ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ರಿಯಾಜ್ ಭಟ್ಕಳ್‌ನನ್ನು ಕೊಲ್ಲಿಸಿದ್ದು ಭಾರತ ಸರಕಾರ? (Pakistan | Riyaz Bhatkal | Indian Mujahideen | Karnataka)
Bookmark and Share Feedback Print
 
ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಕರ್ನಾಟಕದ ರಿಯಾಜ್ ಭಟ್ಕಳ್‌ನನ್ನು ಪಾಕಿಸ್ತಾನದಲ್ಲಿ ಕೊಂದು ಹಾಕಿದ್ದು ಮುಂಬೈಯ ಶಾರ್ಪ್ ಶೂಟರ್. ಈತ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಬಬ್ಲೂ ಶ್ರೀವಾತ್ಸವ್ ಸಹಕಾರದಿಂದ ಕೃತ್ಯ ಎಸಗಿದ್ದಾನೆ. ಇದರ ಹಿಂದಿರುವ ಶಕ್ತಿ ಭಾರತೀಯ ಗುಪ್ತಚರ ಇಲಾಖೆ!

ರಿಯಾಜ್ ಭಟ್ಕಳ್ ಸತ್ತನೆಂಬ ಸುದ್ದಿ ಹರಡಿದ ರೀತಿಯಲ್ಲಿಯೇ ಈ ಸುದ್ದಿ ಹರಡುತ್ತಿದೆ. ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳನ್ನು ಪಾಕಿಸ್ತಾನ ಸರಕಾರವು ಹಸ್ತಾಂತರಿಸಲು ನಿರಾಕರಿಸುತ್ತಿರುವುದರಿಂದ, ಈ ಹಿಂದೆಯೂ ದಾವೂದ್ ಇಬ್ರಾಹಿಂ ಮುಂತಾದವರನ್ನು ಮುಗಿಸಲು ಭಾರತ ಯತ್ನಿಸಿದ ಆರೋಪಗಳು ಇರುವುದರಿಂದ, ಪ್ರಸಕ್ತ ಹುಟ್ಟಿಕೊಂಡಿರುವ ಸುದ್ದಿಗೆ ರೆಕ್ಕೆ ಪುಕ್ಕಗಳು ಹುಟ್ಟಿಕೊಳ್ಳುತ್ತಿವೆ.

ಇದನ್ನೂ ಓದಿ: ಕರ್ನಾಟಕದ ಉಗ್ರ ರಿಯಾಜ್ ಭಟ್ಕಳ್ ಪಾಕ್‌ನಲ್ಲಿ ಹತ್ಯೆ?

ರಿಯಾಜ್ ಭಟ್ಕಳ್ ಸತ್ತಿದ್ದಾನೆ ಎಂಬುವುದನ್ನೇ ನಂಬುವುದಾದರೆ, ಈ ಕೃತ್ಯ ಎಸಗಿದ್ದು ಮುಂಬೈ ಭೂಗತ ಜಗತ್ತಿನ ಕುಖ್ಯಾತ ಶೂಟರ್. ರಿಯಾಜ್ ಮತ್ತು ಆತನ ಜತೆಗಿದ್ದ ನಿಸಾರ್ ಅನ್ವರ್ ಎಂಬಾತನನ್ನು ಈತ ಗುಂಡಿಕ್ಕಿ ಕೊಂದು ಹಾಕಿದ್ದಾನೆ. ಈ ಹಿಂದೆ ತಪ್ಪಿತಸ್ಥ ಎಂದು ಜೈಲಿನಲ್ಲಿ ಕಳೆದಿರುವ ಈ ಹುಡುಗ, ಛೋಟಾ ರಾಜನ್ ಸಹಚರ.

ಮೂಲತಃ ಕಾಂಡಿವಿಲಿಯವನಾಗಿರುವ ಈತನ ಹೆಸರು ಸುಪಾರಿ ಹತ್ಯೆಗಳ ಹಿಂದೆ ಕೇಳಿ ಬಂದಿತ್ತು. ಸುಪಾರಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ ಜೈಲಿನಲ್ಲಿದ್ದಾತ ಜಾಮೀನು ಪಡೆದುಕೊಂಡು ನಂತರ ತಪ್ಪಿಸಿಕೊಂಡಿದ್ದ. ಆತನಿಗೆ ಈ ಹತ್ಯೆಯ (ರಿಯಾಜ್ ಭಟ್ಕಳ್) ಸುಪಾರಿ ನೀಡಲಾಗಿತ್ತು. ಹಲವು ಗ್ಯಾಂಗುಗಳಿಗೆ ಮಾಹಿತಿದಾರನಾಗಿ ಕೆಲಸ ಮಾಡಿರುವ ಈತ ಸಮಾಜದ ಕೆಳಸ್ತರಕ್ಕೆ ಸೇರಿದವನು.

