ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » '2ಜಿ' ಪ್ರಧಾನಿಗೆ ಗೊತ್ತಿತ್ತು, ನಿರಾಕರಿಸಲಿ ನೋಡೋಣ: ರಾಜಾ (2G Spectrum Scam | Manmohan Singh | Chidambaram Dragged | A Raja)
ತನ್ನನ್ನು ತಿಹಾರ್ ಜೈಲಿಗೆ ತಳ್ಳಲು ಕಾರಣವಾದ 2ಜಿ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ, ಡಿಎಂಕೆ ಸಂಸದ ಎ.ರಾಜಾ ನ್ಯಾಯಾಲಯದಲ್ಲಿ ಸೋಮವಾರ ಬಲವಾಗಿಯೇ ಸಮರ್ಥಿಸಿಕೊಂಡಿದ್ದಾರಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರನ್ನೂ ಎಳೆದು ತಂದಿದ್ದಾರೆ. ಪ್ರಧಾನಿ ಎದುರಲ್ಲೇ ಚಿದಂಬರಂ ಸ್ಪೆಕ್ಟ್ರಂ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಧಾನಿ ನಿರಾಕರಿಸಲಿ ನೋಡೋಣ ಎಂದು ನ್ಯಾಯಾಲಯದಲ್ಲಿ ನೇರವಾಗಿ ಸವಾಲು ಹಾಕಿರುವುದರೊಂದಿಗೆ ದೇಶಾದ್ಯಂತ ರಾಜಕೀಯ ಕೋಲಾಹಲವೆಬ್ಬಿಸಿದ ಹಗರಣವು ಹೊಸ ತಿರುವು ಪಡೆದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ಚಿದಂಬರಂ ಪಾತ್ರವಿರುವ ಕುರಿತು ಈಗಾಗಲೇ ಬಿಜೆಪಿ ಸಂಸದ ಮುರಳಿ ಮನೋಹರ ಜೋಷಿ ನೇತೃತ್ವದ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ತನಿಖಾ ವರದಿ ಸಿದ್ಧಪಡಿಸಿತ್ತು. ಆದರೆ ಕಾಂಗ್ರೆಸ್ ಹಾಗೂ ಯುಪಿಎ ಸದಸ್ಯರು ಈ ವರದಿಯು ಸ್ವೀಕಾರವಾಗದಂತೆ ನೋಡಿಕೊಂಡಿದ್ದು, ಪ್ರಧಾನಿ, ಚಿದಂಬರಂ ಹೆಸರು ಹೊರಗೆ ಬಾರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಸಂಸತ್ತಿನಲ್ಲಿಯೂ ಎ.ರಾಜಾ ಅವರಿಗೆ ಇದರ ಕುರಿತು ಧ್ವನಿಯೆತ್ತಲು ಅವಕಾಶ ದೊರೆತಿರಲಿಲ್ಲ. ಆದರೆ ತನ್ನನ್ನು ಮಾತ್ರ ಜೈಲಿಗೆ ತಳ್ಳಲಾಗಿರುವುದರಿಂದ ಹತಾಶಗೊಂಡಿರುವ ಎ.ರಾಜಾ ಈಗ ನ್ಯಾಯಾಲಯದಲ್ಲಿ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

2ಜಿ ತರಂಗಗುಚ್ಛವನ್ನು ಹಲವು ಕಂಪನಿಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿರುವ ವಿಷಯ ಪ್ರಧಾನಿಗೆ ಮತ್ತು ಚಿದಂಬರಂಗೆ ಗೊತ್ತಿತ್ತು ಎಂದು ಎ.ರಾಜಾ ನ್ಯಾಯಾಲಯದಲ್ಲೇ ಹೇಳಿದ್ದಾರೆ. "ಅಂದಿನ ವಿತ್ತ ಸಚಿವ ಚಿದಂಬರಂ ಅವರು ಪ್ರಧಾನಿಯ ಎದುರೇ ಈ ಮಾರಾಟಕ್ಕೆ ಅನುಮೋದನೆ ನೀಡಿದ್ದರು. ಅದನ್ನು ಪ್ರಧಾನಿ ನಿರಾಕರಿಸಲಿ ನೋಡೋಣ" ಎಂದೂ ರಾಜಾ ಸವಾಲು ಹಾಕಿದ್ದಾರೆ.

