ಗೋದ್ರೋತ್ತರ ಹಿಂಸಾಚಾರದ ಬಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡವು (ಸಿಟ್) 2010ರ ಮಾರ್ಚ್ ತಿಂಗಳಲ್ಲಿ ಸತತ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಹಲವು ಪ್ರಶ್ನಾವಳಿಗಳನ್ನು ಸಿಟ್ ತಂಡವು ಮೋದಿಯವರ ಮುಂದಿಟ್ಟಿತ್ತು.
ಸಿಟ್ ಕೇಳಿದ ಪ್ರಶ್ನೆಗಳು ಮತ್ತು ಮೋದಿ ನೀಡಿದ್ದ ಉತ್ತರಗಳು ಈಗ ಟೆಹೆಲ್ಕಾ ವಾರಪತ್ರಿಕೆ ಮೂಲಕ ಬಹಿರಂಗವಾಗಿವೆ. ಈ ವಿಚಾರಣೆ 28-03-2010ರಂದು ಬೆಳಿಗ್ಗೆ 9 ಗಂಟೆಗೆ ಆರಂಭವಾಗಿತ್ತು. ಗುಜರಾತಿನ ಗಾಂಧಿನಗರದ ಸಿಟ್ ಕಚೇರಿಗೆ ಬಂದಿದ್ದ ಮೋದಿ, ಸಂಜೆಯವರೆಗೂ ವಿಚಾರಣೆ ಎದುರಿಸಿದ್ದರು.
ಈ ಸಂದರ್ಭದಲ್ಲಿ ಸಿಟ್ ಅಧಿಕಾರಿ ಎ.ಕೆ. ಮಲ್ಹೋತ್ರಾ ಕೇಳಿದ್ದ 71 ಪ್ರಶ್ನೆಗಳು ಮತ್ತು ನರೇಂದ್ರ ಮೋದಿ ನೀಡಿದ್ದ ಉತ್ತರಗಳಲ್ಲಿ ಆಯ್ದ, ಪ್ರಮುಖವೆನಿಸಿದ್ದನ್ನು ಮಾತ್ರ ಇಲ್ಲಿ ಪ್ರಕಟಿಸಲಾಗಿದೆ.
*** *** *** ***
ಪ್ರಶ್ನೆ: 'ಅಣ್ಣ-ತಮ್ಮಂದಿರೇ, ನಾವೇನು ನಿರಾಶ್ರಿತರ ಶಿಬಿರ ನಡೆಸಬೇಕೇ? ನಾನು ಮಕ್ಕಳನ್ನು ಉತ್ಪಾದಿಸುವ ಕೇಂದ್ರಗಳನ್ನು ಆರಂಭಿಸಬೇಕೇ? ನಾವು ಕುಟುಂಬ ಯೋಜನೆ ನೀತಿಯನ್ನು ಅನುಸರಿಸುವ ಮೂಲಕ ಅಭಿವೃದ್ಧಿಯಾಗಲು ಬಯಸುತ್ತಿದ್ದೇವೆ. ನಮಗೆ ಐದು ಮಕ್ಕಳಾದರೆ, ಅವರಿಗೆ 25'
'ಗುಜರಾತಿನಲ್ಲಿ ಕುಟುಂಬ ಯೋಜನೆ ಬೇಡವೇ? ನಮ್ಮ ಹಾದಿಗೆ ಮುಳ್ಳಾಗುವರು ಯಾರು ? ಯಾವ ಧಾರ್ಮಿಕ ಸಮುದಾಯ ಅಡ್ಡ ಬರುತ್ತಿದೆ? ಬಡವರಿಗೆ ಹಣ ಯಾಕೆ ತಲುಪುತ್ತಿಲ್ಲ? ಆ ರೀತಿಯಾಗಿ ಕೆಲವು ಮಂದಿ ಮಕ್ಕಳನ್ನು ಮಾಡುತ್ತಾ ಹೋದರೆ, ಅವರ ಮಕ್ಕಳು ಸೈಕಲ್ ಪಂಕ್ಚರ್ ರಿಪೇರಿ ಮಾತ್ರ ಮಾಡಬೇಕಾಗುತ್ತದೆ' -- ಇದು ನೀವು 2002ರ ಸೆಪ್ಟೆಂಬರ್ ತಿಂಗಳಲ್ಲಿ 'ಗೌರವ ಯಾತ್ರೆ' ಹೆಸರಿನಲ್ಲಿ ಮಾಡಿದ ಚುನಾವಣಾ ಪ್ರಚಾರದ ಭಾಷಣ. ನೀವು ಇಲ್ಲಿ ಉಲ್ಲೇಖಿಸಿರುವುದು ಮುಸ್ಲಿಮರನ್ನೇ?
ಮೋದಿ: ಆ ಭಾಷಣದಲ್ಲಿ ಯಾವುದೇ ಸಮುದಾಯ ಅಥವಾ ಧರ್ಮವನ್ನು ಬೆಟ್ಟು ಮಾಡಿಲ್ಲ. ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ಮನದಟ್ಟು ಮಾಡಲು ನಾನು ಮಾಡಿರುವ ರಾಜಕೀಯ ಭಾಷಣವದು. ನನ್ನ ಭಾಷಣವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ತಿರುಚಿ, ತಮಗೆ ಬೇಕಾದಂತೆ ಹೊಂದಾಣಿಕೆ ಮಾಡಿಕೊಂಡಿವೆ. ನನ್ನ ಆ ಚುನಾವಣಾ ಭಾಷಣದ ನಂತರ ಯಾವುದೇ ಹಿಂಸಾಚಾರವಾಗಲೀ, ಉದ್ವಿಗ್ನ ಪರಿಸ್ಥಿತಿಯಾಗಲೀ ಉದ್ಭವಿಸಿಲ್ಲ ಎನ್ನುವುದನ್ನು ಕೂಡ ಗಮನಿಸಬೇಕು.
ವರದಿ: ಮೋದಿಯವರು ನೀಡಿದ ವಿವರಣೆಯನ್ನು ಒಪ್ಪಿಕೊಳ್ಳುವುದು ಕಷ್ಟ ಮತ್ತು ಅವರು ಅಲ್ಪಸಂಖ್ಯಾತ ಸಮುದಾಯದ ಏರುತ್ತಿರುವ ಜನಸಂಖ್ಯೆಯ ಕುರಿತೇ ಮಾತನಾಡಿರುವುದು ಸ್ಪಷ್ಟ.