ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್: ಆಜಂ ಖಾನ್
ಇಟಾ, ಸೋಮವಾರ, 27 ಡಿಸೆಂಬರ್ 2010( 12:18 IST )
ಕಾಶ್ಮೀರ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಈಗ, ಕಾಂಗ್ರೆಸ್ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದೆ. ದೇಶದ ಮುಸ್ಲಿಂ ಸಮುದಾಯದವರ ಜನಸಂಖ್ಯಾ ಅನುಪಾತದಂತೆ ಸಂಸತ್ತಿನಲ್ಲಿ ಪ್ರಾತಿನಿಧ್ಯ ನೀಡಲಾಗುತ್ತಿದ್ದ ಎಂದು ಆರೋಪಿಸಿದ್ದಾರೆ.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಐದನೇ ಒಂದು ಭಾಗ. ಆದರೆ ಅದೇ ಅನುಪಾತದಲ್ಲಿ ಅವರಿಗೆ ಸಂಸತ್ತಿನಲ್ಲಿ ಸ್ಥಾನಗಳನ್ನು ನೀಡಲಾಗುತ್ತಿಲ್ಲ. ಆ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಅನ್ಯಾಯ ಎಸಗುತ್ತಿದೆ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.
ನಮ್ಮ ಮತಗಳನ್ನು ಪಡೆದು ನಮಗೆ ಪ್ರಾತಿನಿಧ್ಯ ಕೊಡದೆ ಮೋಸ ಮಾಡುತ್ತಿರುವುದನ್ನು ನಾವು ಮುಸ್ಲಿಮರು ಪ್ರಶ್ನಿಸುತ್ತೇವೆ. ದೆಹಲಿಗೆ ಮೆರವಣಿಗೆಯಲ್ಲಿ ಸಾಗಿ, ಕೇಂದ್ರದ ಮುಂದೆ ಬೇಡಿಕೆ ಇಡುತ್ತೇವೆ ಎಂದರು.
ಮುಸ್ಲಿಮರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಮಟ್ಟವು ತೀರಾ ಕೆಳಮಟ್ಟದಲ್ಲಿದೆ ಎಂದು ಸಾಚಾರ್ ಸಮಿತಿ ವರದಿಯು ಸ್ಪಷ್ಟವಾಗಿ ನಮೂದಿಸಿರುವ ಹೊರತಾಗಿಯೂ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಒಂದೇ ಒಂದು ಶಾಲೆಯನ್ನು ತೆರೆಯದೇ ಇರುವುದು ಮೋಸ ಮಾಡಿದಂತೆ ಎಂದು ಆರೋಪಿಸಿರುವ ಖಾನ್, ತನ್ನ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.
ಈ ದೇಶದಲ್ಲಿನ 200ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಿಗೆ ಸ್ವಂತ ಭೂಮಿಯೇ ಇಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಹೇಳಿದ್ದರು. ಮೊಹಮ್ಮದ್ ಆಲಿ ಜೋಹರ್ ವಿಶ್ವ ವಿದ್ಯಾಲಯವು 200 ಎಕರೆ ಸ್ವಂತ ಭೂಮಿಯನ್ನು ಹೊಂದಿದೆ. ಆದರೂ ಕಾರ್ಯಾರಂಭ ಮಾಡಲು ಅನುಮತಿ ನೀಡಲಾಗಿಲ್ಲ ಎಂದು ಕೇಂದ್ರವನ್ನು ಟೀಕಿಸಿದರು.
ಮುಸ್ಲಿಮರ ಪ್ರದೇಶಗಳಲ್ಲಿ 20,000 ಅಂತರ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕೆಂದು ಸಾಚಾರ್ ಸಮಿತಿ ವರದಿ ಹೇಳಿತ್ತು. ಆ ಸಮಿತಿಯು ಶಿಫಾರಸು ಮಾಡಿದ ಯಾವುದೇ ಅಂಶಗಳನ್ನು ಸರಕಾರ ಜಾರಿಗೆ ತಂದಿಲ್ಲ ಎಂದು ಖಾನ್ ಆಪಾದಿಸಿದರು.