ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಡ್ಕರಿ ಮಗನ ಮದುವೆಗೆ ಯಡ್ಡಿ ಹಣ: ಕಾಂಗ್ರೆಸ್ ಹೈಕಮಾಂಡ್
(Congress | B K Hariprasad | BS Yeddyurappa | Nitin Gadkari)
ಇತ್ತೀಚೆಗಷ್ಟೇ ನಾಗ್ಪುರದಲ್ಲಿ ನಡೆದಿದ್ದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ಮಗನ ಮದುವೆಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾನು ಅಕ್ರಮವಾಗಿ ಗಳಿಸಿದ ಭಾರೀ ಹಣವನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಆರೋಪಿಸಿದೆ.
ಸ್ವಜನ ಪಕ್ಷಪಾತ ಮತ್ತು ಹಗರಣಗಳಲ್ಲಿ ಯಡಿಯೂರಪ್ಪ ಅವರಿಗೆ ಬಹುತೇಕ ಕ್ಲೀನ್ ಚಿಟ್ ಕೊಟ್ಟಿದ್ದ ಗಡ್ಕರಿಯವರ ಮೇಲೆ ಈ ರೀತಿಯಾಗಿ ಹರಿಹಾಯ್ದಿರುವುದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕದವರೇ ಆಗಿರುವ ಬಿ.ಕೆ. ಹರಿಪ್ರಸಾದ್.
ಹಗರಣಗಳು ಮತ್ತು ಸ್ವಜನ ಪಕ್ಷಪಾತ ಎನ್ನುವುದು ಕರ್ನಾಟಕದಲ್ಲಿ ಪ್ರತಿದಿನ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
'ನೈತಿಕವಾಗಿ ಗಡ್ಕರಿಯವರದ್ದು ತಪ್ಪು. ಅವರ ಮಗನ ಮದುವೆಯ ಒಟ್ಟಾರೆ ಸಂಪನ್ಮೂಲಗಳು ಬಂದಿರುವುದು ಯಡಿಯೂರಪ್ಪನವರ ಕಾನೂನು ಬಾಹಿರ ವ್ಯವಹಾರಗಳಿಂದ' ಎಂದು ಗಡ್ಕರಿಯವರ ಭಾಷೆಯಲ್ಲಿಯೇ ಹರಿಪ್ರಸಾದ್ ತಿರುಗೇಟು ನೀಡಿದರು.
ಯಡಿಯೂರಪ್ಪ ಮೀಸಲು ಕೆಟಗರಿಯಿಂದ ಭೂಮಿಯನ್ನು ವಾಪಸ್ ಪಡೆದಿರುವುದು ಮತ್ತು ತನ್ನ ಪುತ್ರನಿಗೆ ಜಮೀನು ಮಂಜೂರು ಮಾಡಿರುವುದು ಕಾನೂನು ಬಾಹಿರವಲ್ಲ, ಆದರೆ ಅನೈತಿಕ ಎಂದು ಗಡ್ಕರಿಯವರು ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡಿದ್ದರು. ಅದಕ್ಕೀಗ ಕಾಂಗ್ರೆಸ್ ಪ್ರತಿದಾಳಿ ನಡೆಸಿದೆ.
ಮುಖ್ಯಮಂತ್ರಿ ಮೇಲೆ ದಾಳಿ ಮುಂದುವರಿಸಿದ ಹರಿಪ್ರಸಾದ್, ಡಿನೋಟಿಫೈ ಮಾಡಿದ ಜಮೀನು ಮತ್ತು ಅವರ ಕುಟುಂಬಕ್ಕೆ ನೀಡಲಾದ ಭೂಮಿಯನ್ನು ವಾಪಸ್ ಮಾಡಿದ ಮಾತ್ರಕ್ಕೆ ಯಡಿಯೂರಪ್ಪನವರನ್ನು ಸುಮ್ಮನೆ ಬಿಡಲಾಗದು ಎಂದರು. ಇದಕ್ಕೆ ಅವರು ಉದಾಹರಣೆ ನೀಡಿದ್ದ ಲೋಕಾಯುಕ್ತವನ್ನು.
ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವವರನ್ನು, ಅಂದರೆ ಅಕ್ರಮವಾಗಿ ಸಂಪಾದನೆ ಮಾಡಿದ ವ್ಯಕ್ತಿಗಳ ವಿರುದ್ಧ ರಾಜ್ಯದ ಲೋಕಾಯುಕ್ತರು ಕ್ರಮ ಕೈಗೊಳ್ಳುತ್ತಾರೆ. ಅಂತವರು ತಮ್ಮ ಆಸ್ತಿಗಳನ್ನು ವಾಪಸ್ ಮಾಡಿದರೆ ಲೋಕಾಯುಕ್ತರು ಅವರನ್ನು ಸುಮ್ಮನೆ ಬಿಟ್ಟು ಬಿಡುತ್ತಾರೆಯೇ ಎಂದು ವಾಸ್ತವ ಸ್ಥಿತಿಯತ್ತ ಬೆಟ್ಟು ಮಾಡಿ ಪ್ರಶ್ನಿಸಿದರು.