ದಿನ ಬೆಳಗಾದರೆ ಹೊಸತೊಂದು ಹಗರಣ ಹುಟ್ಟಿಕೊಳ್ಳುತ್ತದೆ. ಆದರೆ ಕೆಲವು ಹಗರಣಗಳು ಮರೆತು ಹೋಗುವುದೇ ಇಲ್ಲ. ಅಂತಹ ಹಗರಣಗಳಲ್ಲಿ ಪ್ರಮುಖವಾದುದು ಬೊಫೋರ್ಸ್ ಫಿರಂಗಿ ಖರೀದಿ. ಈ ಹಗರಣದಲ್ಲಿ ಸ್ವತಃ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹೆಸರುಗಳು ಬಂದು ಹೋದರೂ, ಇದುವರೆಗೂ ನೆಟ್ಟಗೆ ತನಿಖೆಗಳು ನಡೆದಿಲ್ಲ.
ಭಾರತದ ಉನ್ನತ ತನಿಖಾ ಸಂಸ್ಥೆ ಸಿಬಿಐ ಇದರ ತನಿಖೆ ನಡೆಸಿದೆ-ನಡೆಸುತ್ತಿದೆ. ದೇಶದ ಪ್ರಮುಖ ರಾಜಕೀಯ ಪಕ್ಷವೊಂದರ ಪರವಾಗಿ ಅದು ಎಸಗಿರುವ ಕೃತ್ಯಗಳು, ಹೊರ ತಂದಿರುವ ಫಲಿತಾಂಶಗಳನ್ನೆಲ್ಲ ಗಮನಿಸಿದವರಿಗೆ ಬೊಫೋರ್ಸ್ ಕೂಡ ಹೊಸತಲ್ಲ. ನಿರೀಕ್ಷೆಯಂತೆಯೇ ಆ ಹಗರಣದ ರೂವಾರಿಗಳನ್ನು ನಿಶ್ಚಿಂತೆಯಿಂದ ಸಾಯಲು ಬಿಟ್ಟಿದೆ. ಬದುಕಿ ಉಳಿದವರ ಹೆಸರುಗಳು ಕೆದಕಿದಾಗ ಹೊರಗೆ ಬರದಂತೆ ಸಾಕ್ಷ್ಯಗಳನ್ನು ನೋಡಿಕೊಂಡಿದ್ದರೂ ಇತ್ತೀಚೆಗೆ ಮತ್ತೆ ಗಬ್ಬೆದ್ದಿದೆ. ಇದು ಸಾಗಿ ಬಂದಿರುವ ಹಾದಿ ಹೇಗಿದೆ ಎಂಬ ಪಕ್ಷಿನೋಟವಿದು.
24 ವರ್ಷಗಳ ಹಿಂದಿನ ಹಗರಣವಿದು! ಈ ಹಗರಣ ನಡೆದಿರುವುದು 1980ರ ದಶಕದಲ್ಲಿ. ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಹೊತ್ತಿನಲ್ಲಿ ಸ್ವೀಡನ್‌ನ 'ಬೊಫೋರ್ಸ್' ಎಂಬ ಕಂಪನಿಯಿಂದ ಫಿರಂಗಿಗಳನ್ನು ಖರೀದಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು.
155 ಎಂಎಂ ಬೋರ್‌ನ 400 ಫಿರಂಗಿಗಳ ಖರೀದಿಗೆ ವಿದೇಶಿ ಕಂಪನಿಯ ಜತೆ 1.4 ಶತಕೋಟಿ ಡಾಲರ್ ಮೊತ್ತದ ಒಪ್ಪದ ಮಾಡಲಾಯಿತು. ಇದು ನಡೆದದ್ದು 1986ರ ಮಾರ್ಚ್ 24ರಂದು.
ಈ ನಡುವೆ ಸಾಕಷ್ಟು ಅವ್ಯವಹಾರಗಳು ನಡೆದಿದ್ದವು. ಒಪ್ಪಂದಕ್ಕೆ ಮೊದಲೇ ಕೆಲವು ಒಳ ಒಪ್ಪಂದಗಳು ನಡೆದು ಹೋಗಿದ್ದವು. ಆದರೆ ಇದು ಯಾರಿಗೂ ಗೊತ್ತಾಗಿರಲಿಲ್ಲ. ಸರಿಸುಮಾರು ಒಂದು ವರ್ಷದವರೆಗೆ ಯಾರೊಬ್ಬರಿಗೂ ಸಂಶಯ ಕೂಡ ಬಂದಿರಲಿಲ್ಲ.