ಇಲ್ಲಿ ನಡೆಯುತ್ತಿರುವ ವಿಶ್ವ ತುಳು ಸಮ್ಮೇಳನದಲ್ಲಿ ತುಳುನಾಡಿನ ಮಣ್ಣಿನಲ್ಲಿ ಹುಟ್ಟಿದ ಎಲ್ಲಾ ಕ್ರೀಡೆಗಳನ್ನು ಆಡಿಸಲಾಗುತ್ತಿದೆ. ತುಳು ನಾಡಿನ ಎಲ್ಲಾ ಕ್ರೀಡೆಗಳನ್ನೂ ಯಾವುದೇ ವೆಚ್ಚವಿಲ್ಲದೇ ಆಡಬಹುದು ಎನ್ನುತ್ತಾರೆ ಕ್ರೀಡಾ ಸಮಿತಿಯವರು.
ಯಾವ್ಯಾವ ಆಟ: ಜಿಬಿಲಿ, ಕುಟ್ಟಿದೊಣ್ಣೆ, ಟೊಂಕ, ಬೆರ್ಚೆಂಡು, ಬುಗರಿ, ಗಾಡಿ ಬಿಡುವುದು, ಹಾಳೆಯಲ್ಲಿ ಮಕ್ಕಳನ್ನು ಎಳೆಯುವುದು, ತಪ್ಪಂಗಾಯಿ, ಪಳ್ಳಿ ಆಟ, ಲಗೋರಿ, ಚೆನ್ನೆಮಣೆ, ಮಾದರಿ ಬಳ್ಳಿಯ ಗಾಡಿ, ಟಯರ್ ಓಡಿಸುವುದು, ಪೀಪಿ ಊದುವುದು ಇತ್ಯಾದಿ ಆಟಗಳನ್ನು ನೋಡುವ ಅವಕಾಶ ವಿಶ್ವ ತುಳು ಸಮ್ಮೇಳನದಲ್ಲಿ ಇದೆ.
ಸ್ಥಳೀಯ ಹಾಗೂ ಜಿಲ್ಲೆಯ ದೂರದೂರಿನ ಶಾಲೆಗಳಿಂದ ವಿದ್ಯಾರ್ಥಿಗಳು ಈ ಆಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ವೀಕ್ಷಕರು ಈ ಆಟದಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು. ಈಗಿನ ಎಲ್ಲಾ ಆಟಗಳು ತುಳುನಾಡ ಮಣ್ಣಿನ ಕ್ರೀಡೆಗಳೊಂದಿಗೆ ಸಂಬಂಧವನ್ನು ಹೊಂದಿದೆ. ಕ್ರೀಡಾ ಲೋಕಕ್ಕೆ ಚೆಸ್ ಪರಿಚಯಿಸಿದವರು ಭಾರತೀಯರು ಎನ್ನುವುದು ಹೆಮ್ಮೆಯ ವಿಚಾರ. ಆದರೆ ಚೆಸ್ ಮೂಲ ತುಳುನಾಡಿನ ಚೆನ್ನೆಮಣೆ ಎನ್ನುವುದು ತುಳುವರೆಲ್ಲರೂ ಹೆಮ್ಮೆ ಪಡಲೇಬೇಕಾದದ್ದೇ ಎನ್ನುತ್ತಾರೆ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ದೊಡ್ಡಣ್ಣ ಬರಮೇಲು.
ಎಪ್ಪತ್ತು ಎಂಭತ್ತರ ದಶಕದಲ್ಲಿ ಎಲ್ಲರೂ ಈ ಕ್ರೀಡೆಗಳನ್ನೇ ಆಡುತ್ತಿದ್ದರು. ಈಗಿನ ಕ್ರಿಕೆಟ್ ಕ್ರೀಡಾಲೋಕ ಮತ್ತು ಟಿ.ವಿ. ಮಾಧ್ಯಮದೆಡೆ ಆಕರ್ಷಿತರಾದ ಮಕ್ಕಳೆಲ್ಲ ಈ ಕ್ರೀಡೆಗಳಿಂದ ದೂರ ಸರಿಯುತ್ತಿದ್ದಾರೆ. ಈ ವಿಶ್ವ ತುಳು ಸಮ್ಮೇಳನದ ಮೂಲಕ ಕಣ್ಮರೆಯಾಗುತ್ತಿರುವ ಅದೆಷ್ಟೊ ತುಳುನಾಡಿನ ಸಂಸ್ಕೃತಿ ಕ್ರೀಡೆಗಳನ್ನು ನಾವು ಮತ್ತೊಮ್ಮೆ ನೋಡುವಂತಾಗಿದೆ. ಇದೆಲ್ಲಾ ನೋಡುವಾಗ ನಮ್ಮ ಬಾಲ್ಯದ ನೆನಪಾಗುತ್ತದೆಎನ್ನುತ್ತಿದ್ದರು ಆ ಕ್ರೀಡೆಗಳನ್ನೆಲ್ಲಾ ನೋಡುತ್ತಾ ಖುಷಿ ಪಡುತ್ತಿದ್ದ ಹಿರಿಯ ರುಕ್ಕಯ್ಯ ಪೂಜಾರಿ.
