ಕಾಂಗ್ರೆಸ್ 'ಕ್ವಟ್ರೋಚ್ಚಿ' ಏಜೆಂಟ್, ಬಿಜೆಪಿ 'ನಕ್ಸಲ್' ಏಜೆಂಟ್!
ನವದೆಹಲಿ, ಶುಕ್ರವಾರ, 3 ಡಿಸೆಂಬರ್ 2010( 10:55 IST )
ಪ್ರತಿಪಕ್ಷಗಳು ಮಾವೋವಾದಿಗಳ ಏಜೆಂಟರು- ಕಾಂಗ್ರೆಸ್; ಆಡಳಿತ ಪಕ್ಷದ ಸದಸ್ಯರು ಕ್ವಟ್ರೋಚ್ಚಿ ಏಜೆಂಟರು- ಬಿಜೆಪಿ; -- ಇದು ಸಂಸತ್ ಬಿಕ್ಕಟ್ಟು ಸತತ 15ನೇ ದಿನಕ್ಕೆ ಕಾಲಿಟ್ಟಿರುವ ಹೊತ್ತಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳಲು ಬಳಸಿಕೊಂಡಿರುವ ಭಾಷೆ.
ಇಂತಹ ತೀಕ್ಷ್ಣ ಟೀಕೆಗೆ ಮೊದಲು ಮುಂದಾಗಿದ್ದು ಕಾಂಗ್ರೆಸ್. ಬಿಜೆಪಿ ತಾನೇನು ಕಡಿಮೆ ಎಂಬಂತೆ ಐತಿಹಾಸಿಕ ಪಕ್ಷದ ನಡೆಯನ್ನೇ ಅನುಸರಿಸಿದೆ.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಜನತೆಯ ಆಶೋತ್ತರಗಳನ್ನು ಬಿಂಬಿಸುತ್ತಿಲ್ಲ ಎಂಬ ಅಪಪ್ರಚಾರ ಮಾವೋವಾದಿಗಳದ್ದು. ಇದನ್ನೇ ನಮ್ಮ ಪ್ರತಿಪಕ್ಷಗಳು ಅನುಸರಿಸುತ್ತಿವೆ. ಸಂಸತ್ ಅಧಿವೇಶನಕ್ಕೆ ಅಡ್ಡಿಯನ್ನುಂಟು ಮಾಡುತ್ತಾ, ಜನತೆಯ ಧ್ವನಿಯನ್ನು ಅಮುಕಲು ಯತ್ನಿಸುತ್ತಿವೆ. ಈ ಪಕ್ಷಗಳು ನಕ್ಸಲರ ಏಜೆಂಟರಂತೆ ವರ್ತಿಸುತ್ತಿವೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಆರೋಪಿಸಿದ್ದರು.
ಇದರಿಂದ ಕ್ಷುದ್ರಗೊಂಡ ಬಿಜೆಪಿ ಪೂರಕ ಪ್ರತಿಕ್ರಿಯೆ ನೀಡಿದೆ. ಅದಕ್ಕಾಗಿ ಕೈಗೆತ್ತಿಕೊಂಡದ್ದು ಬೋಫೋರ್ಸ್ ಹಗರಣವನ್ನು.
ನಾವು ಮಾವೋವಾದಿಗಳ ಏಜೆಂಟರೆಂದು ಕ್ವಟ್ರೋಚ್ಚಿ ಏಜೆಂಟರು ಆರೋಪಿಸುತ್ತಿದ್ದಾರೆ. ಆ ರೀತಿ ಹೇಳಲು ಕ್ವಟ್ರೋಚ್ಚಿ ಏಜೆಂಟರಿಗೆ ಯಾವುದೇ ಹಕ್ಕುಗಳಿಲ್ಲ ಎಂದು ಒಟ್ಟಾವಿಯೋ ಕ್ವಟ್ರೋಚ್ಚಿಯ ಬೋಫೋರ್ಸ್ ಹಗರಣವನ್ನು ಉಲ್ಲೇಖಿಸುತ್ತಾ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದರು.
ಇಟಲಿ ಉದ್ಯಮಿ ಕ್ವಟ್ರೋಚ್ಚಿಯನ್ನು ಕಾಂಗ್ರೆಸ್ ನೇತೃತ್ವದ ಸರಕಾರಗಳು ರಕ್ಷಿಸುತ್ತಾ ಬಂದಿವೆ ಎಂದು ಕೇಸರಿ ಪಕ್ಷ ಈ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ.
ಪಕ್ಷ ರಾಜಕೀಯವನ್ನು ಹೊರತುಪಡಿಸಿದ ರಾಜಕಾರಣಕ್ಕೆ ಮುಂದಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾರ್ಯ ನಿರ್ವಹಿಸಲು ಅವಕಾಶ ನೀಡಿ ಎಂದು ಪ್ರತಿಪಕ್ಷಗಳಿಗೆ ತಿವಾರಿ ಮನವಿ ಮಾಡಿಕೊಂಡಿರುವುದಕ್ಕೆ ಉತ್ತರಿಸಿದ ಜಾವಡೇಕರ್, ನಾವು ಈಗ ಎತ್ತುತ್ತಿರುವ ವಿಚಾರಗಳು ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟವೇ ಹೊರತು ಇನ್ಯಾವ ವಿಚಾರದ್ದೂ ಅಲ್ಲ; ಶೇ.70ರಷ್ಟು ಸಂಸದರು ಜೆಪಿಸಿ ಬೇಡಿಕೆಯನ್ನು ಮುಂದಿಡುವಾಗ ಕಾಂಗ್ರೆಸ್ ಯಾಕೆ ದೂರ ಓಡುತ್ತಿದೆ ಎಂದು ಪ್ರಶ್ನಿಸಿದರು.
ಜೆಪಿಸಿ ತನಿಖೆಯ ಬೇಡಿಕೆಯಿಂದ ದೂರ ಓಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಜೆಪಿಸಿ ಬೇಡಿಕೆಯನ್ನಿಡುತ್ತಿರುವುದು ಪ್ರಜಾಪ್ರಭುತ್ವ. ಕಾಂಗ್ರೆಸ್ ತನ್ನೆಲ್ಲ ವಿವೇಚನೆಗಳನ್ನು ಕಳೆದುಕೊಂಡಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕ ವಿಶ್ಲೇಷಣೆ ನಡೆಸಿದರು.
2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದು, ಕಳೆದ 15 ದಿನಗಳಿಂದ ಕಲಾಪ ನಡೆಯಲು ಅವಕಾಶ ನೀಡಿಲ್ಲ.