ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ ವಿರೋಧಿ ಚಳವಳಿ ಹಿಂದೆ ಆರೆಸ್ಸೆಸ್: ಚಿದಂಬರಂ (Corruption, Chidambaram, Anna Hazare, Baba Ramdev, RSS)
ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಚಳವಳಿಯ ಅಲೆಯ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕೂಡ ಸಾರಾಸಗಟಾಗಿ ಘೋಷಿಸಿದ್ದು, ಭ್ರಷ್ಟಾಚಾರದ ವಿಷಯ ಎತ್ತುವ ಯಾರಿಗಾದರೂ ಸಂಘವು ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ದೂರದರ್ಶನಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, "ಬಾಬಾ ರಾಮದೇವ್ ಹಿಂದೆ ಯಾರಿದ್ದಾರೆ ಎಂಬುದನ್ನು ನೀವು ತಿಳಿಯಬೇಕು. ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಮಾವೇಶದಲ್ಲಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಲ್ಲ ಸಂಘಟನೆಗಳು ಹಾಗೂ ವ್ಯಕ್ತಿಗಳನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಗಿತ್ತು" ಎಂದು ತಿಳಿಸಿದರು. ಆದರೆ ಪುತ್ತೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟದ ನಿರ್ಣಯ ಕೈಗೊಂಡಿರುವುದನ್ನು ಈಗಾಗಲೇ ಆರೆಸ್ಸೆಸ್ ಒಪ್ಪಿಕೊಂಡಿರುವುದು ಬಹುಶಃ ಗೃಹ ಸಚಿವರ ಗಮನಕ್ಕೆ ಬಂದಂತಿಲ್ಲ.

ಏಪ್ರಿಲ್ 2ರಂದು ಬಾಬಾ ರಾಮದೇವ್ ಪೋಷಕರಾಗಿರುವ ಭ್ರಷ್ಟಾಚಾರ-ವಿರೋಧಿ ವೇದಿಕೆಯೊಂದನ್ನು ಆರೆಸ್ಸೆಸ್ ಘೋಷಿಸಿತು ಎಂದು ಚಿದಂಬರಂ ತಿಳಿಸಿದರು.

ಮಾಧ್ಯಮಗಳಿಂದ ಪ್ರಜಾಪ್ರಭುತ್ವಕ್ಕೆ ಕುಂದು
ಅಣ್ಣಾ ಹಜಾರೆ, ಬಾಬಾ ರಾಮದೇವ್ ಮತ್ತು ಇತರರು ಭ್ರಷ್ಟಾಚಾರ ವಿರುದ್ಧ ಮಾಡುತ್ತಿರುವ ಹೋರಾಟದ ಕುರಿತಾಗಿ "ಕೆಲವು" ಮಾಧ್ಯಮಗಳು "ಸ್ಪರ್ಧಾತ್ಮಕ ಕವರೇಜ್ ಜನಪ್ರಿಯತೆ"ಯಲ್ಲಿ ತೊಡಗಿದವು ಎಂದು ಆರೋಪಿಸಿದ ಚಿದಂಬರಂ, ಇದು ಸಂಸದೀಯ ಪ್ರಜಾಪ್ರಭುತ್ವದ ಘನತೆಯನ್ನು ತಗ್ಗಿಸಿದೆ ಎಂದು ಹೇಳಿದರು.

"ಮಾಧ್ಯಮಗಳು, ನಾನೀಗ ಬಹಿರಂಗಪಡಿಸಲಾಗದ ಕಾರಣಕ್ಕಾಗಿ, ಈ ಆಂದೋಲನಗಳ ಕವರೇಜ್‌ಗೆ ಸ್ಪರ್ಧಾತ್ಮಕತೆ ತೋರುತ್ತಿವೆ. ಇದು ಸಂಸದೀಯ ಪ್ರಜಾಪ್ರಭುತ್ವದ ಘನತೆಗೆ ಕುಂದು ತಂದಿದೆ" ಎಂದು ಹೇಳಿದರು.

ಭ್ರಷ್ಟಾಚಾರದ ವಿರುದ್ಧ ನಾಗರಿಕ ಸಮಾಜ ಧ್ವನಿಯೆತ್ತಿರುವುದನ್ನು ತಾನು ಬೆಂಬಲಿಸುವುದಾಗಿ ತಿಳಿಸಿದ ಅವರು, ಆದರೆ, ಚುನಾಯಿತ ಜನಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಗಳನ್ನು, ಜವಾಬ್ದಾರಿಗಳನ್ನು ನಾಗರಿಕ ಸಮಾಜದ ಕೈಗೆ ಒಪ್ಪಿಸಬೇಕೆಂಬ ಅವರ ಬೇಡಿಕೆಯನ್ನು ಬೆಂಬಲಿಸುವುದಿಲ್ಲ. ಈ ದೇಶದ ಪಂಚಾಂಗವೇ ಸಂಸದೀಯ ಪ್ರಜಾಪ್ರಭುತ್ವ ಎಂಬುದನ್ನು ಮರೆಯಬಾರದು ಎಂದರು.

ಭ್ರಷ್ಟಾಚಾರದ ಕುರಿತು ಟೆಲಿವಿಷನ್‌ನಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರಿಗೆ ಸವಾಲೊಡ್ಡಿರುವ ನಾಗರಿಕ ಸಮಾಜ ಸದಸ್ಯರ ಕ್ರಮವನ್ನು ಟೀಕಿಸಿದ ಅವರು, "ವಿತ್ತ ಸಚಿವರನ್ನೇ ಚರ್ಚೆಗೆ ಯಾರಾದರೂ ಸವಾಲೊಡ್ಡುತ್ತಾರೆ ಎಂದಾದರೆ, ಚರ್ಚೆ ನಡೆಯುವುದು ಹೊರಗೆಲ್ಲೋ ಅಲ್ಲ, ಸಂಸತ್ತಿನ ಒಳಗೆ ಎಂಬುದನ್ನು ಅವರು ಅರ್ಥೈಸಿಕೊಳ್ಳಬೇಕು. ಸಂಸದೀಯ ಚರ್ಚೆಗಳೆಲ್ಲವೂ ಪ್ರಸಾರವಾಗುತ್ತವೆ ಮತ್ತು ಮತದಾರರು ಇವುಗಳನ್ನು ನೋಡುತ್ತಿರುತ್ತಾರೆ. ಕಾಲದಿಂದ ಕಾಲಕ್ಕೆ ತಮ್ಮ ಮತದಾನದ ಹಕ್ಕುಗಳನ್ನು ತಮಗೆ ಬೇಕಾದಂತೆ ಚಲಾಯಿಸುತ್ತಿರುತ್ತಾರೆ" ಎಂದರು.
ಇವನ್ನೂ ಓದಿ