ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕ್ವಟ್ರೋಚಿ ವಿಚಾರಣೆ ಬೇಡ: ಕೋರ್ಟಿಗೆ ಸಿಬಿಐ ಮತ್ತೆ ಮೊರೆ (Bofors Gun Deal | CBI | Rajiv Gandhi | Ottavio Quattrocchi | Congress, Sonia Gandhi)
Bookmark and Share Feedback Print
 
ಎರಡು ದಶಕಗಳಷ್ಟು ಹಳೆಯ ಬೋಫೋರ್ಸ್ ಲಂಚ ಹಗರಣದಲ್ಲಿ, ಇಟಲಿಯ ಉದ್ಯಮಿ, ಕಾಂಗ್ರೆಸ್ ಕುಟುಂಬದ ಆಪ್ತ, ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧದ ವಿಚಾರಣೆಯನ್ನು ಕೈಬಿಡುವಂತೆ ಕೇಂದ್ರೀಯ ತನಿಖಾ ಮಂಡಳಿ ಸಿಬಿಐ ಮಂಗಳವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಮುಖಭಂಗ ಅನುಭವಿಸಿರುವ ಸಿಬಿಐ, ಈ ಪ್ರಕರಣದಲ್ಲೂ ಸಾಕ್ಷ್ಯಾಧಾರಗಳಿಲ್ಲ ಎಂದು ಈಗಾಗಲೇ ವರದಿ ಸಲ್ಲಿಸಿತ್ತು ಮತ್ತು ಅದನ್ನು ಈಗ ಸಮರ್ಥಿಸಿಕೊಳ್ಳುವ ಅನಿವಾರ್ಯತೆಯಿಂದ ಈ ಕ್ರಮಕ್ಕೆ ಮುಂದಾಗಿದೆ.

ಆದಾಯ ತೆರಿಗೆ ಪರಮೋಚ್ಚ ಮಂಡಳಿಯು (ಐಟಿಎಟಿ) ಮಂಗಳವಾರ, 1500 ಕೋಟಿ ರೂ.ಗಳ ಬೋಫೋರ್ಸ್ ವ್ಯವಹಾರದಲ್ಲಿ, ಅಂದಿನ ಕಾಂಗ್ರೆಸ್ ಸರಕಾರವು ಕ್ವಟ್ರೋಟಿ ಮತ್ತು ವಿನ್ ಛಡ್ಡಾಗೆ ಕೋಟ್ಯಂತರ ರೂಪಾಯಿ ರೂಪಾಯಿ ಲಂಚ ನೀಡಿತ್ತು ಎಂದು ವರದಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ, ತನಗೆ ಸರಕಾರದಿಂದ ಈ ಕುರಿತು ಯಾವುದೇ ನಿರ್ದೇಶನಗಳಿಲ್ಲ ಎಂದು ಸಿಬಿಐ ತಿಳಿಸಿದೆ.

ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಯಾದವ್ ಎದುರು ವಿಚಾರಣೆ ಆರಂಭವಾಗುತ್ತಿರುವಂತೆಯೇ, ಸಿಬಿಐ ಕ್ರಮವನ್ನು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್ ವಕೀಲ ಅಜಯ್ ಅಗರ್‌ವಾಲ್ ಅವರು, ಇದೀಗ ಐಟಿಎಟಿ ವರದಿ ಬಹಿರಂಗವಾಗಿರುವುದರ ಹಿನ್ನೆಲೆಯಲ್ಲಿ ಬೋಫೋರ್ಸ್ ಲಂಚ ಹಗರಣವನ್ನು ಮರು ತನಿಖೆ ನಡೆಸಬೇಕೆಂಬ ಬೇಡಿಕೆ ಮುಂದಿಟ್ಟರು.

ಸರಕಾರದಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲವಾಗಿರುವುದರಿಂದ 70ರ ಹರೆಯದ ಕ್ವಟ್ರೋಚಿ ವಿರುದ್ಧ ವಿಚಾರಣೆ ನಡೆಸಬೇಕಿಲ್ಲ ಎಂದು ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಪಿ.ಮಲ್ಹೋತ್ರಾ ಕೇಳಿಕೊಂಡರು.

