ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನ್ಯಾಯಾಧೀಶರಿಗೆ ರಾಜಾ ಬೆದರಿಕೆ ಪ್ರಕರಣಕ್ಕೆ ಹೊಸ ತಿರುವು (A Raja | KG Balakrishnan | HL Gokhale | S Reghupati)
Bookmark and Share Feedback Print
 
ಕ್ರಿಮಿನಲ್ ಪ್ರಕರಣವೊಂದರಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದು ಕೇಂದ್ರದ ಆಗಿನ ಸಚಿವ ಎ. ರಾಜಾ ಎಂಬುದು ತನಗೆ ಗೊತ್ತಿರಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಹೇಳಿರುವುದು ಸುಳ್ಳು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಚ್.ಎಲ್. ಗೋಖಲೆ ಹೇಳಿದ್ದಾರೆ.

ಇದರೊಂದಿಗೆ ಮಾಜಿ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದ್ದಾರೆ.

ಈ ಘಟನೆ ನಡೆಯುವ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಗೋಖಲೆಯವರು ತನ್ನ ಹೇಳಿಕೆಯಲ್ಲಿ, ತಾನು ರಾಜಾ ಹೆಸರನ್ನು ಸ್ಪಷ್ಟವಾಗಿ ತನ್ನ ಪತ್ರದಲ್ಲಿ ನಮೂದಿಸಿ, ಆಗಿನ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಅವರಿಗೆ ಕಳುಹಿಸಿದ್ದೆ ಎಂದು ಹೇಳಿದರು.

ಇದನ್ನೂ ಓದಿ: ಅಂದು ಜಡ್ಜ್‌ಗೆ ಬೆದರಿಕೆ ಹಾಕಿದ್ದು ಕರುಣಾನಿಧಿ ಶಿಷ್ಯ ರಾಜಾ!

ಕೆಲವೇ ದಿನಗಳ ಹಿಂದೆ ಹೇಳಿಕೆ ನೀಡಿದ್ದ ಬಾಲಕೃಷ್ಣನ್, ನ್ಯಾಯಮೂರ್ತಿ ಎಸ್. ರಘುಪತಿ ಪ್ರಕರಣದ ಸಂಬಂಧ ಗೋಖಲೆಯವರು ಕಳುಹಿಸಿದ ವರದಿಯಲ್ಲಿ ಯಾವುದೇ ಕೇಂದ್ರ ಸಚಿವರ ಹೆಸರು ಇರಲಿಲ್ಲ ಎಂದಿದ್ದರು.

ಸುಪ್ರೀಂ ಕೋರ್ಟ್ ಸಿಜೆಐ ಆಗಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ರಘುಪತಿಯವರು ಬರೆದಿದ್ದ ಪತ್ರವನ್ನು ಬಹಿರಂಗಪಡಿಸದೆ, ಮುಚ್ಚಿಟ್ಟಿದ್ದರು ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದ ಬಾಲಕೃಷ್ಣನ್, ಈಗ ಕೇಳಿ ಬಂದಿರುವ ಆರೋಪಗಳು ಖಂಡಿತವಾಗಿಯೂ ಸರಿಯಲ್ಲ ಎಂದು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ್ದರು.

ಇದಕ್ಕೆ ಸ್ಪಷ್ಟವಾಗಿ ತದ್ವಿರುದ್ಧವಾದ ಹೇಳಿಕೆಯನ್ನು ಈಗ, ಆಗಿನ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೋಖಲೆಯವರು ನೀಡಿದ್ದಾರೆ.

ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ನ್ಯಾಯಮೂರ್ತಿ ಗೋಖಲೆ, 'ಮಾಜಿ ಸಿಜೆಐ ನೀಡಿರುವ ಪತ್ರಿಕಾ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಕಳುಹಿಸಿದ ವರದಿಯಲ್ಲಿ ಯಾವುದೇ ಕೇಂದ್ರ ಸಚಿವರ ಹೆಸರು ನಮೂದಾಗಿರಲಿಲ್ಲ ಎಂದಿದ್ದರು. ಅವರಿಗೆ ಗೌರವ ಸಲ್ಲಿಸುತ್ತಾ, ನಾನು ಬರೆದಿರುವ ಪತ್ರದ ಎರಡನೇ ಪ್ಯಾರಾದಲ್ಲಿ ರಾಜಾ ಹೆಸರನ್ನು ನಮೂದಿಸಿದ್ದೆ ಎಂದು ಹೇಳಲು ಬಯಸುತ್ತಿದ್ದೇನೆ. ಇದನ್ನು ಬೇಕಾದರೆ ಪರಿಶೀಲನೆ ನಡೆಸಬಹುದಾಗಿದೆ' ಎಂದು ತಿಳಿಸಿದರು.

ನುಣುಚಿಕೊಳ್ಳುತ್ತಿರುವ ಮಾಜಿ ಸಿಜೆಐ...
ಗೋಖಲೆಯವರ ಹೇಳಿಕೆ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗುತ್ತಿದ್ದಂತೆ ಬಾಲಕೃಷ್ಣನ್ ಹೇಳಿಕೆಗೆ ಪತ್ರಕರ್ತರು ಮುಗಿ ಬಿದ್ದಾಗ, ಯಾವುದೇ ಪೂರಕ ಉತ್ತರಗಳನ್ನು ನೀಡದೆ ಮಾಜಿ ಸಿಜೆಐ ನುಣುಚಿಕೊಂಡಿದ್ದಾರೆ.

ಮದ್ರಾಸ್ ಹೈಕೋರ್ಟಿನ ಆಗಿನ ಮುಖ್ಯ ನ್ಯಾಯಮೂರ್ತಿ ಗೋಖಲೆಯವರಿಗೆ ನ್ಯಾಯಮೂರ್ತಿ ರಘುಪತಿಯವರು ಬರೆದಿರುವ ಪತ್ರವದು. ಆ ಪತ್ರದಲ್ಲಿ ಏನಿತ್ತು ಎನ್ನುವುದನ್ನು ನಾನು ಹೇಗೆ ಬಹಿರಂಗಪಡಿಸಲು ಸಾಧ್ಯ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆಯೇ ಸುರಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಅವರು, 'ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ನನಗೆ ನ್ಯಾಯಮೂರ್ತಿ ರಘುಪತಿಯವರು ಯಾವುದೇ ಪತ್ರ ಬರೆದಿರಲಿಲ್ಲ ಎಂದು ನಾನು ಹೇಳಿರುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅವರು ಯಾವುದೇ ಪತ್ರವನ್ನು ನನಗೆ ಬರೆದಿರಲಿಲ್ಲ' ಎಂದರು.
ಸಂಬಂಧಿತ ಮಾಹಿತಿ ಹುಡುಕಿ