2008ರಲ್ಲಿ ಅನರ್ಹ ಕಂಪನಿಗಳಿಗೂ 2ಜಿ ಸ್ಪೆಕ್ಟ್ರಂ ಕಡಿಮೆ ಬೆಲೆಗೆ ಹಂಚಿದ ಆರೋಪದಲ್ಲಿ ಟೆಲಿಕಾಂ ಸಚಿವರಾಗಿದ್ದ ಎ.ರಾಜಾ ಅವರನ್ನು ಕಳೆದ ನವೆಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು. ಕಡಿಮೆ ಬೆಲೆಗೆ ಸ್ಪೆಕ್ಟ್ರಂ ಪಡಂದಿದ್ದ ಯುನಿಟೆಕ್ ವೈರ್‌ಲೆಸ್ ಹಾಗೂ ಡಿಬಿ ರಿಯಾಲ್ಟಿ ಕಂಪನಿಗಳು ಅದನ್ನು ಭಾರೀ ಬೆಲೆಗೆ ಅನುಕ್ರಮವಾಗಿ ಟೆಲಿನಾರ್ ಮತ್ತು ಎಟಿಸಲಟ್ ಕಂಪನಿಗಳಿಗೆ ಮಾರಿದ್ದವು. ಸರಕಾರಕ್ಕೆ ಬರಬೇಕಾಗಿದ್ದ ಹಣವನ್ನು ಈ ಖಾಸಗಿ ಕಂಪನಿಗಳು ಸೆಳೆದುಕೊಂಡವು ಎಂಬುದು ಹಗರಣದ ಪ್ರಧಾನ ಆರೋಪ.

"ಇಲ್ಲಿ ಅಪರಾಧ ಎಲ್ಲಿದೆ? ಸಂಚು ಎಲ್ಲಿದೆ? ಟೆಲಿನಾರ್ ಕಂಪನಿಯು ಯುನಿಟೆಕ್‌ನಿಂದಲೂ, ಎಟಿಸಲಟ್ ಕಂಪನಿಯು ಡಿಬಿ ರಿಯಾಲ್ಟಿಯಿಂದಲೂ ಕಾರ್ಪೊರೇಟ್ ಕಾನೂನಿನ ಅನ್ವಯವೇ ಕಾನೂನುಬದ್ಧವಾಗಿಯೇ ಖರೀದಿಸಿದೆ. ಪ್ರಧಾನಿಯ ಎದುರೇ ವಿತ್ತ ಸಚಿವರು ಈ ಮಾರಾಟಕ್ಕೆ ಅನುಮೋದನೆ ನೀಡಿದ್ದರು. ಇದನ್ನು ಪ್ರಧಾನಿ ನಿರಾಕರಿಸಲಿ ನೋಡೋಣ" ಎಂದು ಬಲವಾಗಿಯೇ ವಾದಿಸಿದ ಎ.ರಾಜಾ, ನಾನು ಸ್ಪೆಕ್ಟ್ರಂ ಹಂಚಿದ ಬಳಿಕ ಟೆಲಿಕಾ ಕಂಪನಿಗಳು ಅದನ್ನು ಏನು ಮಾಡುತ್ತವೆ ಎಂಬುದಕ್ಕೆ ನಾನು ಹೊಣೆಯಾಗುವುದಿಲ್ಲ ಎಂದರು.

ಮೊದಲು ಬಂದವರಿಗೆ ಆದ್ಯತೆಯ ಆಧಾರದಲ್ಲಿ ಸ್ಪೆಕ್ಟ್ರಂ ಹಂಚುವ ಬದಲಾಗಿ, ಹರಾಜು ಹಾಕುವುದಕ್ಕೆ ವಿರೋಧಿಸಿದ್ದು ಯಾಕೆ ಎಂದು ಕೇಳಿದಾಗ, ನಾನು ಅನುಸರಿಸಿದ ನೀತಿಯೇ ತಪ್ಪೆಂದಾದರೆ, 1993ರಿಂದೀಚೆಗೆ ಅಧಿಕಾರದಲ್ಲಿದ್ದ ಎಲ್ಲ ಟೆಲಿಕಾಂ ಸಚಿವರನ್ನೂ ಬಂಧಿಸಬೇಕಾಗುತ್ತದೆ. ನಾನು ಹಿಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ರೂಪಿಸಿದ್ದ ನೀತಿಯನ್ನಷ್ಟೇ ಅನುಸರಿಸಿದ್ದೇನೆ ಎಂದು ಉತ್ತರಿಸಿದರು ರಾಜಾ. ನಾನೇನಾದರೂ ಹರಾಜು ಹಾಕಿದ್ದರೆ, ಅದೊಂದು ಅಪರಾಧವಾಗುತ್ತಿತ್ತು. ಯಾಕೆಂದರೆ ಅದು ಸಂಪುಟದ ನಿರ್ಣಯವೂ ಆಗಿತ್ತು ಎಂದೂ ಹೇಳಿದರು.

