ಕಾಂಗ್ರೆಸ್ ಕುತಂತ್ರ? ಬಾಬಾ ರಾಮದೇವ್ ಅವರು ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬದ ಅಕ್ರಮಗಳ ಬಗ್ಗೆ ಮಾತನಾಡಿದ್ದೇ ಇದಕ್ಕೆ ಕಾರಣ. ಹಾಗೆ ಮಾತಿಗಿಳಿದವರನ್ನು ಕಾಂಗ್ರೆಸ್ ಇದೇ ರೀತಿಯ ಹಣಿಯುತ್ತಾ ಬಂದಿದೆ ಎಂದು ರಾಮದೇವ್ ಅನುಯಾಯಿಗಳು ಆರೋಪಿಸಿದ್ದಾರೆ.
ಕಪ್ಪುಹಣದ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವ ರಾಮದೇವ್, ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಪ್ಪುಹಣವನ್ನು ಯಾಕೆ ಭಾರತಕ್ಕೆ ತರುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಕಾಂಗ್ರೆಸ್ ಸಂಸದನೊಬ್ಬ ವೇದಿಕೆಯಲ್ಲೇ ರಾಮದೇವ್ ಅವರನ್ನು ನಾಯಿ ಮತ್ತು ಬ್ಲಡಿ ಇಂಡಿಯನ್ ಎಂದು ಜರೆದಿದ್ದ.
ತನ್ನ ಆಸ್ತಿಗಳ ಕುರಿತು ತನಿಖೆ ನಡೆಸಬೇಕು ಎಂಬ ಒತ್ತಾಯಗಳಿಗೆ ಪ್ರತಿಕ್ರಿಯಿಸಿರುವ ರಾಮದೇವ್, ನಾನು ದೇಶಭಕ್ತ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ. ಈ ಹಿಂದೆಯೂ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ನನ್ನ ಸಂಸ್ಥೆಯನ್ನು ತನಿಖೆಗೊಳಪಡಿಸಿವೆ. ಎಲ್ಲವೂ ಸರಿಯಾಗಿದ್ದವು. ಈಗಲೂ ಅಷ್ಟೆ. ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
ಪತಂಜಲಿ ಯೋಗಪೀಠದ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಕೂಡ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಆಶ್ರಮದ ಎಲ್ಲಾ ದಾಖಲೆಗಳು ಸ್ವಚ್ಛವಾಗಿವೆ, ಪಾರದರ್ಶಕವಾಗಿವೆ. ಹರಿದ್ವಾರದಲ್ಲಿ ಪ್ರಮುಖ ಕೇಂದ್ರವನ್ನು ಹೊಂದಿರುವುದು, ಆಸ್ತಿ ಇರುವುದು ಹೌದು. ಇದನ್ನು ಯಾವುದೇ ತನಿಖೆಗೆ ಒಳಪಡಿಸುವುದಾದರೆ ಸ್ವಾಗತ. ನಮ್ಮ ಸಂಸ್ಥೆಯ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸುವವರು ಗಾಂಧಿ ಕುಟುಂಬವು ನಡೆಸುತ್ತಿರುವ ಸಂಸ್ಥೆಗಳ ತನಿಖೆಗೂ ಒತ್ತಾಯಿಸಬೇಕು ಎಂದು ಹೇಳಿದರು.