ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಭೇಟಿಗೆ ಸೋನಿಯಾ ಭಟ್ಟಂಗಿಗಳ ಅನುಮತಿ ಬೇಕು! (Subramanian Swamy | Manmohan Singh | Sonia Gandhi | Congress)
Bookmark and Share Feedback Print
 
1.76 ಲಕ್ಷ ಕೋಟಿ ರೂಪಾಯಿಗಳ 2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಬಯಲಿಗೆಳೆದ ಜನತಾಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯನ್ನು ಭೇಟಿಯಾಗುವುದರಿಂದ ಹಿಡಿದು, ಕೇಂದ್ರದಲ್ಲಿ ನಡೆಯುವ ಬಹುತೇಕ ಕಾರ್ಯಗಳು ಸೋನಿಯಾ ಗಾಂಧಿ ಭಟ್ಟಂಗಿಗಳ ಅನುಮತಿಯಿಂದಲೇ ನಡೆಯುತ್ತದೆ ಎಂದು ಆರೋಪಿಸಿದ್ದಾರೆ.

ಜತೆಗೆ 2ಜಿ ಹಗರಣದಲ್ಲಿ ಸೋನಿಯಾ ಗಾಂಧಿ ಸಹೋದರಿಯರಾದ ಅನೂಷ್ಕಾ ಮತ್ತು ನಾಡಿಯಾ ಕಮಿಷನ್ ಪಡೆದುಕೊಂಡಿರುವುದು, ಡಿಎಂಕೆ ವರಿಷ್ಠ ಕರುಣಾನಿಧಿಗೂ ಲೂಟಿಯ ಹಣ ಹೋಗಿರುವುದು, ಪ್ರಧಾನಿ ಸಿಂಗ್‌ರನ್ನು ಕೆಳಗಿಳಿಸಲು ಸೋನಿಯಾ ಗಾಂಧಿ ಯತ್ನಿಸುತ್ತಿರುವುದು, ರಾಹುಲ್ ಗಾಂಧಿಯವನ್ನು ಪ್ರಧಾನಿ ಮಾಡಲು ಅಸಾಧ್ಯವಾದರೆ ಎ.ಕೆ. ಆಂಟನಿಯನ್ನು ಮೇಲೆ ತರುವುದು, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಜೆಪಿಸಿ ತನಿಖೆಗೆ ಹಿಂದೇಟು ಹಾಕುತ್ತಿರುವುದರ ಹಿಂದಿನ ಕಾರಣಗಳು -- ಹೀಗೆ ಹತ್ತು ಹಲವು ಆರೋಪಗಳನ್ನು ಮಾಧ್ಯಮವೊಂದರ ಸಂದರ್ಶನದಲ್ಲಿ ಸುಬ್ರಮಣ್ಯನ್ ಸ್ವಾಮಿ ಬತ್ತಳಿಕೆಯಿಂದ ಹೊರ ಬಂದಿವೆ.

ಪ್ರಧಾನಿಯನ್ನು ರಕ್ಷಿಸಿದ್ದೆ...
ನೀವು ನನ್ನನ್ನು ಸಮಸ್ಯೆಗಳನ್ನು ಸೃಷ್ಟಿಸುವ ಮನುಷ್ಯ ಎಂದು ಕರೆಯಬಹುದು. ಆದರೆ ನಾನು ಹಲವರಿಗೆ ಸಹಕಾರ ನೀಡಿದ್ದೇನೆ. ಸ್ವತಃ ಮನಮೋಹನ್ ಸಿಂಗ್ ಅವರನ್ನೇ ರಕ್ಷಿಸಿದ್ದೇನೆ. ಮಾಧ್ಯಮಗಳು ಸುತ್ತುವರಿದು, ಉತ್ಪ್ರೇಕ್ಷಿತ ವರದಿಗಳನ್ನು ಮಾಡತೊಡಗಿದಾಗ ಇಂತಹ ಸಾಹಕ್ಕೆ ಕೈ ಹಾಕಿದೆ.

ದೂರಸಂಪರ್ಕ ಸಚಿವ (ಈಗ ಮಾಜಿ) ಎ. ರಾಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ನಾನು ಕೇಳಿದ್ದ ಅನುಮತಿಗೆ ಒಪ್ಪಿಗೆ ಸೂಚಿಸಲು ಪ್ರಧಾನಿ ಸಿಂಗ್ ನನ್ನ ಜಾಗದಲ್ಲಿ ಕುಳಿತಿದ್ದಾರೆ ಎಂದು ಹೇಳಿದ್ದೆ. ಅವರ ಸುತ್ತ ಇರುವವರು ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಸಿಂಗ್‌ಗೆ ಕಾನೂನು ಜ್ಞಾನ ಇಲ್ಲ ಮತ್ತು ಅದನ್ನು ಅವರಿಂದ ನಾನು ನಿರೀಕ್ಷೆಯೂ ಮಾಡುವುದಿಲ್ಲ.
PTI

