದಿಯವರನ್ನು ವಿಚಾರಣೆಗೊಳಪಡಿಸಿದ್ದು ನೆನಪಿರಬಹುದು. ಅಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು - ಎದುರಾಳಿಗಳು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದವು.
ಗುಲ್ಬರ್ಗಾ ಸೊಸೈಟಿಯಲ್ಲಿನ ಝಾಕಿಯಾ ವಸತಿ ಸಂಕೀರ್ಣದಲ್ಲಿ ಗಲಭೆಕೋರರಿಂದ ಹತ್ಯೆಗೀಡಾಗಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿಯವರು ದೂರು ನೀಡಿದ ಹಿನ್ನೆಲೆಯಲ್ಲಿ ಸಿಟ್ ತನಿಖೆ ನಡೆಸಿತ್ತು. ಪೊಲೀಸರು ಸೊಸೈಟಿ ದಾಳಿಕೋರರನ್ನು ತಡೆಯದಂತೆ ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ಮೋದಿ ನೋಡಿಕೊಂಡಿದ್ದರು ಎನ್ನುವುದು ಜಾಫ್ರಿ ಆರೋಪವಾಗಿತ್ತು.
ಈ ಸಂಬಂಧ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿರುವ ಸಿಟ್, ಗೋದ್ರೋತ್ತರ ಹಿಂಸಾಚಾರದ ಸಂದರ್ಭದಲ್ಲಿ ಹತ್ಯೆಯಾದ ಕಾಂಗ್ರೆಸ್ ಸಂಸದನ ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ. ಇದರಲ್ಲಿ ಮೋದಿಯವರು ಉದ್ದೇಶಪೂರ್ವಕವಾಗಿ ಪೊಲೀಸರನ್ನು ತಡೆದಿದ್ದಾರೆ ಎಂಬ ಬಗ್ಗೆ ಯಾವುದೇ ಮಹತ್ವದ ಪುರಾವೆಗಳು ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.
ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ಸಿಟ್ ತನಿಖಾ ತಂಡಕ್ಕೆ 2009ರ ಏಪ್ರಿಲ್ 27ರಂದು ಈ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಮುಖ್ಯಮಂತ್ರಿ ಮೋದಿ, ಸಂಪುಟ ಸಚಿವರು, ಪೊಲೀಸರು ಮತ್ತು ಅಧಿಕಾರಿಗಳು ಯಾವುದೇ ಜಾತಿ ಮತ್ತು ಧರ್ಮಗಳನ್ನು ಆಧರಿಸದೆ ಸಾರ್ವಜನಿಕರು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಿಲ್ಲ. ಗೋದ್ರೋತ್ತರ ಹಿಂಸಾಚಾರದಲ್ಲಿ ಇವರು ಗಲಭೆಕೋರರನ್ನು ತಡೆಯುವ ಬದಲು, ಪೊಲೀಸರನ್ನೇ ತಡೆದಿದ್ದರು. ಈ ಸಂಬಂಧ ಮೋದಿಯವರನ್ನು ವಿಚಾರಣೆ ನಡೆಸಬೇಕು ಎಂದು ಜಾಫ್ರಿ ದೂರಿದ್ದರು.
ಸಿಟ್ ತನ್ನ ವರದಿಯನ್ನು ಕೆಲ ದಿನಗಳ ಹಿಂದೆಯೇ ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಇದು ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ.