ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಜತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿಕಟ ಸಂಬಂಧ ಹೊಂದಿದ್ದರು. ಅಲ್ಲದೆ ಕ್ವಟ್ರೋಚಿ ಆಗಾಗ ಸೋನಿಯಾ ಮನೆಗೆ ಬಂದು ಹೋಗುತ್ತಿದ್ದ. ಸೋನಿಯಾ ವಿದೇಶದ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಶೇಖರಣೆ ಮಾಡಿದ್ದಾರೆ ಎಂದು ಆರೋಪಗಳ ಹೆಸರಿನಲ್ಲಿ ಬಿಜೆಪಿ ನೇರ ವಾಗ್ದಾಳಿ ನಡೆಸಿದೆ.
ಅಸ್ಸಾಂನ ಗುವಾಹತಿಯಲ್ಲಿ ಭಾನುವಾರ ಮುಕ್ತಾಯಗೊಂಡ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕಿಯ ಮೇಲೆ ವಿಧವಿಧ ಪ್ರಹಾರ ಮಾಡಿದರು. ಇಷ್ಟೆಲ್ಲ ಆರೋಪಗಳನ್ನು ಮಾಡಿದ ಹೊರತಾಗಿಯೂ, ಸೋನಿಯಾ ಹೆಸರನ್ನು ಗೊತ್ತುವಳಿಗೆ ಅಂಗೀಕರಿಸಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸ್ವತಃ ಲೋಕಸಭಾ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆಯ ವಿಪಕ್ಷದ ನಾಯಕ ಅರುಣ್ ಜೇಟ್ಲಿ.
PTI
ಭ್ರಷ್ಟಾಚಾರದ ಕುರಿತು ಗೊತ್ತುವಳಿ ಅಂಗೀಕರಿಸುವಾಗ ಸೋನಿಯಾ ಗಾಂಧಿ ಹೆಸರನ್ನು ನೇರವಾಗಿ ಬಳಸುವ ಬದಲು, ಕಾಂಗ್ರೆಸ್‌ನ ಮೊದಲ ಕುಟುಂಬದಿಂದ ಅಧಿಕಾರದ ದುರ್ಬಳಕೆ ಎಂದು ಸೇರಿಸಲಾಗಿದೆ.
ಗೊತ್ತುವಳಿಯಲ್ಲಿ ಸೋನಿಯಾ ಹೆಸರನ್ನು ನೇರವಾಗಿ ಬಳಸುವುದನ್ನು ವಿರೋಧಿಸಿದ ಸುಷ್ಮಾ, ತನ್ನ ಭಾಷಣದಲ್ಲಿ ಸೋನಿಯಾ ಗಾಂಧಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಾಮನ್‌ವೆಲ್ತ್ ಗೇಮ್ಸ್, ಆದರ್ಶ, 2ಜಿ ಮುಂತಾದ ಹಗರಣಗಳಲ್ಲಿ ಅವರು (ಕಾಂಗ್ರೆಸ್ ಮುಖಂಡರು) ಬಲಿಪಶುಗಳನ್ನು (ಸುರೇಶ್ ಕಲ್ಮಾಡಿ, ಅಶೋಕ್ ಚೌಹಾನ್, ಎ. ರಾಜಾ) ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲಿನ ನಾಲ್ಕನೇ ಭೂತ ನೇರವಾಗಿ ಕಾಂಗ್ರೆಸ್ ಅಧ್ಯಕ್ಷೆಯ ಮನೆಯ ದಾರಿಯನ್ನು ತೋರಿಸುತ್ತಿದೆ. ಆ ಕುಟುಂಬದ ಜತೆ ಕ್ವಟ್ರೋಚಿ ಹೊಂದಿದ್ದ ಸಂಬಂಧಗಳ ಬಗ್ಗೆಯೂ ಜನರಿಗೆ ಗೊತ್ತು ಎಂದರು.
ಕೇಸರಿ ಪಕ್ಷದ ವರಿಷ್ಠ ಎಲ್.ಕೆ. ಅಡ್ವಾಣಿ ಮಾತಿನಲ್ಲೂ ಇದೇ ಸುಳಿದು ಹೋಗಿದೆ. 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕ್ವಟ್ರೋಚಿ ಜತೆ ಆಪ್ತ ಸಂಬಂಧ ಹೊಂದಿದ್ದರು. ಆಕೆಯ ಮನೆಗೆ ನಿರಂತರವಾಗಿ ಕ್ವಟ್ರೋಚಿ ಭೇಟಿ ನೀಡುತ್ತಿದ್ದ ಎನ್ನುವುದು ಈಗಾಗಲೇ ಸಾಬೀತಾಗಿದೆ. ಹಾಗಾಗಿ ನಾನು ಯಾವುದೇ ವ್ಯಕ್ತಿಯ ವಿರುದ್ಧ ಆರೋಪಗಳನ್ನು ಮಾಡಲು ಹೋಗುವುದಿಲ್ಲ. ಆದರೆ ನಮ್ಮ ಘನತೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುತ್ತಿರುವುದರ ವಿವರಣೆ ನಮ್ಮ ಜನತೆಗೆ ಗೊತ್ತಿರಬೇಕು' ಎಂದು ಸೂಚ್ಯವಾಗಿ ಮಾತನಾಡಿದರು.
ಪಕ್ಷದ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಮಾತನಾಡುತ್ತಾ, ಕಾಂಗ್ರೆಸ್ ಅಧ್ಯಕ್ಷೆ ವಿದೇಶದ ಬ್ಯಾಂಕ್ ಖಾತೆಗಳಲ್ಲಿ ಭಾರೀ ಹಣ ಹೊಂದಿದ್ದಾರೆ ಎಂಬ ಆರೋಪಗಳಿವೆ. ಇಂತಹ ಆರೋಪಗಳು ಇರುವ ಹೊತ್ತಿನಲ್ಲಿ, ತಾನು ಯಾವುದೇ ಆರೋಪಗಳ ತನಿಖೆಗೆ ಮುಕ್ತಳಾಗಿದ್ದೇನೆ ಎಂದು ಆಕೆ ಘೋಷಿಸಲು ಇದು ಸೂಕ್ತ ಸಮಯ ಎಂದರು.
ಬಿಜೆಪಿ ನಾಯಕರು ಕಾರ್ಯಕಾರಿಣಿಯಲ್ಲಿ ಮಾತನಾಡುವಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಹೆಸರನ್ನು ಉಲ್ಲೇಖಿಸಿ ನೇರವಾಗಿ ಆರೋಪಗಳನ್ನು ಮಾಡಿದರಾದರೂ, ನಾಯಕರ ಲಿಖಿತ ಭಾಷಣದಲ್ಲಿ ನೆಹರೂ ಕುಟುಂಬದ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸಿರಲಿಲ್ಲ.