ಭಾರೀ ತೂಕ ಹೊಂದಿದ್ದಾಳೆ ಎಂದು ಒಂಬತ್ತು ವರ್ಷಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಗಗನಸಖಿಯನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ.
ಆಕೆಯ ವೈದ್ಯಕೀಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ವೈದ್ಯಕೀಯ ಸಮಿತಿಯೊಂದನ್ನು ರಚಿಸಿ, ಎರಡು ತಿಂಗಳೊಳಗೆ ಗಗನಸಖಿಯನ್ನು ಹೊರತು ಪಡಿಸಿದ ಇತರ ಕೆಲಸವನ್ನು ನೀಡುವಂತೆ ನ್ಯಾಯಮೂರ್ತಿ ಪ್ರತಾಪ್ ಕುಮಾರ್ ರಾಯ್ ಮತ್ತು ಎಂ.ಕೆ. ಸಿಂಹ ಅವರನ್ನೊಳಗೊಂಡ ವಿಭಾಗೀಯ ಪೀಠವು ಆದೇಶ ನೀಡಿದೆ.
ಅಲ್ಲದೆ 2001ರಿಂದ ಅನ್ವಯವಾಗುವಂತೆ ಆಕೆಯ ಪೂರ್ತಿ ವೇತನವನ್ನು ಮೂರು ತಿಂಗಳೊಳಗೆ ಏರ್ ಇಂಡಿಯಾ ಪಾವತಿ ಮಾಡಬೇಕು ಎಂದೂ ತನ್ನ ತೀರ್ಪಿನಲ್ಲಿ ಹೇಳಿದೆ.
44ರ ಹರೆಯದ ನೀಪಾ ಧಾರ್ ಅವರನ್ನು ಮಿತಿಗಿಂತ ಹೆಚ್ಚಿನ ತೂಕ ಹೊಂದಿದ್ದಾರೆ ಎಂಬ ಕಾರಣವನ್ನು ಮುಂದೊಡ್ಡಿ 2001ರಲ್ಲಿ ಇಂಡಿಯನ್ ಏರ್‌ಲೈನ್ಸ್ ಕೆಲಸದಿಂದ ವಜಾಗೊಳಿಸಿತ್ತು. ಉದ್ಯೋಗಿಗೆ ಪೂರಕ ಚಿಕಿತ್ಸೆ ನೀಡುವ ಶಿಫಾರಸು ಮಾಡದೆ ಅಥವಾ ಬದಲಿಯಾಗಿ ಗ್ರೌಂಡ್ ಡ್ಯೂಟಿಯನ್ನಾದರೂ ನೀಡದೆ ವಜಾಗೊಳಿಸಿದ್ದರಿಂದ ನೀಪಾ ಕೋರ್ಟ್ ಮೆಟ್ಟಿಲೇರಿದ್ದರು.
ವಿಮಾನ ಆಕಾಶದಲ್ಲಿ ಹಾರಾಡುವ ಸಂದರ್ಭದಲ್ಲಿ ಭೀತಿಯನ್ನೆದುರಿಸುತ್ತಿದ್ದ ನೀಪಾ, ವಿಮಾನಯಾನ ಸಂಸ್ಥೆಯ ವೈದ್ಯರ ಸಲಹೆಯಂತೆ ತೆಗೆದುಕೊಂಡಿದ್ದ ಔಷಧಿಯಿಂದಾಗಿ ದಪ್ಪಗಾಗಿದ್ದರು ಎಂದು ಆಕೆಯ ವಕೀಲೆ ಮಧುಮಿತಾ ರಾಯ್ ಸಂಬಂಧ ಪಟ್ಟ ದಾಖಲೆಗಳನ್ನು ಹೈಕೋರ್ಟಿಗೆ ಸಲ್ಲಿಸಿದ್ದರು.
ಈ ಹಿಂದೆ ಏಕಸದಸ್ಯ ಪೀಠವು, ನೀಪಾ ಅರ್ಜಿಯನ್ನು ತಳ್ಳಿ ಹಾಕಿತ್ತು. ಇಂಡಿಯನ್ ಏರ್‌ಲೈನ್ಸ್ ವಜಾವನ್ನು ನ್ಯಾಯಾಧೀಶರು ಎತ್ತಿ ಹಿಡಿದಿದ್ದರು. ಇದರ ವಿರುದ್ಧ ವಿಭಾಗೀಯ ಪೀಠಕ್ಕೆ ನೀಪಾ ಮೇಲ್ಮನವಿ ಮಾಡಿಕೊಂಡಿದ್ದರು.