ರಾಹುಲ್ ಗಾಂಧಿ ಶಿಷ್ಯ ಜಾವೇದ್‌ಗೆ ಪಾಕಿಗಳ ಬ್ಲ್ಯಾಕ್‌ಮೇಲ್!
ಮುಂಬೈ, ಭಾನುವಾರ, 26 ಡಿಸೆಂಬರ್ 2010( 16:29 IST )
ರಾಹುಲ್ ಗಾಂಧಿಯವರ 'ಯುವ ಕಾಂಗ್ರೆಸ್' ಕಾರ್ಯಕರ್ತ ಹಾಗೂ ಪಾಕಿಸ್ತಾನದ ಐಎಸ್ಐ ಗೂಢಚರ ಜಾವೇದ್ ಮೊಜಾವಾಲಾನನ್ನು ನವದೆಹಲಿಯಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಮುಂಬೈಯ ವಿಸಾ ಏಜೆಂಟ್ ಆಗಿರುವ ಜಾವೇದ್ ಅಬ್ದುಲ್ ಗಫೂರ್ ಮೊಜಾವಾಲಾ ಪಾಕಿಸ್ತಾನದ ದೆಹಲಿಯಲ್ಲಿನ ರಾಯಭಾರಿಗೆ ಆಗಾಗ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಜಾವೇದ್ ಕೇಳುತ್ತಿದ್ದ ವಿಸಾಗಳನ್ನು ರಾಜತಾಂತ್ರಿಕರು ನೀಡಲು ಒಪ್ಪುತ್ತಿರಲಿಲ್ಲ, ತಿರಸ್ಕರಿಸುತ್ತಿದ್ದರು. ಅದಕ್ಕೆ ನೀಡಲಾಗುತ್ತಿದ್ದ ಕಾರಣ, ಹೇಳಿದ ಕೆಲಸ ಮಾಡುತ್ತಿಲ್ಲ ಎನ್ನುವುದು.
ಪಾಕಿಸ್ತಾನದ ಅಧಿಕಾರಿಗಳು ಹೇಳಿದಂತೆ ಕೇಳದೇ ಇದ್ದರೆ, ಜಾವೇದ್‌ಗೆ ಹೊಟ್ಟೆಗಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಯಾಕೆಂದರೆ ಆತನಿಗಿದ್ದ ಏಕೈಕ ಸಂಪಾದನೆಯ ಮಾರ್ಗ ವಿಸಾ ಏಜೆನ್ಸಿ. ಪಾಕಿಗಳನ್ನು ಧಿಕ್ಕರಿಸಿದ ಕಾರಣಕ್ಕೆ ಹಲವು ವಿಸಾ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಅದೇ ಕಾರಣದಿಂದ ಕೊನೆಗೆ ಅನಿವಾರ್ಯವಾಗಿ ಅವರು ಹೇಳಿದಂತೆ ನಡೆದುಕೊಂಡಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಜಾವೇದ್ ವಿಸಾ ತೆಗೆಸಿಕೊಡುವ ಉದ್ಯೋಗ ಮಾಡುತ್ತಾ ಬಂದಿದ್ದ. ತನ್ನ ಉದ್ಯೋಗದ ಭಾಗವಾಗಿ ಆಗಾಗ ಪಾಕಿಸ್ತಾನ ರಾಯಭಾರ ಕಚೇರಿಗೆ ಹೋಗಿ ಬರುತ್ತಿದ್ದ. ಈ ಸಂದರ್ಭದಲ್ಲಿ ಅದನ್ನು ದುರ್ಬಳಕೆ ಮಾಡಿಕೊಂಡ ಆ ಕಚೇರಿಯ ಇಬ್ಬರು ಅಧಿಕಾರಿಗಳು, ಮಹಾರಾಷ್ಟ್ರದಲ್ಲಿನ ಪ್ರಮುಖ ಸ್ಥಳಗಳ ಪಟ್ಟಿಯನ್ನು ಕೊಡುವಂತೆ ದುಂಬಾಲು ಬಿದ್ದಿದ್ದರು.
