ಹಿಂದೂ ಸಂಘಟನೆಗಳ ವಿರುದ್ಧ ಮತ್ತು ಅದರ ನಾಯಕರ ವಿರುದ್ಧ ಇಲ್ಲದ ಪಿತೂರಿಗಳನ್ನು ನಡೆಸಿದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆದ ಗತಿಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಒದಗಲಿದೆ ಎಂದು ಬೆದರಿಕೆ ಹಾಕಿದ್ದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ವಿರುದ್ಧ ಕಾಂಗ್ರೆಸ್ ಕೇಸು ಹಾಕಿದೆ.
ಮುಂಬೈಯ ಕಾಂಗ್ರೆಸ್ ನಾಯಕರು ಸಹಾಯಕ ಪೊಲೀಸ್ ಆಯುಕ್ತ ಕಲಮಾಕರ್ ಕಿಸಾನ್ ರಾವ್ ಯೆಲಂಬ್ಕರ್ ಅವರನ್ನು ಭೇಟಿ ಮಾಡಿ, ಸಿಂಘಾಲ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರು ನೀಡಿದರು.
ಪ್ರಕರಣದ ಕುರಿತು ತನಿಖೆ ನಡೆಸಿದ ನಂತರ ಪ್ರಕರಣ ದಾಖಲಿಸುವ ಬಗ್ಗೆ ಯೋಚನೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಿಂಘಾಲ್ ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅವರ ಪ್ರತಿಕೃತಿಯನ್ನೂ ದಹಿಸಿದ್ದಾರೆ.
ಸಿಂಘಾಲ್ ನೀಡಿರುವ ಹೇಳಿಕೆಯು ಭಯೋತ್ಪಾದನೆಯನ್ನು ಧ್ವನಿಸುತ್ತದೆ. ದೇಶದಲ್ಲಿ ಶಾಂತಿ ಭಂಗ ಮಾಡಲು ಯಾವುದೋ ಪಿತೂರಿಯನ್ನು ನಡೆಸಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಆದರೆ ಜನ ಪ್ರಬುದ್ಧರಾಗಿದ್ದು, ಇಂತಹ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಶಿಕ್ಷಣ ಸಚಿವ ರಾಜೇಂದ್ರ ದರ್ದಾ ಅಭಿಪ್ರಾಯಪಟ್ಟರು.
ನಾನು ಹಾಗೆ ಹೇಳಿಯೇ ಇಲ್ಲ: ಸಿಂಘಾಲ್ ಸೋನಿಯಾ ವಿರುದ್ಧದ ಹೇಳಿಕೆ ತೀವ್ರ ವಿವಾದಕ್ಕೆ ಈಡಾಗುತ್ತಿರುವಂತೆ ಪ್ಲೇಟ್ ಬದಲಾಯಿಸಿರುವ ಸಿಂಘಾಲ್, ತಾನು ಹಾಗೆ ಹೇಳಿಯೇ ಇಲ್ಲ. ನನ್ನ ಮಾತನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಸೋನಿಯಾ ಬಗ್ಗೆ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಮತ್ತು ತಿರುಚಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಎದುರಾದ ಸ್ಥಿತಿಯೇ ಸೋನಿಯಾ ಗಾಂದಿಗೂ ಎದುರಾಗಬಹುದು ಎಂದು ನಾನು ಹೇಳಿದ್ದೆ. ಅದರ ಅರ್ಥ ತುರ್ತು ಪರಿಸ್ಥಿತಿಯ ನಂತರ ಇಂದಿರಾ ಚುನಾವಣೆಯಲ್ಲಿ ಸೋತಿರುವುದು. ಅದೇ ರೀತಿ ರಾಜಕೀಯದಲ್ಲಿ ಸೋನಿಯಾ ಹಣೆಬರಹ ಬದಲಾಗಬಹುದು ಎಂದು ನಾನು ಹೇಳಿದ್ದೆ ಎಂದು ಸಿಂಘಾಲ್ ತಿಳಿಸಿದ್ದಾರೆ.
ಅಯೋಧ್ಯೆ ತೀರ್ಪು ಅಸ್ವೀಕಾರಾರ್ಹ... ರಾಮ ಜನ್ಮಭೂಮಿಯನ್ನು ಮೂರು ಭಾಗವನ್ನಾಗಿ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಸ್ವೀಕಾರಾರ್ಹವಲ್ಲ ಎಂದು ಸಿಂಘಾಲ್ ಸೋಮವಾರ ತಿಳಿಸಿದ್ದಾರೆ.
ನ್ಯಾಯಾಲಯದ ದಯಪಾಲಿಸಿರುವ ಮೂರನೇ ಒಂದು ಭಾಗದಲ್ಲಿ ಬೃಹತ್ ರಾಮಮಂದಿರವನ್ನು ನಿರ್ಮಿಸುವುದು ಸಾಧ್ಯವಿಲ್ಲ. ಭಾರತೀಯ ಪುರಾತತ್ವ ಇಲಾಖೆಯೇ, ಅಲ್ಲಿ 1528ಕ್ಕೂ ಮೊದಲು ದೇವಸ್ಥಾನ ಇತ್ತು ಎಂಬುದನ್ನು ಖಚಿತಪಡಿಸಿದೆ. ಹಾಗಾಗಿ ಕೋರ್ಟ್ ತೀರ್ಪನ್ನು ನಾವು ಒಪ್ಪುತ್ತಿಲ್ಲ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.