ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲವ್ ಮ್ಯಾರೇಜ್ ಆಗಿ ವರ್ಷವಾದ್ರೂ ಮೈ ಮುಟ್ಟಲಿಲ್ಲ, ಯಾಕೆ?
(Woman marries woman | Bhubaneswar | Minati Khatua | Sitakanta Routray)
ಭುವನೇಶ್ವರ, ಶುಕ್ರವಾರ, 17 ಡಿಸೆಂಬರ್ 2010( 11:40 IST )
ರೋಮಿಯೋ-ಜ್ಯೂಲಿಯೆಟ್ ರೀತಿಯಲ್ಲಿ ಪ್ರೀತಿಸಿ, ಹೆತ್ತವರ ವಿರೋಧದ ನಡುವೆಯೂ ಮದುವೆಯಾಗಿ ವರ್ಷವಾದರೂ ಗಂಡನೆಂಬ ಪ್ರಾಣಿ ಯಾಕೆ ಹತ್ತಿರವೂ ಸುಳಿಯುತ್ತಿಲ್ಲ ಎಂದು ಚಿಂತಾಕ್ರಾಂತಳಾಗಿದ್ದ ಹೆಂಡತಿ ಈಗ ಆಘಾತಕ್ಕೊಳಗಾಗಿದ್ದಾಳೆ. ಅದು ತಾನು ಮದುವೆಯಾಗಿದ್ದು ಪುರುಷನನ್ನು ಅಲ್ಲ, ಪುರುಷನಂತೆ ವೇಷ ಧರಿಸಿದ್ದ ಸ್ತ್ರೀಯನ್ನು ಎಂಬುದು ತಿಳಿದ ಬಳಿಕ!
ಇಂತಹದ್ದೊಂದು ವಿಚಿತ್ರ ಪ್ರಸಂಗ ನಡೆದಿರುವುದು ಒರಿಸ್ಸಾದಲ್ಲಿ. ಪತ್ನಿಗೆ ವಿಷಯ ತಿಳಿಯುತ್ತಿದ್ದಂತೆ 'ಪತಿರಾಯ' ನಾಪತ್ತೆಯಾಗಿದ್ದಾನೆ/ಳೆ. ನೂರಾರು ದಿನಗಳಿಂದ ನಿಗೂಢವಾಗಿಯೇ ಉಳಿದಿದ್ದ 'ಧರ್ಮಪತ್ನಿ'ಯ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ -- ಜತೆಗೆ ಮೂರ್ಖಳೆನ್ನುವ ಪಟ್ಟ ಬೇರೆ.
ಒರಿಸ್ಸಾದ ಉಕ್ಕಿನ ನಗರ ಎಂದೇ ಖ್ಯಾತವಾಗಿರುವ ರೂರ್ಕೆಲಾದಲ್ಲಿ ಈ ಘಟನೆ ನಡೆದಿರುವುದು. ಇಲ್ಲಿನ ಪವರ್ ಹೌಸ್ ರೋಡ್ ನಿವಾಸಿಯಾಗಿದ್ದ ಮಿನಾಟಿ ಖುತುವಾ ಎಂಬ 27ರ ಹರೆಯದ ಹುಡುಗಿ ಮತ್ತು ಅದೇ ನಗರದ ಮತ್ತೊಂದು ಭಾಗದ ನಿವಾಸಿ ಸೀತಾಕಾಂತ ರಾವ್‌ತ್ರೆ ಎಂಬವರ 'ದಾಂಪತ್ಯ'ದ ಕಥೆಯಿದು.
ಸ್ಥಳೀಯ ಸರಕಾರೇತರ ಸಂಸ್ಥೆಯೊಂದರಲ್ಲಿ ಮಿನಾಟಿ ಕಚೇರಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಸೀತಾಕಾಂತ ಸೇಲ್ಸ್‌ಮ್ಯಾನ್ ಆಗಿದ್ದ. ಇಬ್ಬರ ಕಚೇರಿಯೂ ಅಕ್ಕಪಕ್ಕದಲ್ಲಿದ್ದುದರಿಂದ ಸಹಜವಾಗಿಯೇ ಹತ್ತಿರವಾಗಿದ್ದರು.
