ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಸಮ್ಮತಿಯೊಂದಿಗೆ ದಿಗ್ವಿಜಯ್ ಸಿಂಗ್ ದಿನಕ್ಕೊಂದರಂತೆ ವಿವಾದಿತ ಹೇಳಿಕೆಗಳನ್ನು ಹರಿಬಿಡುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಬಿಜೆಪಿ, ಇಂತಹ ಹೇಳಿಕೆಗಳಿಂದಾಗಿ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಆಕ್ಷೇಪಿಸಿದೆ.
ಇತ್ತೀಚಿನ ದಿನಗಳಲ್ಲಿ ಹಿಂದೂ ಸಮುದಾಯದ ವಿರೋಧಿಯೆಂಬಂತೆ ದಿಗ್ವಿಜಯ್ ಬಾಯ್ತೆರೆದರೆ ವಿವಾದ ಎಂಬ ರೀತಿಯ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಉಗ್ರರ ತವರು ಆಜಂಗಢಕ್ಕೆ ಭೇಟಿ ನೀಡಿದ್ದು, ಬಾಟ್ಲಾ ಹೌಸ್ ಎನ್‌ಕೌಂಟರ್ ಬಗ್ಗೆ ತಕರಾರು, ಮುಂಬೈ ದಾಳಿಯ ಹಿಂದೆ ಪಾಕಿಸ್ತಾನವಿಲ್ಲ ಎಂಬಂತಹ ಹೇಳಿಕೆ, ಹಿಂದೂ ಭಯೋತ್ಪಾದನೆ, ಆರೆಸ್ಸೆಸ್ ವಿರುದ್ಧ ಗಂಭೀರ ಆರೋಪ, ಹೇಮಂತ್ ಕರ್ಕರೆಯವರನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡಿರುವುದು ಸೇರಿದಂತೆ ಹಲವು ವಿವಾದಗಳಲ್ಲಿ ಸಿಲುಕಿದ್ದಾರೆ.
ಮುಸ್ಲಿಂ ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಪರೋಕ್ಷವಾಗಿ ದಿಗ್ವಿಜಯ್ ಮೂಲಕ ಸಮಾಜದ ವಿಭಜನೆ ಮಾಡುತ್ತಿದೆ ಎನ್ನುವುದು ಬಿಜೆಪಿ ಆರೋಪ.
ಈಗ ಅವರ ಹೊಸ ವಿವಾದ ಕರ್ಕರೆಯವರು ಮುಸ್ಲಿಮರಿಗೆ ದೇವರಿದ್ದಂತೆ ಎಂದು ಹೇಳಿರುವುದು. ಇದನ್ನು ಪ್ರಶ್ನಿಸಿರುವ ಬಿಜೆಪಿ, ಕರ್ಕರೆಯವರು ನಿರ್ದಿಷ್ಟ ಸಮುದಾಯವೊಂದಕ್ಕೆ ಹುತಾತ್ಮರೇ? ದಿಗ್ವಿಜಯ್ ಬಳಸುತ್ತಿರುವ ವಿಭಜನೆಯ ಭಾಷೆಗಳಿಗೆ ಕಾಂಗ್ರೆಸ್ ಒಪ್ಪಿಗೆ ಇದೆಯೇ? ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಮ್ಮತಿಯೊಂದಿಗೆ ಇಂತಹ ಹೇಳಿಕೆಗಳು ಅವರಿಂದ ಬರುತ್ತಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.
ಇದೊಂದು ವಿಚಿತ್ರ ಹೇಳಿಕೆ. ಕರ್ಕರೆಯವರು ಈ ದೇಶದ ಹಿಂದೂಗಳಿಗೆ ಏನೂ ಅಲ್ಲ ಎಂಬುದನ್ನು ಹೇಳಲು ದಿಗ್ವಿಜಯ್ ಬಯಸುತ್ತಿದ್ದಾರೆಯೇ? ಒಂದು ಧರ್ಮ ಮಾತ್ರ ಹುತಾತ್ಮನೆಂದು ಗುರುತಿಸಬೇಕು ಎಂದು ಅವರು ಬಯಸುತ್ತಿದ್ದಾರೆಯೇ? ಸಮಾಜದ ವಿಭಜನೆಗೆ ಕಾರಣವಾಗುವ ಇಂತಹ ಹೇಳಿಕೆಗಳನ್ನು ನೀಡಲು ಕಾರಣವೇನು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ಖಾರವಾಗಿ ಪ್ರಶ್ನಿಸಿದ್ದಾರೆ.
ಕರ್ಕರೆಯವರು ಮುಸ್ಲಿಮರಿಗೆ ದೇವರಿದ್ದಂತೆ ಎಂದು ದಿಗ್ವಿಜಯ್ ನೀಡಿರುವ ಇತ್ತೀಚಿನ ಹೇಳಿಕೆ ಸ್ವತಃ ಮುಸ್ಲಿಮರಿಗೆ ಅಪಥ್ಯವೆನಿಸಿದೆ. ಅದು ಸ್ಪಷ್ಟವಾಗುತ್ತಿದ್ದಂತೆ ಮತ್ತೆ ಮಾಧ್ಯಮಗಳ ಮುಂದೆ ಬಂದಿರುವ ಅವರು, ನಾನು ಹೇಳಿದ್ದು ಹಾಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಲವು ಹಿಂದೂ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದ ಮಾಲೆಗಾಂವ್ ಸ್ಫೋಟದ ಆರೋಪಿಗಳನ್ನು ಹೇಮಂತ್ ಕರ್ಕರೆಯವರು ಬಂಧಿಸಿದಾಗ ಮುಸ್ಲಿಮರು ನಿರಾಳತೆ ಅನುಭವಿಸಿದ್ದರು. ಭಯೋತ್ಪಾದನೆಯ ಪ್ರಕರಣಗಳಲ್ಲಿ ಕೇವಲ ಮುಸ್ಲಿಮರು ಮಾತ್ರ ಸಿಕ್ಕಿ ಬೀಳುತ್ತಿರುವ ಹೊತ್ತಿನಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬ ಸಿಕ್ಕಿ ಕಳಂಕ ದೂರ ಮಾಡಲು ಯತ್ನಿಸಿದ್ದಾರೆ ಎಂದು ಅವರು ಭಾವಿಸಿದ್ದರು. ಈ ಕಾರಣದಿಂದ ಕರ್ಕರೆಯವರನ್ನು ಅಪಾರವಾಗಿ ಗೌರವಿಸುತ್ತಿದ್ದ ಮುಸ್ಲಿಮರು, ಅವರು ದೇವರ ದೂತ ಇರಬಹುದೇ ಎಂದುಕೊಂಡಿದ್ದರು ಎಂದಷ್ಟೇ ನಾನು ಹೇಳಿದ್ದೆ ಎಂದು ದಿಗ್ವಿಜಯ್ ಹೇಳಿದ್ದಾರೆ.
ಅತ್ತ ಕಾಂಗ್ರೆಸ್ ಕೂಡ ಎಚ್ಚೆತ್ತುಕೊಂಡಿದೆ. ಯಾವುದೇ ಧರ್ಮದಲ್ಲಿ ಮಾನವನನ್ನು ದೇವರ ಜತೆ ಹೋಲಿಕೆ ಮಾಡಲಾಗದು. ದಿಗ್ವಿಜಯ್ ಸಿಂಗ್ ಬಹುಶಃ ನಾಣ್ಣುಡಿಯನ್ನು ಬಳಸಿರಬಹುದು ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಹೇಳಿದ್ದಾರೆ.