ಆದರೆ, ಐಟಿಎಟಿ ವರದಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರಕಾರವು ಮತ್ತೊಮ್ಮೆ ಅವವೋಕನ ನಡೆಸಲಿದೆ ಎಂದು ಕಾನೂನು ಮಂತ್ರಿ ವೀರಪ್ಪ ಮೊಯ್ಲಿಯವರೇ ಹೇಳಿದ್ದಾರೆ ಎಂದು ಅಗರ್‌ವಾಲ್ ವಾದಿಸಿದರು.

ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ಕೇಸಿಗೆ ಸಂಬಂಧಿಸಿದಂತೆ, ಬದುಕುಳಿದಿರುವ ಏಕೈಕ ಆರೋಪಿ ಕ್ವಟ್ರೋಚಿ ವಿರುದ್ಧ ಕ್ರಿಮಿನಲ್ ಕಲಾಪಗಳನ್ನು ಕೈಬಿಡಬೇಕೆಂದು ಈ ಹಿಂದೆ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಸುಪ್ರೀಂ ಕೋರ್ಟಿನಲ್ಲಿ ಈ ಕೇಸಿನ ವಾದ ಮಾಡುತ್ತಿದ್ದ ಅಗರ್‌ವಾಲ್ ಅವರು, ಕೇಸು ಮುಚ್ಚಿ ಹಾಕುವ ಸಿಬಿಐ ಯತ್ನವನ್ನು ವಿಚಾರಣಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕ್ವಟ್ರೋಚಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ಸಿಬಿಐ ಮತ್ತು ಕೇಂದ್ರ ಸರಕಾರ, ಈ ಕೇಸನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಅವರು ವಾದಿಸಿದ್ದರು.

ಈ ಕೇಸನ್ನು ಮುಚ್ಚಿಬಿಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ ಸಿಬಿಐ, ಇತರೆಲ್ಲಾ ಆರೋಪಿಗಳು ಸಾವನ್ನಪ್ಪಿದ್ದಾರೆ ಅಥವಾ ಅವರ ವಿರುದ್ಧದ ಕೇಸುಗಳನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿರುವುದರಿಂದಾಗಿ, ಕ್ವಟ್ರೋಚಿಯನ್ನು ವಿಚಾರಣೆಗೆ ಹಾಜರುಪಡಿಸುವುದು ಕಷ್ಟ ಎಂದು ವಾದಿಸಿತ್ತು.

ಈ ಮೊದಲು 2003ರಲ್ಲಿ ಮಲೇಷ್ಯಾದಲ್ಲಿ ಹಾಗೂ 2007ರಲ್ಲಿ ಅರ್ಜೆಂಟೀನಾದಲ್ಲಿ ಕ್ವಟ್ರೋಚಿಯನ್ನು ಬಂಧಿಸುವ ಅವಕಾಶವನ್ನು ಸಿಬಿಐ ಕೈಚೆಲ್ಲಿತ್ತು. ಕಳೆದ ನವೆಂಬರ್ ತಿಂಗಳಲ್ಲಿ, ಕ್ವಟ್ರೋಚಿ ವಿರುದ್ಧ ಇಂಟರ್‌ಪೋಲ್ ಹೊರಡಿಸಿದ್ದ ರೆಡ್ ಕಾರ್ನರ್ ನೋಟೀಸನ್ನು ರದ್ದುಗೊಳಿಸುವಂತೆಯೂ ಸಿಬಿಐ ಕೋರಿತ್ತು.

ಹೋವಿಟ್ಜರ್ ತುಪಾಕಿಗಳನ್ನು ಬೋಫೋರ್ಸ್ ಕಂಪನಿಯಿಂದ ಖರೀದಿಸಿದ್ದರಲ್ಲಿ ಅವ್ಯವಹಾರ ನಡೆದಿದ್ದು, ಅದರಲ್ಲಿ ಪ್ರಧಾನವಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಅವರ ಕೌಟುಂಬಿಕ ಗೆಳೆಯ ಕ್ವಟ್ರೋಚಿ ಹೆಸರು ಕೇಳಿಬಂದಿತ್ತು. ಹೀಗಾಗಿ ಕಾಂಗ್ರೆಸ್ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸುಮ್ಮನಿರುವ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ಎತ್ತುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