ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ಕರೆ ಫೋನ್; ದಿಗ್ವಿಜಯ್ ಸಿಂಗ್ ಸುತ್ತ ಸಂಶಯಗಳ ಹುತ್ತ
(Congress | Digvijay Singh | Hemant Karkare | Mumbai attacks)
ಹಿಂದೂ ಉಗ್ರರ ಕೈವಾಡವಿದೆ ಎಂದು ಮಾಲೆಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರ ಜತೆ, ಅದನ್ನೇ ಪ್ರತಿಪಾದಿಸುತ್ತಾ ಬಂದಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಾತುಕತೆ ನಡೆಸಿದ್ದು ಯಾಕೆ? ಕರ್ಕರೆಯವರ ಪತ್ನಿ ದಿಗ್ವಿಜಯ್ ಆರೋಪಗಳನ್ನು ತಳ್ಳಿ ಹಾಕಿರುವ ಹೊರತಾಗಿಯೂ, 'ಅದೇ ಸರಿ' ಎಂದು ವಾದಿಸುತ್ತಿರುವ ಕಾಂಗ್ರೆಸ್ ನಾಯಕನ ಹಿಂದಿನ ಕರಾಮತ್ತು ಏನು?
PTI
ಮಾಲೆಗಾಂವ್ ಸ್ಫೋಟದಲ್ಲಿ ಹಿಂದೂಗಳನ್ನು ಸಿಲುಕಿಸಲು ಕಾಂಗ್ರೆಸ್ ಸರಕಾರಗಳು ಯತ್ನಿಸಿದ್ದವು ಎನ್ನುವುದು ಹಿಂದಿನಿಂದಲೂ ಕೇಳಿ ಬರುತ್ತಿದ್ದ ಆರೋಪಗಳು. ಅಂತಹ ಸೂಕ್ಷ್ಮ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದ ಕರ್ಕರೆಯವರ ಜತೆ ಆಪ್ತ ಸಂಬಂಧವನ್ನು ಹೊಂದಿದ್ದೆ ಎಂದು ದಿಗ್ವಿಜಯ್ ಹೇಳುತ್ತಿದ್ದಾರೆ. ಹಾಗಾದರೆ ಪ್ರತಿಪಕ್ಷಗಳು ಶಂಕಿಸಿದ್ದು ನಿಜವೇ?
ನನಗೆ ಮತ್ತು ನನ್ನ ಕುಟುಂಬಕ್ಕೆ ಹಿಂದೂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದೆ ಎಂದು ಕರ್ಕರೆಯವರು ತನ್ನ ಪತ್ನಿಯಲ್ಲಿ ಹೇಳಿರಲಿಲ್ಲವೇ? ಪತ್ನಿಯಲ್ಲಿ ಹೇಳಿರದ ವಿಚಾರಗಳನ್ನು ದಿಗ್ವಿಜಯ್ ಜತೆ ಹಂಚಿಕೊಂಡಿದ್ದರೇ? ಅಥವಾ ಸುಳ್ಳು ಸುಳ್ಳೇ ಹೇಳುತ್ತಾ ಇತ್ತೀಚೆಗಷ್ಟೇ ಅಮೆರಿಕಾದ ರಹಸ್ಯ ದಾಖಲೆಗಳು ಹೇಳಿರುವಂತೆ ಪಕ್ಷಕ್ಕೆ ರಾಜಕೀಯ ಲಾಭವನ್ನುಂಟು ಮಾಡಲು ದಿಗ್ವಿಜಯ್ ಯತ್ನಿಸುತ್ತಿದ್ದಾರೆಯೇ?
ಇಂತಹ ಹತ್ತು ಹಲವು ಪ್ರಶ್ನೆಗಳು ದಿಗ್ವಿಜಯ್ ಸಿಂಗ್‌ರನ್ನು ಮುತ್ತಿಕೊಳ್ಳುತ್ತಿವೆ. ಆದರೆ ಅವರು ಮಾತ್ರ ತನ್ನ ಹಿಂದಿನ ಹೇಳಿಕೆಯನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಂಬೈ ದಾಳಿಯಲ್ಲಿ ಬಲಿಯಾದ ಕರ್ಕರೆಯವರ ಜತೆ ನಾನು ನಿಗದಿತ ಸಮಯದಲ್ಲಿ ಮಾತುಕತೆ ನಡೆಸಿಲ್ಲ ಇಲ್ಲ ಎಂಬ ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ್ದಾರೆ. ಈ ಬಗ್ಗೆ ನನ್ನಲ್ಲಿ ದಾಖಲೆಗಳಿವೆ ಎಂದಿದ್ದಾರೆ.
