ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶಭಕ್ತಿ ಹೆಸರಲ್ಲಿ ಹಿಟ್ಲರನಂತೆ ಮುಸ್ಲಿಮರ ಹತ್ಯೆ: ದಿಗ್ವಿಜಯ್ (Nazis | BJP | Muslims | Digvijay Singh)
Bookmark and Share Feedback Print
 
ಸರ್ವಾಧಿಕಾರಿ ಹಿಟ್ಲರ್ ಸಂಸ್ಕೃತಿಯನ್ನು ಪೋಷಿಸುತ್ತಿರುವ ಬಿಜೆಪಿ, ರಾಷ್ಟ್ರೀಯತೆ ಹೆಸರಿನಲ್ಲಿ ಮುಸ್ಲಿಮರನ್ನು ಕೊಲ್ಲುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ನ ವಿವಾದಿತ ನಾಯಕ ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿದೆ ಎಂದು ಕಿಡಿ ಕಾರಿದರು.

ಮುಸ್ಲಿಮರ ವಿರುದ್ಧದ ಆರೆಸ್ಸೆಸ್ ಹಗೆತನವನ್ನು ಯೆಹೂದಿಗಳ ವಿರುದ್ಧ ಹಿಟ್ಲರನ ನಾಜಿಗಳು ಹೊಂದಿದ್ದಕ್ಕೆ ಹೋಲಿಸಬಹುದಾಗಿದೆ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಹಿಂದೂಗಳು ಯಾಕೆ ಆರೆಸ್ಸೆಸ್‌ನ ಸದಸ್ಯರಾಗಿದ್ದಾರೆ ಎಂದು ದಿಗ್ವಿಜಯ್ ಪ್ರಶ್ನಿಸಿದರು.

ಇದನ್ನೂ ಓದಿ: ಓಟಿಗಾಗಿ ಕೋಮುವಾದ ಮಾಡುತ್ತಿರುವ ಕಾಂಗ್ರೆಸ್‌: ಅಮೆರಿಕಾ

ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಹಿಂದೂ ಭಯೋತ್ಪಾದಕರು ಮತ್ತು ಆರೆಸ್ಸೆಸ್ ಅಂಗ ಸಂಸ್ಥೆಗಳ ನಡುವಿನ ಸಂಬಂಧಗಳನ್ನು ತನಿಖೆಗೊಳಪಡಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ ಅವರು, ರಾಹುಲ್ ಗಾಂಧಿ ನೀಡಿರುವ ವಿವಾದಿತ ಹೇಳಿಕೆಯನ್ನು ಬೆಂಬಲಿಸಿದರು.

ಆರೆಸ್ಸೆಸ್ ಹೊಸ ಪೀಳಿಕೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಬೀಜ ಬಿತ್ತುತ್ತಿದೆ. ಇದು ಭಾರೀ ಅಪಾಯಕಾರಿಯಾದುದು. ಆರೆಸ್ಸೆಸ್‌ನ ಕಾರ್ಯಕರ್ತರು ರಾಜಕೀಯ ಮತ್ತು ಸೈನ್ಯಕ್ಕೂ ಸೇರಿದ್ದಾರೆ. ಮಾಲೆಗಾಂವ್, ಮೆಕ್ಕಾ ಮಸೀದಿ, ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟಗಳ ಹಿಂದೆ ಆರೆಸ್ಸೆಸ್ ಇರುವುದು ಸ್ಪಷ್ಟವಾಗಿದೆ. ಇಲ್ಲಿ ಬಂಧಿತರಾಗಿರುವವರೆಲ್ಲರೂ ಆರೆಸ್ಸೆಸ್‌ಗೆ ಸೇರಿದವರು ಎಂದು ದಿಗ್ವಿಜಯ್ ಆಪಾದಿಸಿರು.

ಸಮಸ್ತ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಅಯೋಧ್ಯೆ ವಿಚಾರವನ್ನೂ ಕಾಂಗ್ರೆಸ್ ನಾಯಕ ಪ್ರಸ್ತಾಪಿಸಿದರು.

ಬಾಬ್ರಿ ಮಸೀದಿ ಧ್ವಂಸ ಭಾರತದ ಇತಿಹಾಸದಲ್ಲೇ ಅತಿದೊಡ್ಡ ಕಪ್ಪು ಚುಕ್ಕೆ. ಇದು ಖಂಡನೀಯ ಎಂದರು. ಅಲ್ಲದೆ ಅಜ್ಮೀರ್ ಸ್ಫೋಟದ ರೂವಾರಿ ಆರೆಸ್ಸೆಸ್‌ನ ಸುನಿಲ್ ಜೋಷಿಯ ಹತ್ಯಾ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸಿರುವ ಕೇಂದ್ರದ ಕ್ರಮವನ್ನು ಪ್ರಶಂಸಿಸಿದರು.

ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳ ಜತೆಗೆ ಭಯೋತ್ಪಾದಕರು ಹೊಂದಿರುವ ಸಂಬಂಧಗಳ ಕುರಿತು ತನಿಖೆ ನಡೆಸಬೇಕೆಂಬ ನಿರ್ಣಯದ ಕುರಿತು ಮಾತನಾಡಿದ ಅವರು, ಬಿಜೆಪಿ ಹೇಳುತ್ತಾ ಬಂದಿರುವ 'ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ, ಆದರೆ ಎಲ್ಲಾ ಭಯೋತ್ಪಾದಕರು ಮುಸ್ಲಿಮರು' ಎಂಬ ವಾಕ್ಯವನ್ನು ನೆನಪಿಸಿದರು. ಅಲ್ಲದೆ ಈ ಹೇಳಿಕೆಯನ್ನು ನೀಡುತ್ತಾ ಬಂದಿರುವ ಬಿಜೆಪಿ ಎಂದೂ ಸುಸ್ತಾಗಿಲ್ಲ ಎಂದು ಛೇಡಿಸಿದರು.

ಇದೇ ತತ್ವವನ್ನು ನಾವು ಹಿಂದೂ ಭಯೋತ್ಪಾದಕರ ಕುರಿತೂ ಹೇಳಬಹುದೇ? ಎಲ್ಲಾ ಹಿಂದೂಗಳು ಭಯೋತ್ಪಾದಕರಲ್ಲ ಎಂದು ನಾವು ಕರೆಯಬಹುದೇ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಶ್ನಿಸಿದರು.

ರಾಹುಲ್ ಗಾಂಧಿ ಹಿಂದೂಗಳ ವಿರುದ್ಧ ನೀಡಿದ್ದ ಹೇಳಿಕೆಯಿಂದ ಎದ್ದಿರುವ ಜನಾಕ್ರೋಶದ ಕೆಸರನ್ನು ತೊಳೆದುಕೊಳ್ಳುವ ನಿಟ್ಟಿನಲ್ಲಿ ಆ ವಿಚಾರವನ್ನು ಬದಿಗೊತ್ತಿ ದಿಗ್ವಿಜಯ್ ಸಿಂಗ್‌ರನ್ನು ಆರೆಸ್ಸೆಸ್-ಬಿಜೆಪಿ ವಿರುದ್ಧ ಸೋನಿಯಾ ಗಾಂಧಿ ಛೂ ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ನಾಜಿಗಳಿಗೆ ಹೋಲಿಸಬೇಡಿ: ಇಸ್ರೇಲ್
ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆಗೆ ಇಸ್ರೇಲ್ ಖಾರವಾಗಿ ಪ್ರತಿಕ್ರಿಯಿಸಿದೆ. 60 ಲಕ್ಷಕ್ಕೂ ಹೆಚ್ಚು ಯೆಹೂದಿಗಳ ಹತ್ಯಾಕಾಂಡ ನಡೆಸಿರುವ ನಾಜಿಗಳಿಗೆ ಬೇರೆ ಯಾರನ್ನೂ ಹೋಲಿಸಲಾಗದು ಎಂದು ಹೇಳಿದೆ.

ವಿಶ್ವದ ಏಕೈಕ ಯೆಹೂದಿ ರಾಷ್ಟ್ರವಾಗಿರುವ ಇಸ್ರೇಲ್‌ನ ಭಾರತದ ರಾಯಭಾರ ಕಚೇರಿಯಿಂದ ಇಂತಹ ಹೇಳಿಕೆ ಹೊರ ಬಿದ್ದಿದೆ. ಲಕ್ಷಾಂತರ ಮಂದಿ ಯೆಹೂದ್ಯರನ್ನು ಕೊಂದಿರುವ ಹಿಟ್ಲರನ ನಾಜಿಗಳು ಸರಿಗಟ್ಟುವ ಕ್ರೂರಿಗಳು ಜಗತ್ತಿನಲ್ಲೇ ಬೇರೆ ಯಾರೂ ಇರಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಅದು ಪ್ರತಿಕ್ರಿಯಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