ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನರೇಂದ್ರ ಮೋದಿ ವಿವಾದ; ದಿಯೋಬಂದ್ ಮುಖ್ಯಸ್ಥ ಪದತ್ಯಾಗ?
(Gujarat | Narendra Modi | Deoband | Maulana Mohammad Ghulam Vastanvi)
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿ ತೀವ್ರ ವಿವಾದಕ್ಕೆ ತುತ್ತಾಗಿರುವ ದಿಯೋಬಂದ್ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ಉಪಕುಲಪತಿ ನೇಮಕಗೊಂಡ ಕೆಲವೇ ವಾರಗಳಲ್ಲಿ ರಾಜೀನಾಮೆಗೆ ಮುಂದಾಗಿದ್ದಾರೆ. ತಾನು ಪದತ್ಯಾಗಕ್ಕೆ ಸಿದ್ಧ ಎಂದು ಮೌಲಾನಾ ಮೊಹಮ್ಮದ್ ಗುಲಾಂ ವಸ್ತಾನ್ವಿ ಹೇಳಿಕೊಂಡಿದ್ದಾರೆ.
2002ರ ಗುಜರಾತ್ ಗಲಭೆ ಖಂಡನೀಯ. ನಾವು ಮರೆತು ಮುನ್ನಡೆಯಬೇಕೇ ಹೊರತು ಹಿಂದಿನದ್ದನ್ನು ಯೋಚಿಸುತ್ತಾ ಅಲ್ಲೇ ಉಳಿಯಬಾರದು. ಆ ಘಟನೆಗೀಗ ಬಹುತೇಕ ಎಂಟು ವರ್ಷಗಳು ಸಂದಿವೆ. ಗುಜರಾತ್ ಹಿಂಸಾಚಾರಗಳು ಭಾರತಕ್ಕೆ ಕಳಂಕ, ಇದರ ಹಿಂದಿನ ಎಲ್ಲಾ ದುಷ್ಕರ್ಮಿಗಳಿಗೂ ಶಿಕ್ಷೆಯಾಗಬೇಕು ಎಂದು ಹೇಳಿದ್ದ ವಸ್ತಾನ್ವಿ, ಗುಜರಾತಿನಲ್ಲಿ ಅಭಿವೃದ್ಧಿಯೇ ಆಗಿಲ್ಲ, ಅಲ್ಲಿ ಉದ್ಯಮ ಭಾರೀ ಪ್ರಮಾಣದಲ್ಲಿ ಬೆಳೆದಿದೆ ಎನ್ನುವುದು ಸುಳ್ಳು ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ಮತ್ತು ಕಾಂಗ್ರೆಸ್ ಮುಂತಾದ ರಾಜಕೀಯ ಪಕ್ಷಗಳು ಪ್ರಚಾರ ಮಾಡುತ್ತಿರುವುದನ್ನು ಆಕ್ಷೇಪಿಸಿದ್ದರು.
ಪ್ರಸಕ್ತ ಬಿಂಬಿಸಲಾಗುತ್ತಿರುವ ರೀತಿಯಲ್ಲಿ ಗುಜರಾತಿನಲ್ಲಿ ಸಮಸ್ಯೆಗಳಿಲ್ಲ. ಯುಪಿಎ ಸರಕಾರ ಅಥವಾ ಗಲಭೆಯ ಬಲಿಪಶುಗಳ ಪರ ಕೆಲಸ ಮಾಡುತ್ತಿರುವ ಸಂಘಟನೆಗಳು ಆರೋಪಿಸುತ್ತಿರುವಂತೆ, ಗಲಭೆಯಲ್ಲಿನ ಪರಿಹಾರ ಅಥವಾ ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ತಾರತಮ್ಯ ಮಾಡುತ್ತಿಲ್ಲ ಎಂದು ಅವರು ಶ್ಲಾಘಿಸಿದ್ದರು.
ಇದು ತೀವ್ರ ವಿವಾದಕ್ಕೆ ತುತ್ತಾಗಿತ್ತು. ಬೆನ್ನಿಗೆ ತನ್ನ ಹೇಳಿಕೆ ಬದಲಿಸಿದ್ದ ವಸ್ತಾನ್ವಿ, ನಾನು ಹಾಗೆ ಹೇಳಿಯೇ ಇಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ ಎಂದಿದ್ದರು. ಆದರೂ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆ ಮತ್ತು ವಸ್ತಾನ್ವಿ ಅವರ ಎದುರಾಳಿಗಳ ಕೋಪ ತಣಿದಿಲ್ಲ.
'ಮೋದಿಯನ್ನು ಸ್ತುತಿಸುತ್ತಿರುವ ಉಪ ಕುಲಪತಿ ರಾಜೀನಾಮೆ ನೀಡಬೇಕು' ಎಂದು ಎದುರಾಳಿಗಳು ಪ್ರತಿಭಟನೆ ನಡೆಸುತ್ತಿರುವುದು, ಘೋಷಣೆ ಕೂಗುತ್ತಿರುವುದು ತಹಬದಿಗೆ ಬರದೇ ಇರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆಗೆ ಮುಂದಾಗಿದ್ದಾರೆ. ತಾನು ರಾಜೀನಾಮೆ ನೀಡಲು ಸಿದ್ಧ ಎಂದು ವಸ್ತಾನ್ವಿ ತಿಳಿಸಿದ್ದಾರೆ.