ಒಟ್ಟಾವಿಯೋ ಕ್ವಟ್ರೋಚಿ ಮತ್ತು ನೆಹರೂ ಕುಟುಂಬ ಆಪ್ತವಾದದ್ದು ಹೇಗೆ? ಇದಕ್ಕೆ ಬೇರೆ ಉತ್ತರ ಇರಬಹುದಾದರೂ, ತಟ್ಟನೆ ಕೊಡಬಹುದಾದ ಉತ್ತರವೆಂದರೆ ಸೋನಿಯಾ ಗಾಂಧಿ.
ಸೋನಿಯಾ ಗಾಂಧಿ ಇಟಲಿ ಮೂಲದವರು. ಅದೇ ದೇಶದ ಪ್ರಜೆ ಕ್ವಟ್ರೋಚಿ ಒಬ್ಬ ಯಶಸ್ವಿ ಉದ್ಯಮಿ. ಇಬ್ಬರ ನಡುವಿನ ಸ್ನೇಹ ನೆಹರೂ ಕುಟುಂಬದವರೆಗೆ ವಿಸ್ತರಿಸಿತ್ತು. ಸಹಜವಾಗಿಯೇ ರಾಜೀವ್ ಗಾಂಧಿ ಮತ್ತು ಅವರ ತಾಯಿ ಇಂದಿರಾ ಗಾಂಧಿಯ ಜತೆ ಸಲುಗೆ ಬೆಳೆದಿತ್ತು. ಇದೇ ಕಾರಣದಿಂದ ಹಗರಣವೊಂದು ಸೃಷ್ಟಿಯಾಯಿತು.
ಎದುರಾಳಿಗಳ ಇಂತಹ ಆರೋಪಗಳನ್ನು ಕಾಲಕಾಲಕ್ಕೆ ತಳ್ಳಿ ಹಾಕುತ್ತಾ ಬಂದ ಗಾಂಧಿ ಕುಟುಂಬ (ನೆಹರೂ ಕುಟುಂಬ), ತನಿಖೆಗಳನ್ನು ಕೂಡ ಹಾದಿ ತಪ್ಪಿಸಿತು ಎಂಬ ಆಪಾದನೆಗಳಿವೆ. ಹಗರಣದ ಬಗ್ಗೆ ದೇಶದ ಕ್ಷಮೆ ಯಾಚಿಸುತ್ತೀರಾ ಎಂಬ ಪ್ರಶ್ನೆಗೆ ಈಗ ಅದೇ ಕುಟುಂಬದ ಕುಡಿ ರಾಹುಲ್ ಗಾಂಧಿ ನೀಡಿರುವ ಉತ್ತರವನ್ನೇ ಕೇಳಿ,- 'ಅದು ಮುಗಿದ ಅಧ್ಯಾಯ. ಇತಿಹಾಸ ಸೇರಿ ಹೋಗಿದೆ. ರಾಜಕೀಯ ಮೇಲಾಟಗಳ ಹಿನ್ನೆಲೆಯಲ್ಲಿ ಈಗಲೂ ಜೀವಂತವಾಗಿ ಉಳಿದುಕೊಂಡಿದೆ. ಇಲ್ಲಿ ಕ್ಷಮೆ ಯಾಚನೆಯ ಪ್ರಶ್ನೆಯೇ ಬರುವುದಿಲ್ಲ'!