ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಬಿಐ ಸಮನ್ಸ್ ನೀಡಿದ ಬೆನ್ನಿಗೆ ಆಸ್ಪತ್ರೆ ಸೇರಿದ ರಾಜಾ! (2G scam | CBI | A Raja | Sonia Gandhi)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಬೃಹತ್ ಹಗರಣ ತನಿಖೆ ಮಹತ್ವದ ತಿರುವು ಪಡೆದುಕೊಂಡಿದೆ. ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ವಿಚಾರಣೆಗೆ ಹಾಜರಾಗುವಂತೆ ಕೇಂದ್ರೀಯ ತನಿಖಾ ದಳ ಸೋಮವಾರ ನೊಟೀಸ್ ನೀಡಿದೆ. ಇದರ ಬೆನ್ನಿಗೆ ಅನಾರೋಗ್ಯದ ನಾಟಕಕ್ಕೆ ಚಾಲನೆ ನೀಡಿರುವ ರಾಜಾ, ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾರತೀಯ ಅಪರಾಧ ದಂಡ ಸಂಹಿತೆಯ 160ನೇ ಪರಿಚ್ಛೇದದ ಅಡಿಯಲ್ಲಿ ರಾಜಾಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶ ನೀಡಲಾಗಿದೆ. ಆದರೆ ನಿರ್ದಿಷ್ಟ ದಿನಾಂಕವನ್ನು ಸೂಚಿಸಿರುವ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ.

ಇದನ್ನೂ ಓದಿ: ಹಗರಣದಲ್ಲಿ ಸೋನಿಯಾ ಗಾಂಧಿ & ಇಟಲಿ ಫ್ಯಾಮಿಲಿ ಪಾಲು?

ಸಿಬಿಐ ನೊಟೀಸ್ ನೀಡಿರುವುದು ಖಚಿತವಾಗುತ್ತಿದ್ದಂತೆ ರಾಜಾ ಅವರು ಚೆನ್ನೈನಲ್ಲಿನ ಅಪೋಲೋ ಆಸ್ಪತ್ರೆಗೆ ಅನಾರೋಗ್ಯದ ನೆಪವೊಡ್ಡಿ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ ಅವರು ತನ್ನನ್ನು ಸಿಬಿಐ ಬಂಧಿಸದಂತೆ ನಿರೀಕ್ಷಣಾ ಜಾಮೀನಿಗೆ ಯತ್ನಿಸುತ್ತಿದ್ದಾರೆ. ಬುಧವಾರ ಅವರು ಸಿಬಿಐ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರಾಜಾ ಅವರಿಗೆ ಸಮನ್ಸ್ ಜಾರಿಗೊಳಿಸಿದ ಬೆನ್ನಿಗೆ, ರಾಡಿಯಾಗೂ ಹಗರಣ ಸಂಬಂಧ ನೊಟೀಸ್ ನೀಡಲು ಸಿಬಿಐ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಸಿಬಿಐ ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿರುವ ರಾಜಾ ಇಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ. ಕರುಣಾನಿಧಿಯವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.

ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್, ರಾಜಾ ಆಪ್ತರಾದ ಆರ್.ಕೆ. ಚಂದೋಲಿಯಾ ಮತ್ತು ಎ.ಕೆ. ಶ್ರೀವಾತ್ಸವ, ರಾಜಾ ಸಹೋದರ ಅಂದಿಮುತ್ತು ಕಲಿಯಾಪೆರುಮಾಳ್, ನಕ್ಕೀರನ್ ಸಹ ಸಂಪಾದಕ ಎ. ಕಾಮರಾಜ್ ಮುಂತಾದವರನ್ನು ಸಿಬಿಐ ಇದೇ ವಾರ ವಿಚಾರಣೆಗೆ ಒಳಪಡಿಸಲಿದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸಹೋದರಿಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿರುವ 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಕಳೆದ ಕೆಲವು ದಿನಗಳಿಂದ ರಾಜಾ ಮತ್ತು ಲಾಬಿಗಾರ್ತಿ ನೀರಾ ರಾಡಿಯಾ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದವು.

ಡಿಸೆಂಬರ್ 15ರಂದು ದೆಹಲಿ ಮತ್ತು ತಮಿಳುನಾಡುಗಳಲ್ಲಿನ 34 ಕಡೆಗಳಿಗೆ ದಾಳಿ ನಡೆಸಿದ್ದ ಸಿಬಿಐ, ಹಲವು ಮಂದಿಯನ್ನು ವಿಚಾರಣೆಗೊಳಪಡಿಸಿತ್ತು. ಇದರಲ್ಲಿ ಸಂಸದೆ ಕನಿಮೋಳಿಯವರ ಆಪ್ತರು ಕೂಡ ಸೇರಿದ್ದರು.

ನಾನು ತಪ್ಪಿಸಿಕೊಂಡಿಲ್ಲ: ರಾಜಾ
ನನಗೆ ಸಿಬಿಐ ಬಗ್ಗೆ ಹೆದರಿಕೆಯಿಲ್ಲ. ನಾನೊಬ್ಬ ವಕೀಲ. ಒಬ್ಬ ನ್ಯಾಯವಾದಿಯಾಗಿ ನಾನು ಕಾನೂನಿಗೆ ಬೆಲೆ ಕೊಡುತ್ತೇನೆ. ಖಂಡಿತಾ ಕಾನೂನು ಉಲ್ಲಂಘಿಸುವುದಿಲ್ಲ ಎಂದು ರಾಜಾ ತಿಳಿಸಿದ್ದಾರೆ.

ಅಲ್ಲದೆ ತಾನು ನಿರೀಕ್ಷಣಾ ಜಾಮೀನಿಗೆ ಯತ್ನಿಸುತ್ತಿದ್ದೇನೆ ಮತ್ತು ಈ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದ್ಾರೆ.

ನಾನು ನಿರೀಕ್ಷಣಾ ಜಾಮೀನಿಗೆ ಯತ್ನಿಸುವ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ನಾನು ಆರೋಪಿಯಲ್ಲದ ಕಾರಣ ಆ ಪ್ರಶ್ನೆ ಪ್ರಸಕ್ತ ನನ್ನ ಮುಂದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