ಈ ಸುಪಾರಿ ಹಂತಕನನ್ನು ಕರಾಚಿಗೆ ಭಾರತದಿಂದ ಕಳುಹಿಸಿದ್ದು ನೇಪಾಳದ ಮೂಲಕ. ಈತನಿಗೆ ಸಹಕಾರ ನೀಡುವ ಸಲುವಾಗಿ ಕಾಠ್ಮಂಡುವಿನಿಂದ ನೇಪಾಳಿಗಳು ವ್ಯಾಪಾರಿಗಳಂತೆ ವೇಷ ಹಾಕಿ ಕರಾಚಿಗೆ ಹೋಗಿದ್ದರು. ಇವರೆಲ್ಲರ ಹಿಂದಿದ್ದ ಉದ್ದೇಶ ಒಂದೇ - ರಿಯಾಜ್ ಭಟ್ಕಳ್‌ನನ್ನು ಮುಗಿಸುವುದು. ಅದಕ್ಕಾಗಿ ಕುರ್ತಾ, ಶೆರ್ವಾನಿಗಳನ್ನು ಮಾರಾಟ ಮಾಡುವ ಸೋಗನ್ನು ಕೂಡ ಅವರು ಹಾಕಿಕೊಂಡಿದ್ದರು.

ಕೊಲ್ಲಿಸಿದ್ದು ಭಾರತವೇ?
ರಿಯಾಜ್ ಭಟ್ಕಳ್‌ನನ್ನು ಕರಾಚಿಯ ಗುಲ್ಶನ್ ಇಕ್ಬಾಲ್ ಪ್ರದೇಶದ ಕರೀನಾ ಮಾರ್ಕೆಲ್ ಎಂಬಲ್ಲಿ ತನ್ನ ಸಹಚರರು ಕೊಂದು ಹಾಕಿದ್ದಾರೆ ಎಂದು
ಮರಾಠಿ ಸುದ್ದಿವಾಹಿನಿಯೊಂದಕ್ಕೆ ದೂರವಾಣಿ ಕರೆ ಮಾಡಿ ಹೇಳಿದ್ದು, ತನ್ನನ್ನು ಭೂಗತ ಪಾತಕಿ ಛೋಟಾ ರಾಜನ್
ಎಂದು ಪರಿಚಯಿಸಿಕೊಂಡ ವ್ಯಕ್ತಿ.

ಸದಾ ತಾನು ದೇಶಭಕ್ತ ಎಂದು ತೋರಿಸಿಕೊಳ್ಳಲು ಹೆಣಗಾಡುತ್ತಿರುವ ಛೋಟಾ ರಾಜನ್, ಪ್ರಸಕ್ತ ತನ್ನ ಎದುರಾಳಿಯಾಗಿ ಮಾರ್ಪಟ್ಟಿರುವ ದಾವೂದ್ ಇಬ್ರಾಹಿಂ ಮತ್ತಿತರರ ಗ್ಯಾಂಗಿನ ಸದಸ್ಯರನ್ನು ಹತ್ಯೆ ಮಾಡುತ್ತಾ ಬಂದವನು.

ಹಾಗಾಗಿ ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ಹತ್ಯೆಗೈಯಲು ರಾಜನ್‌ಗೆ ಸುಪಾರಿ ನೀಡಲಾಗಿತ್ತು. ಇದಕ್ಕೆ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಬಬ್ಲೂ ಶ್ರೀವಾತ್ಸವ ಕೂಡ ಬೆಂಬಲ ನೀಡಿದ್ದ. ರಿಯಾಜ್ ಭಟ್ಕಳ್‌ನನ್ನು ಮುಗಿಸಲು ಹೊರಟಿದ್ದ ಕಿಲ್ಲರ್ ಸ್ಕ್ವಾಡ್‌ಗೆ ಅನುಕೂಲವಾಗುವಂತೆ ನೋಡಿಕೊಂಡಿದ್ದ.

