ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅರುಣಾಚಲ ನಮ್ಮದು: ಚೀನಾ | ಭಾರತ 'ಖಾರ' ಪ್ರತಿಕ್ರಿಯೆ (Stapled visa | China | India | Arunachal Pradesh)
Bookmark and Share Feedback Print
 
ಅರುಣಾಚಲ ಪ್ರದೇಶದ ಜನರಿಗೆ ಪ್ರತ್ಯೇಕ ವೀಸಾ ನೀಡುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅದು ನಮ್ಮದೇ ಭೂಭಾಗ ಎಂದು ಚೀನಾ ಉದ್ಧಟತನ ಪ್ರದರ್ಶಿಸಿದೆ. ಇತ್ತ ಎಂದಿನಂತೆ ಭಾರತವು 'ಖಾರ' ಪ್ರತಿಕ್ರಿಯೆ ನೀಡಿ ಸುಮ್ಮನಾಗಿದೆ.

ಅರುಣಾಚಲ ಪ್ರದೇಶ ವಿವಾದಿತ ಭೂ ಪ್ರದೇಶ. ನನ್ನ ಪ್ರಕಾರ ಕಳೆದ 20 ವರ್ಷಗಳಿಂದ ಇದು ಹೀಗೆ ನಡೆದುಕೊಂಡು ಬಂದಿದೆ. ಅಲ್ಲಿನ ಅಧಿಕಾರಿಗಳನ್ನು ಹೊರತುಪಡಿಸಿ, ಇತರರಿಗೆ ಪ್ರತ್ಯೇಕ ವೀಸಾಗಳನ್ನು ಮಾತ್ರ ನೀಡುವ ಕ್ರಮವನ್ನು ನಾವು ಮುಂದುವರಿಸುತ್ತೇವೆ ಎಂದು ದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚೀನಾದಿಂದ ಗ್ರೇಟ್ ಪೊಲಿಟಿಕ್ಸ್; ಭಾರತದಿಂದ ತಿರುಗೇಟು

ಭಾರತವು ಅರುಣಾಚಲ ಪ್ರದೇಶ ಎಂದು ಗುರುತಿಸುವ ಪ್ರದೇಶವನ್ನು ನಾವು ದಕ್ಷಿಣ ಟಿಬೆಟ್ ಎಂದು ಪರಿಗಣಿಸುತ್ತೇವೆ. ನಾವು ಹೊಂದಿರುವ ಗಡಿ ವಿವಾದ ಇನ್ನೂ ಪರಿಹಾರ ಕಂಡಿಲ್ಲ. ಇದೇನೂ ಹೊಸತಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.

ಚೀನಾದ ಈ ಅಧಿಕ ಪ್ರಸಂಗಿತನ ಬಯಲಿಗೆ ಬಂದದ್ದು ಕ್ರೀಡಾಪಟುಗಳ ಚೀನಾ ಪ್ರವಾಸದ ಸಂದರ್ಭದಲ್ಲಿ. ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ಜಂಟಿ ಕಾರ್ಯದರ್ಶಿ, ಅರುಣಾಚಲ ಪ್ರದೇಶದ ಅಬ್ರಹಾಂ ಕೆ. ಟೆಕಿ ಮತ್ತು ಅದೇ ರಾಜ್ಯದ ಓರ್ವ ವೇಟ್‌ಲಿಫ್ಟರ್ ಚೀನಾಕ್ಕೆ ತೆರಳಬೇಕಿತ್ತು.

ಚೀನಾ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದ ಅವರು, ಚೀನಾ ರಾಯಭಾರ ಕಚೇರಿಯಿಂದ ವೀಸಾ ಪಡೆದುಕೊಂಡಿದ್ದರು. ಅವರಿಗೆ ಚೀನಾ ಕೊಟ್ಟಿದ್ದು ಪ್ರತ್ಯೇಕ ವೀಸಾ. ಈ ವೀಸಾ ಹಿಡಿದುಕೊಂಡು ದೆಹಲಿಯಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇವರಿಬ್ಬರು ತೆರಳಿದ್ದರು. ಆದರೆ ಅದು ಪ್ರತ್ಯೇಕ ವೀಸಾ ಆಗಿದ್ದ ಕಾರಣ ಅಧಿಕಾರಿಗಳು ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ.

ಭಾರತದಿಂದ 'ಖಾರ' ಪ್ರತಿಕ್ರಿಯೆ!
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮತ್ತೆ ಖಾರ ಪ್ರತಿಕ್ರಿಯೆಯನ್ನು ನೀಡಿದೆ. ಚೀನಾ ನಡೆದುಕೊಂಡಿರುವ ರೀತಿ ಸರಿಯಿಲ್ಲ, ಇದನ್ನು ನಾವು ಪ್ರತಿಭಟಿಸುತ್ತೇವೆ ಎಂದು ಹೇಳಿಕೊಂಡಿದೆ.