ಆಂಟನಿಗೆ ಪ್ರಧಾನಿ ಪಟ್ಟ?
ಈಗ ಕಾಂಗ್ರೆಸ್‌ನಲ್ಲಿನ ಪ್ರಮುಖರು ಸಂಯಮ ಕಳೆದುಕೊಂಡಿದ್ದಾರೆ. ಅವರು (ಸೋನಿಯಾ ಗಾಂಧಿ) ನನ್ನ ಮೂಲಕ ಮನಮೋಹನ್ ಸಿಂಗ್ ಅವರನ್ನು ಉರುಳಿಸಲು ಬಯಸುತ್ತಿದ್ದಾರೆ. ಆಕೆಗೆ ಸಿಂಗ್‌ಗಿಂತಲೂ ಹೆಚ್ಚು ತಲೆ ಬಾಗುವವರು ಬೇಕಾಗಿದ್ದಾರೆ. ಸಿಂಗ್ ಸಾಕಷ್ಟು ವಿಧೇಯರಾಗಿದ್ದಾರೆ, ಆದರೆ ಸೋನಿಯಾ ಇದರಿಂದ ಸಂತೃಪ್ತರಾಗಿಲ್ಲ.

ಹಾಗಾಗಿ ಅವರ ಮುಂದಿರುವ ಮೊದಲ ಹೆಸರು ರಾಹುಲ್ ಗಾಂಧಿ. ಅವರನ್ನು ಪ್ರಧಾನಿಯನ್ನಾಗಿ ಮಾಡಲು ಸಾಧ್ಯವಾಗದೇ ಇದ್ದರೆ ಆಗ ರಕ್ಷಣಾ ಸಚಿವ ಎ.ಕೆ. ಆಂಟನಿಯವರು ಸೋನಿಯಾಗೆ ಹೆಚ್ಚು ಆಪ್ತವೆನಿಸಬಹುದು.

ಹಣ ಮಾಡಿದ್ದು ಸೋನಿಯಾ...
ಪ್ರಧಾನಿ ಮನಮೋಹನ್ ಸಿಂಗ್ ಪ್ರಾಮಾಣಿಕ. ಆದರೆ ಸುತ್ತ ಇರುವ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ. ನಾಯರ್ ಮತ್ತು ಸಂಪುಟ ಕಾರ್ಯದರ್ಶಿ ಪುಲೋಕ್ ಚಟರ್ಜಿಯವರು ಸಿಂಗ್ ಜತೆಗಿಲ್ಲ. ಅವರೆಲ್ಲ ಸೋನಿಯಾ ಗಾಂಧಿಯಿಂದ ನೇಮಕಗೊಂಡವರು. ನಿಮಗೆ ಪ್ರಧಾನಿಯವರ ಅಪಾಯಿಂಟ್‌ಮೆಂಟ್ ಬೇಕಿದ್ದರೆ, ನೀವು ಪ್ರಧಾನಿಯನ್ನು ಭೇಟಿಯಾಗಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುವುದು ಸೋನಿಯಾ ಮಂದಿ.

ಪ್ರಧಾನಿ ಸಿಂಗ್ ಒಂದು ವೇಳೆ ರಾಜೀನಾಮೆ ನೀಡಿದರೆ ಅದರಿಂದ ತೊಂದರೆಯೇ ಹೆಚ್ಚು. ಪ್ರಸಕ್ತ ಹಣ ಮಾಡಿಕೊಂಡಿರುವ ಸೋನಿಯಾ ಗಾಂಧಿ ಮತ್ತು ಡಿಎಂಕೆ ವರಿಷ್ಠ ಎಂ. ಕರುಣಾನಿಧಿಯವರು ಮತ್ತಷ್ಟು ಬಲಗೊಳ್ಳಬಹುದು.

ಎ. ರಾಜಾ ಕೇವಲ ಮುಖವಾಡ. ಅದರ ಹಿಂದಿರುವ ನಿಜವಾದ ಸೂತ್ರಧಾರಿಗಳು ಡಿಎಂಕೆಯ ದೊಡ್ಡ ನಾಯಕರು. 2ಜಿ ಹಗರಣದಲ್ಲಿ ರಾಜಾ ಪಡೆದುಕೊಂಡದ್ದು ಶೇ.10 ಮಾತ್ರ. ಕರುಣಾನಿಧಿ ಶೇ.30 ಹಾಗೂ ಸೋನಿಯಾ ಸಹೋದರಿಯರಾದ ಅನೂಷ್ಕಾ ಮತ್ತು ನಾಡಿಯಾ ಶೇ.60 ಲೂಟಿ (18,000 ಕೋಟಿಯಂತೆ ಒಟ್ಟು 36,000 ಕೋಟಿ ರೂ.) ಮಾಡಿದ್ದಾರೆ.

ಇದನ್ನೂ ಓದಿ: ಹಗರಣದಲ್ಲಿ ಸೋನಿಯಾ ಗಾಂಧಿ & ಇಟಲಿ ಫ್ಯಾಮಿಲಿ ಪಾಲು?

