ಕಳೆದ ವರ್ಷ ರುಚಿಕಾ ಗಿರೋತ್ರಾ ಪ್ರಕರಣದ ಆರೋಪಿ ಎಸ್‌ಪಿಎಸ್ ರಾಥೋಡ್ ಮೇಲೆ ಚೂರಿಯಿಂದ ದಾಳಿ ಮಾಡಿದ್ದ ವ್ಯಕ್ತಿಯೇ ಇಂದು ಆರುಷಿ ತಂದೆ ರಾಜೇಶ್ ತಲ್ವಾರ್ ಮೇಲೆ ನ್ಯಾಯಾಲಯದ ಆವರಣದಲ್ಲಿಯೇ ಹರಿತವಾದ ಆಯುಧದಿಂದ ತೀವ್ರವಾಗಿ ಗಾಯಗೊಳಿಸಿದ್ದಾನೆ.
2008ರಲ್ಲಿ ಮನೆಯಲ್ಲಿಯೇ ಹತ್ಯೆಗೀಡಾಗಿದ್ದ ಅಪ್ರಾಪ್ತ ಬಾಲಕಿ ಆರುಷಿ ಪ್ರಕರಣದ ವಿಚಾರಣೆಗಾಗಿ ಗಾಜಿಯಾಬಾದ್ ನ್ಯಾಯಾಲಯಕ್ಕೆ ಬಂದಿದ್ದ ರಾಜೇಶ್ ತಲ್ವಾರ್ ಮೇಲೆ ದಾಳಿ ನಡೆಯುತ್ತಿದ್ದಂತೆ, ಅವರನ್ನು ವಕೀಲರುಗಳು ಸೇರಿಕೊಂಡು ಆಸ್ಪತ್ರೆಗೆ ಸೇರಿಸಿದ್ದಾರೆ.
ಈ ರೀತಿಯಾಗಿ ದಾಳಿ ಮಾಡಿದವನ ಹೆಸರು ಉತ್ಸವ್ ಶರ್ಮಾ. 25ರ ಹರೆಯದ ಈ ಯುವಕ ಉತ್ತರ ಪ್ರದೇಶದ ವಾರಣಾಸಿಯವನು. ದಾಳಿ ನಡೆಯುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ವಕೀಲರುಗಳು, ಉತ್ಸವ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ.
ಮೂಲಗಳ ಪ್ರಕಾರ ತಲ್ವಾರ್ ಮೇಲೆ ದಾಳಿ ನಡೆಸಲಾಗಿರುವು ಕಲ್ಲಿನಿಂದ. ತೀವ್ರವಾಗಿ ಗಾಯಗೊಂಡ ತಲ್ವಾರ್ ಹಣೆಯಿಂದ ಭಾರೀ ರಕ್ತ ಹರಿದು ಹೋಗಿದೆ. ಆದರೆ ಯಾವುದೇ ಅಪಾಯವಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದೇ ಉತ್ಸವ್ ಶರ್ಮಾ 2010ರ ಫೆಬ್ರವರಿ 8ರಂದು ಅಪ್ರಾಪ್ತ ಬಾಲಕಿ ರುಚಿಕಾ ಗಿರೋತ್ರಾ ಲೈಂಗಿಕ ಕಿರುಕುಳ ಪ್ರಕರಣ ಆರೋಪಿ, ಹರ್ಯಾಣದ ಮಾಜಿ ಡಿಜಿಪಿ ಎಸ್‌ಪಿಎಸ್ ರಾಥೋಡ್ ಮೇಲೆ ಚಂಡೀಗಢ ನ್ಯಾಯಾಲಯದ ಆವರಣದಲ್ಲಿ ಚೂರಿಯಿಂದ ಘಾಸಿಗೊಳಿಸಿದ್ದ. ಆಗಲೂ ಶರ್ಮಾ ಮೇಲೆ ಕೇಸು ಹಾಕಲಾಗಿತ್ತು.
ಆರುಷಿ ಹತ್ಯಾ ಪ್ರಕರಣದಲ್ಲಿ ರಾಜೇಶ್ ತಲ್ವಾರ್ ಪ್ರಮುಖ ಶಂಕಿತ ಎಂದು ಸಿಬಿಐ ವಾದಿಸುತ್ತಿದೆಯಾದರೂ, ಈ ಬಗ್ಗೆ ಪುರಾವೆಗಳು ಇಲ್ಲದೇ ಇರುವುದರಿಂದ ಪ್ರಕರಣವನ್ನು ಮುಚ್ಚಲು ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ. ಈ ಕುರಿತ ವಿಚಾರಣೆ ಪ್ರಸಕ್ತ ನಡೆಯುತ್ತಿದೆ.