ಅರುಣಾಚಲ ಪ್ರದೇಶದ ಜನರಿಗೆ ಚೀನಾ ಪ್ರತ್ಯೇಕ ಹಾಳೆಯಲ್ಲಿ ನೀಡಿರುವ ವೀಸಾಗಳನ್ನು ಭಾರತ ಒಪ್ಪಿಕೊಳ್ಳುವುದಿಲ್ಲ. ಇದನ್ನು ಚೀನಾಕ್ಕೆ ಮನದಟ್ಟು ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಅದನ್ನು ಸ್ವೀಕರಿಸುವುದಿಲ್ಲ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಭಾರತದಿಂದ ವಿದೇಶಗಳಿಗೆ ತೆರಳುವ ಪ್ರಜೆಗಳಿಗೆ ಪ್ರಯಾಣದ ಸಲಹೆ ನೀಡಿರುವ ಭಾರತ, ಪಾಸ್‌ಪೋರ್ಟ್ ಜತೆಗೆ ನೀಡುವ ವೀಸಾ ಹೊರತುಪಡಿಸಿ, ಪ್ರತ್ಯೇಕ ಹಾಳೆಯಲ್ಲಿ ನೀಡುವ ವೀಸಾಗಳನ್ನು ಭಾರತ ಪರಿಗಣಿಸುವುದಿಲ್ಲ. ಅಂತಹ ವೀಸಾ ಹೊಂದಿದವರು ವಿದೇಶಕ್ಕೆ ತೆರಳಲು ಸಾಧ್ಯವಿಲ್ಲ ಎಂದಿದೆ.

ಇದೇ ಮೊದಲಲ್ಲ...
ಚೀನಾ ಈ ರೀತಿಯಾಗಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಜಮ್ಮು-ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸಲು ಯತ್ನಿಸುತ್ತಾ ಪಾಕಿಸ್ತಾನಕ್ಕೆ ಪರೋಕ್ಷ ಸಹಕಾರ ನೀಡುತ್ತಾ ಬಂದಿರುವ ಚೀನಾ, 2009ರಿಂದ ಆ ರಾಜ್ಯದ ಜನತೆಗೂ ಪ್ರತ್ಯೇಕ ವೀಸಾಗಳನ್ನು ನೀಡುತ್ತಿದೆ. ಇದರಿಂದ ಆ ರಾಜ್ಯದ ಜನತೆ ಚೀನಾ ಪ್ರವಾಸದಿಂದ ವಂಚಿತರಾಗುತ್ತಿದ್ದಾರೆ.

ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ಸೇನಾಧಿಕಾರಿಯೊಬ್ಬರನ್ನು ಕೂಡ ಚೀನಾ ಅವಮಾನಿಸಿತ್ತು. ಅವರನ್ನು ತನ್ನ ದೇಶಕ್ಕೆ ಬರಲು ತಾನು ಬಿಡುವುದಿಲ್ಲ ಎಂದು ಹೇಳಿತ್ತು.

ಇದು ನಡೆದದ್ದು 2010ರ ಆಗಸ್ಟ್ ತಿಂಗಳಲ್ಲಿ. ಚೀನಾ ಮತ್ತು ಭಾರತಗಳ ನಡುವಿನ ರಕ್ಷಣಾ ವ್ಯವಸ್ಥೆಯ ಕುರಿತು ಸಾಮಾನ್ಯವಾಗಿ ನಡೆಯುವ ಉನ್ನತ ಮಟ್ಟದ ಮಾತುಕತೆಗೆ ತೆರಳಲು ಭಾರತವು ಜಮ್ಮು-ಕಾಶ್ಮೀರದ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ನಾರ್ತರ್ನ್ ಏರಿಯಾ ಕಮಾಂಡ್ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಜಸ್ವಾಲ್ ಅವರನ್ನು ಸೂಚಿಸಿತ್ತು.

ಆದರೆ ಮಿಲಿಟರಿ ಕಮಾಂಡರ್ ಜಸ್ವಾಲ್ ಚೀನಾಕ್ಕೆ ಬರಲು ಅವಕಾಶವಿಲ್ಲ. ಅವರನ್ನು ತಾನು ಸ್ವಾಗತಿಸುವುದಿಲ್ಲ ಎಂದು ಚೀನಾ ಹೇಳಿತ್ತು. ಇದರ ವಿರುದ್ಧವೂ ಭಾರತ ತನ್ನ ಪ್ರತಿಭಟನೆ ವ್ಯಕ್ತಪಡಿಸಿ ಸುಮ್ಮನಾಗಿತ್ತು.

ಭಾರತ ಹೇಗೆ ತಿರುಗೇಟು ನೀಡಬಹುದು?
* ಚೀನಾ ಆಕ್ರಮಣ ಮಾಡಿಕೊಂಡಿರುವ ಟಿಬೆಟನ್ನು ಪ್ರತ್ಯೇಕ ದೇಶ ಎಂದು ಪರಿಗಣಿಸುವುದು ಮತ್ತು ಅಲ್ಲಿನ ನಾಗರಿಕರಿಗೆ ಭಾರತ ಪ್ರತ್ಯೇಕ ವೀಸಾಗಳನ್ನು ನೀಡುವುದು.
* ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಚೀನಾ ಸಹಕಾರ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಟಿಬೆಟ್ ಹೋರಾಟಗಾರರಿಗೆ ಭಾರತ ಸಹಕಾರ ನೀಡುವುದು, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೆಂಬಲ ನೀಡುವುದು.
* ದಲೈಲಾಮಾ ಸೇರಿದಂತೆ ಟಿಬೆಟ್ ಧಾರ್ಮಿಕ ಗುರುಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಮರ್ಥಿಸಿಕೊಳ್ಳುವುದು. ಟಿಬೆಟ್ ಪರ ಹೋರಾಟಕ್ಕೆ ಪರೋಕ್ಷ ಬೆಂಬಲವನ್ನು ನೀಡುವುದು.
ಸಂಬಂಧಿತ ಮಾಹಿತಿ ಹುಡುಕಿ