ಕೆಲವು ಮೂಲಗಳ ಪ್ರಕಾರ ಇದರ ಸೂತ್ರ ಇರುವುದು ಭಾರತದ ಗುಪ್ತಚರ ಇಲಾಖೆಯಲ್ಲಿ. ಸ್ವತಃ ಗುಪ್ತಚರ ಇಲಾಖೆಯೇ ತಂತ್ರವೊಂದನ್ನು ರೂಪಿಸಿ, ಈ ರೀತಿಯಾಗಿ ಭೂಗತ ವ್ಯಕ್ತಿಗಳ ಮೂಲಕ ಮುಗಿಸಿದೆ. ಇದು ಎಲ್ಲಿಯವರೆಗೆ ಎಂದರೆ, ಅಂತಿಮ ಹಂತದಲ್ಲಿ 'ರಿಯಾಜ್ ಭಟ್ಕಳ್ ಇವನೇ' ಎಂದು ಹಂತಕನಿಗೆ ತೋರಿಸಿದ್ದು ಕೂಡ ಭಾರತದ ಗುಪ್ತಚರ ಮೂಲಗಳು ಎಂದು ಹೇಳಲಾಗಿದೆ.

ನಮ್ಮ ಮಗ ಅಮಾಯಕ: ರಿಯಾಜ್ ಹೆತ್ತವರು
ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ಪಾಕಿಸ್ತಾನದಲ್ಲಿ ಕೊಂದು ಹಾಕಲಾಗಿದೆ ಎಂಬ ಗಾಳಿಸುದ್ದಿಗಳು ಬರುತ್ತಿದ್ದರೂ, ಅದನ್ನು ನಂಬಲು ರಿಯಾಜ್ ಹೆತ್ತವರು ಸಿದ್ಧರಿಲ್ಲ. ಇಸ್ಮಾಯಿಲ್-ಸುವೈದಾ ದಂಪತಿ ಇದು ಸುಳ್ಳಾಗಿರಬಹುದು ಎಂದೇ ನಂಬಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಮದೀನಾ ಬೀದಿಯಲ್ಲಿ ನೆಲೆಸಿರುವ ಇವರು, ತಮ್ಮ ಮಗ ಒಬ್ಬ ಭಯೋತ್ಪಾದಕ ಎಂಬ ವಾದವನ್ನೂ ಒಪ್ಪಿಕೊಳ್ಳುತ್ತಿಲ್ಲ. 'ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ನನ್ನ ಮಗ ಎನ್ನುವುದನ್ನು ನಾನು ನಂಬುವುದಿಲ್ಲ' ಎಂದು ರಿಯಾಜ್ ತಂದೆ ಇಸ್ಮಾಯಿಲ್ ಹೇಳುತ್ತಾರೆ.

ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಮಗ ಭಯೋತ್ಪಾದಕನಲ್ಲ ಎಂದು ನಂಬುವುದನ್ನು ನಾನು ಮುಂದುವರಿಸುತ್ತೇನೆ. ಈ ಸುದ್ದಿ ಹೊರ ಬಂದ ನಂತರ ಯಾವುದೇ ಪೊಲೀಸರು ನಮ್ಮನ್ನು ಸಂಪರ್ಕಿಸಿಲ್ಲ. ಮಗನ ಜತೆ ಸಂಪರ್ಕವಿಲ್ಲದೆ ಆರು ವರ್ಷಗಳೇ ಕಳೆದಿವೆ. ಆತ ಎಲ್ಲಿದ್ದಾನೆಂದೇ ಗೊತ್ತಿಲ್ಲ. ಕೆಲವರ ಪ್ರಕಾರ ಪಾಕಿಸ್ತಾನದಲ್ಲಿ, ಇನ್ನು ಕೆಲವರ ಪ್ರಕಾರ ಭಾರತದಲ್ಲೇ ಇದ್ದಾನೆ. ನಮ್ಮನ್ನು ಆರು ವರ್ಷಗಳಿಂದ ಆತ ಸಂಪರ್ಕಿಸಿಲ್ಲ ಎಂದು ತಾಯಿ ಸುವೈದಾ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