ಬೊಫೋರ್ಸ್ ಹಗರಣದ ಹಿನ್ನೆಲೆಯಲ್ಲಿ ಭಾರತ ಹೊರಡಿಸಿದ್ದ ಇಂಟರ್ಪೋಲ್ ರೆಡ್ ಕಾರ್ನರ್ ವಾರೆಂಟನ್ನು ಪರಿಗಣಿಸಿ ಕ್ವಟ್ರೋಚಿಯನ್ನು 2003ರಲ್ಲಿ ಮಲೇಷಿಯಾದಲ್ಲಿ ಬಂಧಿಸಲಾಗಿತ್ತು. ನಂತರ 2007ರಲ್ಲಿ ಅರ್ಜೆಂಟೀನಾ ಪೊಲೀಸರು ಬಂಧಿಸಿದ್ದರು.
ಆದರೆ ಇಲ್ಲೂ ಭಾರತ ಆಡಿದ್ದು ಕೇವಲ ನಾಟಕ. ವಿದೇಶಗಳ ನ್ಯಾಯಾಲಯಗಳಲ್ಲಿ ಸಿಬಿಐ ಉದ್ದೇಶಪೂರ್ವಕವಾಗಿ ಸಮರ್ಥ ವಾದ ಮಂಡಿಸದೆ ಕ್ವಟ್ರೋಚಿ ಬಿಡುಗಡೆಗೆ ಪರೋಕ್ಷವಾಗಿ ಸಹಕಾರ ನೀಡಿತ್ತು. ಇದೇ ಕಾರಣದಿಂದ ಅರ್ಜೆಂಟೀನಾ ಕ್ವಟ್ರೋಚಿಯನ್ನು ಬಿಡುಗಡೆ ಮಾಡಿತು. ವಿಚಿತ್ರ ಎಂದರೆ ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಗೋಜಿಗೂ ಸಿಬಿಐ ಹೋಗದೇ ಇರುವುದು.
ಕ್ವಟ್ರೋಚಿ ಹೆಸರನ್ನು ರೆಡ್ ಕಾರ್ನರ್ ಪಟ್ಟಿಯಿಂದ ಭಾರತ ತೆಗೆದು ಹಾಕಿದ್ದು 2009ರ ಏಪ್ರಿಲ್ ತಿಂಗಳಲ್ಲಿ. ರೆಡ್ ಕಾರ್ನರ್ ನೊಟೀಸ್ ಮುಂದುವರಿಸಲು ಯಾವುದೇ ಪ್ರಬಲ ಕಾರಣಗಳು ಇಲ್ಲದೇ ಇರುವುದರಿಂದ, ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಬಿಐ ಹೇಳಿಕೊಂಡಿತ್ತು. ವಿಚಿತ್ರ ಎಂದರೆ ಇವೆಲ್ಲದರ ಹಿಂದೆ ಪ್ರಸಕ್ತ ಕರ್ನಾಟಕದ ರಾಜ್ಯಪಾಲರಾಗಿರುವ ಹಂಸರಾಜ್ ಭಾರದ್ವಾದ್ ಪ್ರಮುಖ ಪಾತ್ರವಹಿಸಿರುವುದು.
ಈಗ ಎಲ್ಲರೂ ದೋಷಮುಕ್ತರು.... ಪ್ರಕರಣದಲ್ಲಿ ರಾಜೀವ್ ಗಾಂಧಿ ಮತ್ತಿತರರ ಪಾತ್ರ ಏನೂ ಇಲ್ಲ ಎಂದು 2004ರ ಫೆಬ್ರವರಿ 5ರಂದು ದೆಹಲಿ ಹೈಕೋರ್ಟ್ ಕ್ಲೀನ್ ಚಿಟ್ ನೀಡಿತು. 2005ರ ಮೇ 31ರಂದು ಹಿಂದೂಜಾ ಸಹೋದರರ ವಿರುದ್ಧದ ಆರೋಪಗಳನ್ನು ಕೂಡ ಹೈಕೋರ್ಟ್ ವಜಾ ಮಾಡಿತು.
ಕ್ವಟ್ರೋಚಿಯೆಂಬ ನೆಹರೂ ಕುಟುಂಬದ ಆಪ್ತ ವಿಚಾರಣೆಯಿಲ್ಲದೆ ದೋಷಮುಕ್ತನಾಗಿದ್ದಾನೆ. ಈ ಕುರಿತ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ. ಕ್ವಟ್ರೋಚಿ ಪ್ರಕರಣವನ್ನು ಮುಚ್ಚಬೇಕು ಎಂದು ಸಿಬಿಐ ವಾದಿಸುತ್ತಿದೆ. ಅದೂ ಕೆಳಹಂತದ ನ್ಯಾಯಾಲಯದಲ್ಲಿ. ಅಂದರೆ ಇದು ಹೈಕೋರ್ಟ್ ಮೆಟ್ಟಿಲೇರುವುದು ನಮ್ಮ ಕಾಲದಲ್ಲಿ ಸಾಧ್ಯವಿಲ್ಲ ಎನ್ನುವುದು ಖಚಿತ.
ಹಗರಣಕ್ಕೆ ಸಂಬಂಧಿಸಿದ, ಕೋಟ್ಯಂತರ ರೂಪಾಯಿಗಳನ್ನು ಗುಳು ಮಾಡಿದ ಬಹುತೇಕ ಮಂದಿ ಈಗಾಗಲೇ ಸತ್ತು ಹೋಗಿದ್ದಾರೆ.