ಸಾಧುಗಳಿಂದಲೇ ತನಿಖೆಗೆ ಆಗ್ರಹ... ಬಾಬಾ ರಾಮದೇವ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಅತ್ತ ಸಾಧುಗಳು ಎದ್ದು ನಿಂತಿದ್ದಾರೆ. ರಾಮದೇವ್ ಅವರ ಮೇಲಿನ ಆರೋಪಗಳನ್ನು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾಧುಗಳ ಪ್ರಮುಖ ಸಂಘಟನೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ ಈ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಗೆ ಪತ್ರ ಬರೆಯಲು ಯೋಚಿಸುತ್ತಿದೆ. ಯೋಗ ಗುರು ರಾಮದೇವ್ ಅವರ ಆಸ್ತಿ-ಪಾಸ್ತಿ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎನ್ನುವುದು ಅವರ ಬೇಡಿಕೆ.
ದಶಕದ ಹಿಂದೆ ರಾಮದೇವ್ ಸೈಕಲ್ ತುಳಿಯುತ್ತಿದ್ದರು. ತನ್ನ ಸೈಕಲ್ಲಿನ ಪಂಕ್ಚರ್ ಆದ ಟೈರನ್ನು ರಿಪೇರಿ ಮಾಡಿಸಲು ಕೂಡ ಅವರಲ್ಲಿ ಹಣವಿರಲಿಲ್ಲ. ಈಗ ಅವರು ಹೆಲಿಕಾಪ್ಟರಿನಲ್ಲಿ ಓಡಾಡುತ್ತಿದ್ದಾರೆ. ಹಾಗಾಗಿ ರಾಮದೇವ್ ಆಶ್ರಮದ ಆದಾಯ ಮತ್ತು ಆಸ್ತಿಗಳ ಕುರಿತು ತನಿಖೆ ನಡೆಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಅಖಾಡ ಪರಿಷತ್ ರಾಷ್ಟ್ರೀಯ ವಕ್ತಾರ ಬಾಬಾ ಹಠಯೋಗಿ ಆಗ್ರಹಿಸಿದ್ದಾರೆ.
ಉತ್ತರಾಖಂಡ ಕ್ರಾಂತಿ ದಳ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ರಾಮದೇವ್ ಅವರು ತನ್ನ ಅಕ್ರಮ ಆಸ್ತಿಯನ್ನು ಮುಚ್ಚಿಡಲು ಕಪ್ಪುಹಣದ ಬಗ್ಗೆ ಅರಚುತ್ತಿದ್ದಾರೆ. ತನ್ನ ಕಪ್ಪುಹಣವನ್ನು ರಕ್ಷಿಸುವ ಸಲುವಾಗಿಯೇ ಅವರು ರಾಜಕೀಯಕ್ಕೆ ಬರುವ ಯೋಚನೆಯಲ್ಲಿದ್ದಾರೆ ಎಂದು ಕ್ರಾಂತಿ ದಳದ ಅಧ್ಯಕ್ಷ ತ್ರಿವೇಂದ್ರ ಪನ್ವಾರ್ ಆರೋಪಿಸಿದ್ದಾರೆ. (ಮುಂದಿನ ಪುಟ ನೋಡಿ)