ಇಬ್ಬರೂ ಪರಸ್ಪರ ಇಷ್ಟಪಟ್ಟಿದ್ದರು ಬೇರೆ. ಅದು ಪ್ರೀತಿಗೆ ತಿರುಗಿ ಮದುವೆಯ ಹಂತಕ್ಕೆ ಬಂದಾಗ ಮಿನಾಟಿ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೂ ಪಟ್ಟು ಬಿಡದ ಮಿನಾಟಿ-ಸೀತಾಕಾಂತ ದೇವಸ್ಥಾನವೊಂದರಲ್ಲಿ ಮದುವೆಯಾಗೇ ಬಿಟ್ಟರು.
ಮದುವೆಯಾದ ನಂತರ ನಗರದಲ್ಲೇ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ತಮ್ಮ ಸಂಸಾರ ಆರಂಭಿಸಿದ್ದರು. ಆದರೆ ಯಾವತ್ತೂ ಇವರಿಬ್ಬರ ನಡುವೆ ಲೈಂಗಿಕ ಸಂಪರ್ಕ ನಡೆದಿರಲಿಲ್ಲ. ಅದೊಂದು ದೊಡ್ಡ ವಿಚಾರ ಎಂದು ಸ್ವತಃ ಮಿನಾಟಿ ಪರಿಗಣಿಸಿರಲಿಲ್ಲ.
ಇದಕ್ಕೆ ಕಾರಣ ಗಂಡ (?) ಸೀತಾಕಾಂತ ನೀಡಿದ್ದ ಕಾರಣ. ಗಂಡ ಇಂದಲ್ಲ ನಾಳೆ ಮಿಲನ ಮಹೋತ್ಸವ ನಡೆಸುತ್ತಾನೆ ಎಂದು ಕಾದು ಕಾದು ಸುಸ್ತಾಗಿದ್ದ ಮಿನಾಟಿ ಹಲವು ಸಲ ಆತನ ಗಮನವನ್ನು 'ಆ' ಕಡೆಗೆ ಸೆಳೆಯಲು ಯತ್ನಿಸಿದ್ದಳು. ಇದರಿಂದ ಗಲಿಬಿಲಿಗೊಳಗಾಗುತ್ತಿದ್ದ ಗಂಡ, ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ.
ಪುರಿ ದೇವಸ್ಥಾನದಲ್ಲಿ ಪೂಜೆಯೊಂದನ್ನು ಮಾಡುವುದಿದೆ. ಅದುವರೆಗೆ ನಾವು ದೈಹಿಕ ಸಂಪರ್ಕ ಮಾಡುವಂತಿಲ್ಲ. ಬಳಿಕ ಯಾವುದೇ ಸಮಸ್ಯೆಯಿಲ್ಲ. ಅದುವರೆಗೆ ಸುಮ್ಮನಿರು ಎಂದು ಪತ್ನಿಯ ಕೈಗಳನ್ನು ಕಟ್ಟಿ ಹಾಕಿದ್ದ.
ಇದನ್ನು ಮಿನಾಟಿ ಸತ್ಯವೆಂದೇ ನಂಬಿದ್ದಳು. ಇಷ್ಟು ದಿನ ಕಾದವಳಿಗೆ ಇನ್ನು ಸ್ವಲ್ಪ ದಿನ ಕಾಯುವುದರಲ್ಲಿ ತಪ್ಪಿಲ್ಲ ಎಂದುಕೊಂಡಿದ್ದಳು. ಅಲ್ಲದೆ ತನ್ನ ಗಂಡ, ಗಂಡಸು ಅಲ್ಲ ಎಂಬ ಸಂಶಯ ಯಾವತ್ತೂ ಬಂದಿರಲಿಲ್ಲ. ಆತ ಯಾವತ್ತೂ ಗಂಡಸರಂತೆ ಕೂದಲು ಕತ್ತರಿಸಿಕೊಳ್ಳುತ್ತಿದ್ದ, ಬಟ್ಟೆಗಳನ್ನೂ ಅದೇ ರೀತಿಯಾಗಿ ಧರಿಸುತ್ತಿದ್ದ ಎನ್ನುವುದೇ ಇದಕ್ಕೆ ಕಾರಣ.
