ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮೆರಿಕಾ ಅಪಮಾನ; ಮೀರಾ ನಂತರ ಹರ್ದೀಪ್ ಸರದಿ (Meera Shankar | USA | India | Hardeep Puri)
Bookmark and Share Feedback Print
 
ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಖಂಡಿಸುತ್ತಿರುವುದು ಭಾರತದ ಗಡಿಯನ್ನು ದಾಟಿ ಹೋಗುತ್ತಿಲ್ಲವೇನೋ ಎಂಬ ಸಂಶಯ ಹುಟ್ಟುತ್ತಿದೆ. ಮೊನ್ನೆಯಷ್ಟೇ ಸೀರೆಯುಟ್ಟ ಮೀರಾ ಶಂಕರ್ ಅವರನ್ನು ಮೈದಡವಿ ತಪಾಸಣೆ ನಡೆಸಿ ಭಾರತವನ್ನು ಮುಜುಗರಕ್ಕೆ ಸಿಲುಕಿಸಿದ್ದ ಅಮೆರಿಕಾ ಎಂಬ ದೊಡ್ಡಣ್ಣ, ಈಗ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಹರ್ದೀಪ್ ಪುರಿಯವರನ್ನು ಕೂಡ ಅದೇ ರೀತಿ ಅಪಮಾನಿಸಿದೆ.

ಇದನ್ನೂ ಓದಿ: ಸೀರೆಯುಟ್ಟ ಭಾರತೀಯ ರಾಯಭಾರಿಗೆ ಅಮೆರಿಕಾ ಅಪಮಾನ

ಇದರೊಂದಿಗೆ ಭಾರತೀಯ ರಾಯಭಾರಿಗಳನ್ನು ಅಮೆರಿಕಾವು ಟಾರ್ಗೆಟ್ ಮಾಡುತ್ತಿದೆಯೇ ಎಂಬ ಶಂಕೆ ಹೆಚ್ಚಾಗಿದೆ.

ಸತತವಾಗಿ ಭಾರತದ ರಾಯಭಾರಿಗಳು ಸಮಸ್ಯೆ ಎದುರಿಸುತ್ತಿರುವ ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ಈ ಬಾರಿ ಸಂಕಷ್ಟಕ್ಕೆ ಸಿಲುಕಿರುವುದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ರಾಯಭಾರಿ ಹರ್ದೀಪ್ ಪುರಿ.

ಅಮೆರಿಕಾದ ಟೆಕ್ಸಾಸ್ ರಾಜ್ಯದ ಅತಿದೊಡ್ಡ ನಗರವಾಗಿರುವ ಹೌಸ್ಟನ್‌ನಲ್ಲಿನ ಜಾರ್ಜ್ ಬುಷ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹರ್ದೀಪ್ ಪುರಿಯವರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ತೀವ್ರವಾಗಿ ತಪಾಸಣೆಗೊಳಪಡಿಸಿದ್ದಾರೆ.

ತಾನು ರಾಯಭಾರಿ ಎಂಬುದನ್ನು ಮನದಟ್ಟು ಮಾಡಲು ಯತ್ನಿಸಿದರೂ ಕೇಳದ ಅಧಿಕಾರಿಗಳು, ಅರ್ಧಗಂಟೆಗೂ ಹೆಚ್ಚು ಕಾಲ ವಶಕ್ಕೆ ತೆಗೆದುಕೊಂಡು ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ ಅವಮಾನಿಸಿದರು. ಸಿಖ್ಖರಾಗಿರುವ ಹರ್ದೀಪ್ ಅವರ ಪೇಟವನ್ನು ತೆಗೆದು ಈ ಸಂದರ್ಭದಲ್ಲಿ ತಪಾಸಣೆ ನಡೆಸಲಾಯಿತು ಎಂದು ವರದಿಗಳು ಹೇಳಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರಕಾರವು, ಅಮೆರಿಕಾಕ್ಕೆ ಮತ್ತೆ ದೂರು ನೀಡಿದೆ. ವಾಷಿಂಗ್ಟನ್‌ನಲ್ಲಿನ ಭಾರತ ರಾಯಭಾರ ಕಚೇರಿಯು ಅಮೆರಿಕಾದ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಅಮೆರಿಕಾ ಇದುವರೆಗೆ ಕ್ಷಮೆ ಯಾಚನೆ ಅಥವಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣದ ಕುರಿತು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಅಪರಾಹ್ನ ಮಾಧ್ಯಮಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