ನಾನು ಕರ್ಕರೆಯವರ ಜತೆ ಮಾತುಕತೆ ನಡೆಸಿಲ್ಲ ಎಂಬ ಮಾತನ್ನು ಸುಳ್ಳು ಎಂದು ತೋರಿಸುವ ದಾಖಲೆಗಳನ್ನು ಸಂಗ್ರಹಿಸಲು ನಾನು ಯತ್ನಿಸುತ್ತಿದ್ದೇನೆ. ಖಂಡಿತಾ ಅದು ಲಭ್ಯವಾಗುತ್ತದೆ ಎಂಬ ಭರವಸೆ ನನ್ನಲ್ಲಿದೆ ಎಂದು ದಿಗ್ವಿಜಯ್ ತಿಳಿಸಿದ್ದಾರೆ.
ನನಗೆ ಹಿಂದೂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದೆ ಎಂದು ಮುಂಬೈ ದಾಳಿಗೆ ಎರಡು ಗಂಟೆಗಳಷ್ಟೇ ಬಾಕಿ ಉಳಿದಿರುವಾಗ ಕರ್ಕರೆಯವರು ನನಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದರು ಎಂದು ದಿಗ್ವಿಜಯ್ ಕೆಲ ದಿನಗಳ ಹಿಂದೆ ಹೇಳಿದ್ದರು.
ಕರ್ಕರೆಯವರನ್ನು ಹಿಂದೂ ಮೂಲಭೂತವಾದಿಗಳು ಕೊಂದೇ ಬಿಟ್ಟರೆ ಎಂದು ಹೇಳಿದ್ದ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ದಿಗ್ವಿಜಯ್, ಅದು ನನ್ನ ಆರಂಭಿಕ ಪ್ರತಿಕ್ರಿಯೆಯಾಗಿತ್ತು. ಆದರೆ ಮುಂಬೈ ದಾಳಿಯ ಹಿಂದೆ ಪಾಕಿಸ್ತಾನಿ ಶಕ್ತಿಗಳು ಇರುವುದರ ಬಗ್ಗೆ ನಾನು ಸಂಶಯ ವ್ಯಕ್ತಪಡಿಸಿಲ್ಲ ಎಂದಿದ್ದಾರೆ.
ಅದೇ ಹೊತ್ತಿಗೆ ಬಿಜೆಪಿಯು ಹಿಂದೂ ಮೂಲಭೂತವಾದಿ ಸಂಘಟನೆಗಳನ್ನು ಬೆಂಬಲಿಸುತ್ತಿದೆ ಎಂದೂ ದಿಗ್ವಿಜಯ್ ಆರೋಪಿಸಿದ್ದಾರೆ.
ಮಾಲೆಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಬಂಧನಕ್ಕೊಳಗಾದ ನಂತರ ಎಲ್.ಕೆ. ಅಡ್ವಾಣಿ ಮತ್ತು ರಾಜನಾಥ್ ಸಿಂಗ್ ಅವರು ಪ್ರಧಾನ ಮಂತ್ರಿಯನ್ನು ಭೇಟಿಯಾಗಿದ್ದು ಯಾಕೆ? ಸಾಧ್ವಿಯನ್ನು ರಾಜನಾಥ್ ಜೈಲಿನಲ್ಲಿ ಭೇಟಿಯಾಗಿದ್ದು ಯಾಕೆ? ಅವರು ಪ್ರಧಾನಿಯನ್ನು ಪ್ರಶ್ನಿಸುವ ಮೊದಲು ಇಂತಹ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ದಿಗ್ವಿಜಯ್ ಹೇಳಿಕೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳಲು ನಿರಾಕರಿಸಿದೆ. ಅದು ಪಕ್ಷದ ಹೇಳಿಕೆಯಲ್ಲ ಎಂದಿದೆ. ಇದನ್ನು ದಿಗ್ವಿಜಯ್ ಕೂಡ ಬೆಂಬಲಿಸಿದ್ದಾರೆ. ಈ ವಿಚಾರ ನನ್ನ ಮತ್ತು ಕರ್ಕರೆಯವರ ನಡುವಿನದ್ದೇ ಹೊರತು, ಕಾಂಗ್ರೆಸ್ಸಿನದ್ದಲ್ಲ ಎಂದಿದ್ದಾರೆ.