ಹೀಗೆ ಬರೋಬ್ಬರಿ ಒಂದು ವರ್ಷ ಪತ್ನಿಯನ್ನು ಮೋಸ ಮಾಡಿದ ಸೀತಾಕಾಂತ ರಾವತ್ರೆಯ ಒಳಬಣ್ಣ ಬಯಲಾಗಿದ್ದು ಕೆಲ ದಿನಗಳ ಹಿಂದೆ.
ಮಿನಾಟಿಯ ಮನೆಯವರೇ 'ನಿನ್ನ ಗಂಡ ಗಂಡಸಲ್ಲ' ಎಂದಿದ್ದರು. ಆತನ ಹೆಸರು ಸೀತಾಕಾಂತ ರಾವತ್ರೆ ಅಲ್ಲ, ಸ್ಮುತಿಮೋಯಿ ರಾವತ್ರೆ. ಬೇಕಾದರೆ ಬೇರೆಯವರಲ್ಲಿ ಕೇಳಿ ನೋಡು ಎಂದಾಗ ಮಿನಾಟಿ ಆಘಾತಕ್ಕೊಳಗಾಗಿದ್ದಳು.
ಸುಮ್ಮನಿರದೆ, ಅದುವರೆಗೂ ಹೋಗದೇ ಇದ್ದ ಗಂಡನ ಮನೆಯನ್ನು ಹುಡುಕಿಕೊಂಡು ಹೋಗಿ, ಕೇಳಿದಾಗ ಎಲ್ಲವೂ ಸ್ಪಷ್ಟವಾಯಿತು. ತಾನು ಇದುವರೆಗೆ ಒಂದೇ ಸೂರಿನಲ್ಲಿ ಇದ್ದುದು ಗಂಡಿನ ಜತೆಗಲ್ಲ, ತನ್ನಂತೆ ಇರುವ ಹೆಣ್ಣೊಬ್ಬಳೊಂದಿಗೆ ಎಂಬುದು ತಿಳಿಯಿತು.
ನೇರವಾಗಿ ಇದನ್ನು ತನ್ನ ಗಂಡನಲ್ಲಿ ಪ್ರಸ್ತಾಪಿಸಿದ್ದಾಳೆ, ಜಗಳ ಮಾಡಿದ್ದಾಳೆ. ಇದನ್ನೆಲ್ಲ ನಿರೀಕ್ಷಿಸದೇ ಇದ್ದ ಸ್ಮುತಿಮೋಯಿ, ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡು ಕ್ಷಮೆ ಕೇಳಿದ್ದಳು.
ತನ್ನ ಪತ್ನಿ ಪೊಲೀಸರಿಗೂ ದೂರು ನೀಡಬಹುದೆಂದು ಹೆದರಿದ ಸ್ಮುತಿಮೋಯಿ ತಕ್ಷಣವೇ ನಾಪತ್ತೆಯಾಗಿದ್ದಾಳೆ. ತನಿಖೆ ನಡೆಸಿರುವ ಪೊಲೀಸರ ಪ್ರಕಾರ ಮಿನಾಟಿಗೆ ಸ್ಮುತಿಮೋಯಿ ಮೋಸ ಮಾಡಿದ್ದಾಳೆ. ತನ್ನ ಪತ್ನಿ ಎಂದು ಬ್ಯಾಂಕಿನಲ್ಲಿ ಹೇಳಿ, ಮಿನಾಟಿಯ ಹೆಸರಿನಲ್ಲಿ ಎರಡು ಸಾಲಗಳನ್ನು ಪಡೆದಿದ್ದಾಳೆ.