ಮುಖ್ಯಮಂತ್ರಿಗಳು ಪ್ರತಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿರುವ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಹಿತ ದೃಷ್ಟಿಯಿಂದ ತಾನು ನಿಯೋಗದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಅದೇ ಹೊತ್ತಿಗೆ ಸರ್ವ ಪಕ್ಷ ಮುಖಂಡರಿಗೆ ಸಿಎಂ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ತಗಾದೆ ತೆಗೆದಿದ್ದಾರೆ.
ನಿಯೋಗಕ್ಕೆ ಖರ್ಗೆ.. ಹೆಚ್ಚುವರಿ ನೆರೆ ಪರಿಹಾರಕ್ಕಾಗಿ ಕೇಂದ್ರ ಸರಕಾರದ ಮೊರೆ ಹೋಗಲಿರುವ ನಿಯೋಗದೊಂದಿಗೆ ರಾಜ್ಯದ ಹಿತದೃಷ್ಟಿಯಿಂದ ತಾನು ಸೇರಿಕೊಳ್ಳಲಿರುವುದಾಗಿ ಖರ್ಗೆ ತಿಳಿಸಿದ್ದಾರೆ.
ಆದರೆ ಕೇಂದ್ರಕ್ಕೆ ರಾಜ್ಯವು ಸಲ್ಲಿಸಲಿರುವ ಮನವಿ ಪತ್ರದ ಪ್ರತಿ ನನಗಿನ್ನೂ ತಲುಪಿಲ್ಲ ಎಂದು ಅವರು ತಿಳಿಸಿದ್ದಾರೆ.
ನೆರೆ ಪರಿಹಾರ ಸಂಬಂಧ ಪ್ರತಿ ಪಕ್ಷಗಳ ಮುನಿಸನ್ನು ಮುಖ್ಯಮಂತ್ರಿಗಳು ಸೌಹಾರ್ದ ರೀತಿಯಿಂದ ನಿಭಾಯಿಸಬೇಕೆಂದು ಸಲಹೆ ಮಾಡಿರುವ ಖರ್ಗೆಯವರು, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಬಿಜೆಪಿಯವರು ರೋಡ್ ಶೋ ನಡೆಸೋದು ಬೇಡ ಎಂದಿದ್ದಾರೆ.
ಖರ್ಗೆಯವರ ಜತೆ ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ಸಚಿವ ಕೆ.ಎಚ್. ಮುನಿಯಪ್ಪ ಕೂಡ ಯಡಿಯೂರಪ್ಪ ನೇತೃತ್ವದ ನಿಯೋಗವನ್ನು ಸೇರಿಕೊಳ್ಳಲಿದ್ದಾರೆ.
ದೇಶಪಾಂಡೆ ಕಿಡಿ.. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಿರೋಧ ಪಕ್ಷದವರಂತೆ ವರ್ತಿಸುತ್ತಿದ್ದಾರೆ ಎಂದು ಇತ್ತ ಬೆಂಗಳೂರಿನಲ್ಲಿ ಮಾತನಾಡುತ್ತಾ ಆರ್.ವಿ. ದೇಶಪಾಂಡೆ ಆರೋಪಿಸಿದ್ದಾರೆ.
ಹೆಚ್ಚುವರಿ ನೆರೆ ಪರಿಹಾರ ಸಂಬಂಧ ಕೇಂದ್ರಕ್ಕೆ ಒಯ್ಯುವ ನಿಯೋಗವನ್ನು ಸೇರಿಕೊಳ್ಳಲು ಯಡಿಯೂರಪ್ಪನವರು ಸದನದ ಪ್ರಮುಖರಿಗೆ ಮಾತ್ರ ಆಹ್ವಾನ ನೀಡಿದ್ದಾರೆ. ಸರ್ವಪಕ್ಷ ಮುಖಂಡರಿಗೆ ನೀಡಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಅಲ್ಲದೆ ಪ್ರವಾಹ ಅನಾಹುತ ಸಮೀಕ್ಷೆ ಪೂರ್ಣಗೊಂಡ ನಂತರ ಹೆಚ್ಚಿನ ಪರಿಹಾರದ ಕುರಿತು ಮನವಿ ಸಲ್ಲಿಸಬಹುದಿತ್ತು ಎಂದು ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.