ಹಿಂದೂಗಳು ಉಗ್ರರೆನ್ನಲು ಕಾಂಗ್ರೆಸ್‌ನಲ್ಲಿ ಸ್ಪರ್ಧೆ: ಆರೆಸ್ಸೆಸ್
ನವದೆಹಲಿ, ಶುಕ್ರವಾರ, 17 ಡಿಸೆಂಬರ್ 2010( 16:20 IST )
ಹಿಂದೂ ಸಂಘಟನೆಗಳ ವಿರುದ್ಧ ಘಾತುಕ ಆರೋಪಗಳನ್ನು ಮಾಡಿರುವ ರಾಹುಲ್ ಗಾಂಧಿಯ ಕಿವಿ ಹಿಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಪೈಪೋಟಿ ಏರ್ಪಟ್ಟಿದೆ ಎಂದು ಕುಟುಕಿದೆ.
ಜಿಹಾದಿ ಭಯೋತ್ಪಾದನೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಲು ಮತ್ತು ಈ ದೇಶದ ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಕಾಂಗ್ರೆಸ್ ಹಿರಿಯ ನಾಯಕತ್ವದಲ್ಲಿ ಸ್ಪರ್ಧೆ ಏರ್ಪಟ್ಟಿರುವುದು ಆಘಾತಕಾರಿ ವಿಚಾರ ಎಂದು ಆರೆಸ್ಸೆಸ್ ನಾಯಕ ರಾಮ್ ಮಾಧವ್ ಆರೋಪಿಸಿದ್ದಾರೆ.
ಲಷ್ಕರ್ ಇ ತೋಯ್ಬಾದಂತಹ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳಿಗಿಂತ ಭಾರತಕ್ಕೆ ಹಿಂದೂ ತೀವ್ರವಾದಿಗಳೇ ಹೆಚ್ಚು ಅಪಾಯಕಾರಿ ಎಂದು ರಾಹುಲ್ ಗಾಂಧಿ ಅಮೆರಿಕಾ ರಾಯಬಾರಿ ತಿಮೋತಿ ರೋಮರ್ ಜತೆಗಿನ ಮಾತುಕತೆ ಸಂದರ್ಭದಲ್ಲಿ ಹೇಳಿದ್ದರು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.
ವಿದೇಶಿ ರಾಯಭಾರಿಯೊಬ್ಬನ ಜತೆ ಭಾರತದ ಆಂತರಿಕ ವಿಚಾರಗಳನ್ನು ಈ ರೀತಿಯಾಗಿ ಮಾತನಾಡಿರುವುದು ಆಘಾತಕಾರಿ ವಿಚಾರ. ಈ ದೇಶದಲ್ಲಿ ನಾಳೆ ಏನೇನೋ ಆಗಬೇಕೆಂದು ಅಂದುಕೊಂಡಿರುವ ವ್ಯಕ್ತಿಯೊಬ್ಬ ಭಾರತದ ರಾಜತಾಂತ್ರಿಕ ವಿಚಾರಗಳ ಮತ್ತು ವಾಸ್ತವತೆಯ ಕುರಿತ ಅಜ್ಞಾನ ಹೊಂದಿರುವುದನ್ನು ಇದು ತೋರಿಸುತ್ತದೆ ಎಂದು ಮಾಧವ್ ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿಯವರು ಹಿಂದೂಗಳ ವಿರುದ್ಧ ಸ್ವೇಚ್ಚಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದೂ ಆರೆಸ್ಸೆಸ್ ನಾಯಕ ಆಪಾದಿಸಿದರು.
ಕಾಂಗ್ರೆಸ್ ತನ್ನ ಚುನಾವಣಾ ಲಾಭಗಳಿಗಾಗಿ ಧರ್ಮ, ಜಾತಿ ಮತ್ತು ಜನತೆಯ ಭಾವನೆಗಳನ್ನು ಕೆರಳಿಸಲು ಯಾವತ್ತೂ ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ. ಕಾಂಗ್ರೆಸ್‌ನ ಧರ್ಮ ರಾಜಕೀಯದ, ಕೋಮು ರಾಜಕೀಯ ಈಗಲೂ ರಹಸ್ಯವಲ್ಲ ಎಂದು ಅವರು ಟೀಕಿಸಿದರು.