ನನ್ನನ್ನು ಖರೀದಿಸಲು ಅಸಾಧ್ಯ...
ಎಲ್ಲವೂ ಸರಾಗವಾಗಿ ಸಾಗಿದರೆ ರಾಜಾಗೆ ಶೀಘ್ರದಲ್ಲೇ ಬಂಧನ ವಾರೆಂಟ್ ಸಿಗಬಹುದು. ವಿವಾದಿತ ಪರವಾನಗಿಗಳು ಕೂಡ ಎರಡು-ಮೂರು ತಿಂಗಳಲ್ಲಿ ರದ್ದಾಗಬಹುದು. ಆದರೆ ದೇಶಕ್ಕೆ ಅಗತ್ಯವಿರುವ ಹಣದ ವಿಚಾರಕ್ಕೆ ಬಂದರೆ ಅದು ಕೆಲ ಕಾಲ ಹಿಡಿಯಬಹುದು.

ಕಪ್ಪು ಹಣವನ್ನು ಅಧಿಕೃತಗೊಳಿಸುವ ಸಂಬಂಧ ವಿಶ್ವಸಂಸ್ಥೆಯ ಜತೆ ನಾವು ಒಪ್ಪಂದವನ್ನು ಹೊಂದಿರುವುದರಿಂದ, ಹಗರಣಗಳ ಕುರಿತು ಎಲ್ಲವನ್ನೂ ತಿಳಿದುಕೊಂಡಿರುವ ಅಮೆರಿಕನ್ನರು ಸಹಕರಿಸಿದ್ದೇ ಆದಲ್ಲಿ ನಾವು ಆ ಹಣವನ್ನು ಮರಳಿ ಪಡೆಯಬಹುದು.

ಕಾಂಗ್ರೆಸ್ ಅಂತ ಹೆಜ್ಜೆಯನ್ನು ಇಡುವುದಿಲ್ಲ ಎಂದು ನನಗೆ ಗೊತ್ತು. ಆದರೆ ನಾನು ಅವರ ಮೇಲೆ ಒತ್ತಡ ಹೇರಬಲ್ಲೆ. ನಾನು ನ್ಯಾಯಾಲಯದಲ್ಲಿ ಏನು ಮಾಡುತ್ತೇನೆ ಎಂಬುದು ಅವರಿಗೆ ಗೊತ್ತು. ಅವರಿಗೆ (ಕಾಂಗ್ರೆಸ್) ನನ್ನ ವಕೀಲರನ್ನು ಖರೀದಿಸಲು ಸಾಧ್ಯವಾಗದು. ಯಾಕೆಂದರೆ ನಾನು ವಕೀಲರನ್ನು ಇಟ್ಟುಕೊಳ್ಳುವುದೇ ಇಲ್ಲ. ಕೋರ್ಟಿನಲ್ಲಿ ನಾನೇ ವಾದ ಮಾಡುತ್ತೇನೆ.

ಜೆಪಿಸಿ ತನಿಖೆ ನಡೆದರೆ ಬಣ್ಣ ಬಯಲು...
ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ 2ಜಿ ಹಗರಣವನ್ನು ಒಪ್ಪಿಸದೇ ಇರಲು ಹಲವು ಕಾರಣಗಳಿವೆ. ಪ್ರಮುಖವಾಗಿರುವುದು ಜೆಪಿಸಿಗೆ ಎಲ್ಲಾ ಹಕ್ಕುಗಳೂ ಇರುತ್ತವೆ ಎನ್ನುವುದು. ಅಲ್ಲದೆ ಸಂಸದರು ಯಾವ ಪ್ರಶ್ನೆಗಳನ್ನು ಎತ್ತಬೇಕು ಎಂದು ನಾನು ಸಲಹೆ ಮಾಡಲು ಆರಂಭಿಸುತ್ತೇನೆ ಎಂಬುದೂ ಅವರಿಗೆ (ಕಾಂಗ್ರೆಸ್) ಗೊತ್ತಿದೆ.

ಅದರಲ್ಲಿ ಪ್ರಮುಖವಾಗಿರುವ ಪ್ರಶ್ನೆ ಸೋನಿಯಾ ಗಾಂಧಿಯ ಸಹೋದರಿಯರು (ಅನೂಷ್ಕಾ ಮತ್ತು ನಾಡಿಯಾ) ಪಡೆದಿರುವ ಹಣದ ಬಗ್ಗೆ. ಜಂಟಿ ಸದನ ಸಮಿತಿಯಲ್ಲಿ ಜಾಣರು ಇದ್ದದ್ದೇ ಆದರೆ, ಅವರು ಸೋನಿಯಾ ಗಾಂಧಿಯನ್ನು ಪ್ರಶ್ನಿಸಬೇಕಾಗುತ್ತದೆ. ಯಾಕೆಂದರೆ ಈ ಕುರಿತ ಮಾಹಿತಿಗಳು ಇರುವುದು ಅವರಲ್ಲಿಯೇ.
ಸಂಬಂಧಿತ ಮಾಹಿತಿ ಹುಡುಕಿ