ಎನ್‌ಡಿಎ ಟೆಲಿಕಾಂ ಸಚಿವ ಅರುಣ್ ಶೌರಿ ಅವರು 26, ನಂತರ 2004ರ ಯುಪಿಎ ಸರಕಾರದಲ್ಲಿ ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್ 25 ಹಾಗೂ ನಾನು 122 ಲೈಸೆನ್ಸ್‌ಗಳನ್ನು ವಿತರಿಸಿದ್ದೇನೆ. ಇಲ್ಲಿ ಸಂಖ್ಯೆಗಳು ಮುಖ್ಯವಲ್ಲ. ಅವರು ಯಾರು ಕೂಡ ಸ್ಪೆಕ್ಟ್ರಂ ಅನ್ನು ಹರಾಜು ಹಾಕಿರಲಿಲ್ಲ ಎಂಬುದು ಮುಖ್ಯ. ಅವರು ತಪ್ಪು ಮಾಡಿಲ್ಲವೆಂದಾದರೆ, ನನ್ನನ್ನೇಕೆ ಪ್ರಶ್ನಿಸಲಾಗುತ್ತದೆ? ಅವರು ಹೀಗೆ ಮಾಡಿಲ್ಲ ಅಂತ ಹೇಳಲಿ ನೋಡೋಣ. 2ಜಿ ಸ್ಪೆಕ್ಟ್ರಂ ಅನ್ನು ಹರಾಜು ಮಾಡದಂತೆ 2003ರಲ್ಲಿ ಸಂಪುಟ ಕೈಗೊಂಡ ನಿರ್ಣಯವನ್ನಷ್ಟೇ ನಾನು ಅನುಸರಿಸಿದ್ದೇನೆ. ನಾನು ಈ ಕಾನೂನನ್ನು ಪಾಲಿಸುತ್ತಿರುವಾಗ, ನನಗೇಕೆ ಈ ಶಿಕ್ಷೆ? ವಾಸ್ತವವಾಗಿ ನನ್ನನ್ನು ಗೌರವಿಸಬೇಕಾಗಿದೆ ಎಂದರು ರಾಜಾ.

ಎ.ರಾಜಾ ಅವರು ನೇರವಾಗಿ ಪ್ರಧಾನಿ ಹಾಗೂ ಚಿದಂಬರಂ ಅವರನ್ನು ಹಗರಣದಲ್ಲಿ ಎಳೆದು ತಂದಿದ್ದು ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ರಾಜಾ ಅವರ ಡಿಎಂಕೆ ಪಕ್ಷವು ನಿಗೂಢ ಮೌನ ಆವರಿಸಿದೆ. ಚಿದಂಬರಂ ಈಗಾಗಲೇ ಸುದ್ದಿಗೋಷ್ಠಿ ಕರೆಯುತ್ತಿದ್ದಾರೆ. ಬಿಜೆಪಿಯೂ ಕತ್ತಿ ಮಸೆಯತೊಡಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: 2ಜಿ ಹಗರಣ, ಪ್ರಧಾನಿ ಮನಮೋಹನ್ ಸಿಂಗ್, ಎರಾಜಾ, ಚಿದಂಬರಂ, ಸ್ಪೆಕ್ಟ್ರಂ ಹಂಚಿಕೆ, ಟೆಲಿಕಾಂ ಹಗರಣ, ಡಿಎಂಕೆ, ಕಾಂಗ್ರೆಸ್, ತಿಹಾರ್, ರಾಜಾ ವಿಚಾರಣೆ