ಇದಕ್ಕೆ ಆರಂಭದಲ್ಲಿ ಜಾವೇದ್ ನಿರಾಕರಿಸಿದ್ದ. ಇದನ್ನೇ ಮುಂದಿಟ್ಟುಕೊಂಡ ಅಧಿಕಾರಿಗಳು, ಜಾವೇದ್ ಮೂಲಕ ಸಲ್ಲಿಕೆಯಾಗುತ್ತಿದ್ದ ವಿಸಾ ಅರ್ಜಿಗಳನ್ನು ತಳ್ಳಿ ಹಾಕುತ್ತಿದ್ದರು. ಅವರಿಗೆ ವಿಸಾ ನೀಡಲು ನಿರಾಕರಿಸುತ್ತಿದ್ದರು ಎಂದು ಮುಂಬೈ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ.
ನೀನು ನಮಗಾಗಿ ಕೆಲಸ ಮಾಡಬೇಕು. ಪ್ರಮುಖ ವಿಚಾರಗಳ ಮತ್ತು ಸ್ಥಳಗಳ ಬಗ್ಗೆ ಗೂಢಚರ್ಯೆ ನಡೆಸಬೇಕು. ನಿರ್ದಿಷ್ಟ ರಕ್ಷಣಾ ಸಂಬಂಧಿ ಮಾಹಿತಿಗಳನ್ನು ಕೂಡ ನೀಡಬೇಕು ಎಂದು ಅಧಿಕಾರಿಗಳು ಆತನಿಗೆ ಸೂಚಿಸಿದ್ದರು. ಅನಿವಾರ್ಯವಾಗಿ ಇದನ್ನು ಒಪ್ಪಿಕೊಂಡಿದ್ದ ಜಾವೇದ್, ಈ ಅಧಿಕಾರಿಗಳಿಗೆ ಕೆಲವು ಮಾಹಿತಿಗಳನ್ನು ರವಾನಿಸಿದ್ದ.
ಕಳೆದ ಎರಡು ವರ್ಷಗಳಲ್ಲಿ ಜಾವೇದ್ ಮುಂಬೈಯ ವೆಸ್ಟರ್ನ್ ನಾವಲ್ ಕಮಾಂಡ್, ಪುಣೆ ಜಿಲ್ಲೆಯ ಲೋನಾವ್ಲಾದಲ್ಲಿನ ನೌಕಾ ನೆಲೆ, ಬಾಂದ್ರಾ ವೋರ್ಲಿ ಸೀ ಲಿಂಕ್ ಮತ್ತು ಸತಾರಾ ಜಿಲ್ಲೆಯಲ್ಲಿನ ಕೋಯ್ನಾ ಅಣೆಕಟ್ಟು ಕುರಿತು ಮಾಹಿತಿ ಹಸ್ತಾಂತರಿಸಿದ್ದ. ಅಲ್ಲದೆ ನೌಕಾದಳದ ಅಧಿಕಾರಿಯೊಬ್ಬರಿಂದ ರಕ್ಷಣಾ ಸಂಬಂಧಿ ಮಾಹಿತಿಗಳನ್ನು ಪಡೆಯಲು ವಿಫಲ ಯತ್ನ ನಡೆಸಿದ್ದ.
ದಕ್ಷಿಣ ಮುಂಬೈನಲ್ಲಿನ ಮಜ್ಗಾನ್ ಪ್ರದೇಶದ ಆತನ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು, ರಹಸ್ಯ ಮಿಲಿಟರಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಯುವ ಕಾಂಗ್ರೆಸ್ ಮುಂದಾಳು ರಾಹುಲ್ ಗಾಂಧಿ ಚಾಲನೆ ನೀಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಈ ಜಾವೇದ್ ಕೂಡ ಸೇರ್ಪಡೆಗೊಂಡಿದ್ದ. ಆ ಮೂಲಕ ಕಾಂಗ್ರೆಸ್ ಕಾರ್ಯಕರ್ತನಾಗಿ ಬದಲಾಗಿದ್ದ. ಈತನ ಸಂಬಂಧಿಯೊಬ್ಬರು ಇಲ್ಲೇ ಶಾಸಕರಾಗಿದ್ದರೂ, ಆರೋಪಿಯಿಂದ ಅವರು ದೂರ ಸರಿದಿದ್ದಾರೆ ಎಂದು ವರದಿಗಳು ಹೇಳಿವೆ.