ಸಾಂಪ್ರದಾಯಿಕ ಹಿನ್ನಲೆ: ಒಂದೊಂದು ಕ್ರೀಡೆಯೂ ಅದರದ್ದೇ ಆದ ಸಾಂಪ್ರದಾಯಿಕ ಹಿನ್ನಲೆಯನ್ನು ಹೊಂದಿದೆ. ತುಳುನಾಡಿನ ಚೆನ್ನೆ ಮಣೆ ಕ್ರೀಡೆಗೆ ಕೌಶಲ್ಯ ಮತ್ತು ಚಾಕಚಕ್ಯತೆ ಅನಿವಾರ್ಯವಾಗಿದ್ದು ಇದು ವ್ಯಕ್ತಿಯ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಈ ಕ್ರೀಡೆಯನ್ನು ಸಾಮಾನ್ಯವಾಗಿ ಆಷಾಡ ಅಥವಾ ಆಟಿ ಮಾಸದಿಂದ ಕೃಷ್ಣಾಷ್ಠಮಿಯೊಳಗೆ ಆಡಬೇಕು. ಇದಕ್ಕೆ 56 ಕಾಯಿಗಳಿದ್ದು ಶಿವಯ್ಯ ಪಯ್ಯೋಳಿಐದರಾಂತಕು ತಾರಾಂತಕು.... ಎಂದು ಹಾಡುತ್ತಾ ಇದನ್ನು ಆಡಬೇಕು ಎಂಬ ನಿಯಮವಿದೆ.
ಸಾಮರಸ್ಯ: ತುಳುನಾಡಿನ ಜಾನಪದೀಯ ಕ್ರೀಡೆಗಳಲ್ಲೊಂದಾದ ಪಳ್ಳಿ ಆಟ ಸಾಮರಸ್ಯಕ್ಕೆ ಮಾದರಿಯಾಗಿದೆ. ಈ ಆಟದಲ್ಲಿ ಇಬ್ಬರು ಕೈಯ್ಯನ್ನು ಗಟ್ಟಿಯಾಗಿ ಹಿಡಿಯಬೇಕು. ಇನ್ನಿಬ್ಬರು ಎರಡು ಬಾರಿ ಅದರೊಳ ಹೋಗಬಹುದು. ಮೂರನೇ ಬಾರಿ ಹೋಗುವಾಗ ಅವರು ಅದಕ್ಕೆ ತಡೆಯೊಡ್ಡುತ್ತಾರೆ. ಅವರಿಬ್ಬರ ಕೈಯನ್ನು ಬಿಡಿಸುವ ಪ್ರಯತ್ನದಲ್ಲಿ ಅಲ್ಲಿ ಒಂದು ರೀತಿಯ ಜಗಳವೇ ಆಗುತ್ತದೆ. ಆದರೆ ಆಟದ ನಂತರ ಹೆಗಲಿನ ಮೇಲೆ ಕೈ ಹಾಕಿಕೊಂಡು ಅವರು ಬರುವುದನ್ನು ನೋಡಿದರೆ ತುಳು ನಾಡಿನ ಸಹೋದರತ್ವದ ಸಾಮರಸ್ಯದ ಅರಿವಾಗುತ್ತದೆ.
ನಗರದಲ್ಲೆಲ್ಲಾ ನಾವು ಇಂತಹಾ ಆಟಗಳನ್ನು ನೋಡಲೂ ಸಾಧ್ಯವಿಲ್ಲ. ಅವೆಲ್ಲಾ ಅಲ್ಲೊಂದು ಮರೀಚಿಕೆ. ಆದರೆ ಇವನ್ನೆಲ್ಲಾ ನೋಡುವಾಗ ಗ್ರಾಮೀಣ ಬದುಕು ಎಷ್ಟೊಂದು ಸುಂದರ ಎನಿಸುತ್ತದೆ. ಮಕ್ಕಳು ಆಡುವಾಗ ನಾವೂ ಅಲ್ಲಿ ಆಡಬೇಕು ಎಂದೆನಿಸುತ್ತದೆ. ಈ ಎಲ್ಲಾ ಕ್ರೀಡೆಗಳು ವ್ಯಾಯಾಮದ ಜೊತೆಗೆ ಮನೋರಂಜನೆಯನ್ನು ನೀಡಬಲ್ಲದು ಎನ್ನುತ್ತಾರೆ ಬೆಂಗಳೂರಿನ ಪ್ರಶಾಂತ್.