ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಟಿ ಬದನೆ ಬಿಸಿ: ಮೆಂಟಲ್ ಆಸ್ಪತ್ರೆಗೆ ಹೋಗಿ ಎಂದ ಜೈರಾಂ! (Bt Brinjal | Jairam Ramesh | Farmers | NGO,)
Bookmark and Share Feedback Print
 
PTI
'ಪ್ರತಿಯೊಬ್ಬರ ಅಭಿಪ್ರಾಯ ಕೇಳಲು ಸಾಧ್ಯವಿಲ್ಲ. ಆದರೆ ಜನರ ಭಾವನೆಯ ವಿರುದ್ಧ ಹೋಗಲಾರೆ. ದೇಶಾದ್ಯಂತ ಶೇ.50ರಷ್ಟು ಪರ ಹಾಗೂ ವಿರೋಧವಿದೆ. ಅಷ್ಟಾಗಿಯೂ ಖಾಸಗಿ ಕಂಪನಿಗಳ ಕುತಂತ್ರವನ್ನೂ ತಾನೂ ಬಲ್ಲೆ' ಹೀಗೆಂದು ಗದ್ದಲ, ವಿರೋಧದ ನಡುವೆ ನಡೆದ ಬಿಟಿ ಬದನೆ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದವರು ಕೇಂದ್ರ ಪರಿಸರ ಖಾತೆ ಸಚಿವ ಜೈರಾಂ ರಮೇಶ್.

ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಬಿಟಿ ಬದನೆ ಕುರಿತು ನಡೆದ ಬಿಟಿ ಬದನೆ ಬೇಕೆ?ಬೇಡವೇ? ಎಂಬ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ರೈತರ, ಎನ್‌ಜಿಓ ಹಾಗೂ ತಜ್ಞರ ಜೊತೆಗಿನ ಸುಮಾರು ಮೂರುವರೆ ತಾಸುಗಳ ಪರ-ವಿರೋಧದ ಅಭಿಪ್ರಾಯ ಆಲಿಸಿದ ನಂತರ ರಮೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರೀತಿ ಇದು.

ತಾಳ್ಮೆಕಳೆದುಕೊಂಡ ಸಚಿವ ರಮೇಶ್: ಬಿಟಿ ಬದನೆ ಕುರಿತಂತೆ ಕೆಲವರು ತೀವ್ರ ವಿರೋಧದ ಹೇಳಿಕೆಯನ್ನು ನೀಡುತ್ತಿದ್ದಂತೆಯೇ ಆಕ್ರೋಶಗೊಂಡ ಸಚಿವರು, ಇಲ್ಲಾ, ನಿಮಗೆ ಮಾತನಾಡಲು ಅವಕಾಶ ಕೊಡಲ್ಲ. ಬಿಟಿ ಬದನೆ ಬಗ್ಗೆ ತಜ್ಞರು, ವೈದ್ಯರು ಮಾತ್ರ ಮಾತನಾಡಬೇಕೆಂದು ತಾಕೀತು ಮಾಡಿದರು. ಅಲ್ಲದೇ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ಆಯುರ್ವೇದ ವೈದ್ಯರೊಬ್ಬರಿಗೆ, ನೀವು ಮಾನಸಿಕವಾಗಿ ಅಸ್ವಸ್ಥರಾಗಿದ್ದೀರಿ. ನಿಮಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ನಿಮ್ಮ ಮಾತನ್ನು ನಾನು ಕೇಳಲಾರೆ ಎಂದು ತಾಳ್ಮೆ ಕಳೆದುಕೊಂಡ ಘಟನೆಯೂ ನಡೆಯಿತು. ಬಿಟಿ ಬದನೆ ಕುರಿತಂತೆ ವಿರೋಧದ ಮಾತುಗಳು ಕೇಳಿ ಬಂದಾಗಲೆಲ್ಲಾ ಸಚಿವರು ಸಿಟ್ಟಿಗೊಳಗಾಗುತ್ತಿದ್ದರು. ಸಂವಾದದ ಕೊನೆಯ ಹಂತದಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಕೂಡ ಬಿಟಿ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದಾಗಲೂ ಕೂಡ ಕೋಪಗೊಂಡಿದ್ದು ಕಂಡು ಬಂದಿತ್ತು.

ನೂರಾರು ರೈತರಿಂದ ವಿರೋಧ: ಬಿಟಿ ಬದನೆ ಕುರಿತು ಸಚಿವ ಜೈರಾಂ ರಮೇಶ್ ನೇತೃತ್ವದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ರೈತರು ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. ದೇಶಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟ ಬಿಟಿ ಬದನೆ ನಮಗೆ ಅಗತ್ಯವಿಲ್ಲ ಎಂದು ಘೋಷಣೆ ಕೂಗಿದರು. ಘೋಷಣೆಯ ನಡುವೆಯೇ ಸಚಿವರು ತಜ್ಞರ, ವೈದ್ಯರ ಅಭಿಪ್ರಾಯವನ್ನು ಆಲಿಸಿದರು.

ಬಿಟಿ ಬದನೆ ಬೆಳೆಯಲು ಅವಕಾಶ ಮಾಡಿಕೊಡುವುದರಿಂದ ದೇಶಿಯ ತಳಿಗಳು ನಾಶವಾಗುತ್ತದೆ. ಆ ನಿಟ್ಟಿನಲ್ಲಿ ಬಿಟಿ ಬೆಳೆ ಅಪಾಯಕಾರಿಯಾದದ್ದು ಎಂದು ಕೆಲವು ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ರೈತರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

ಬಿಟಿ ಬದನೆಗೆ ನನ್ನ ವಿರೋಧವಿದೆ-ಅನಂತಮೂರ್ತಿ: ಬಿಟಿ ಬದನೆ ಬೆಳೆಯಲು ವಿರೋಧ ವ್ಯಕ್ತಪಡಿಸುವವರ ಪರವಾಗಿ ನಾನು ಇದ್ದೇನೆ ಎಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅಭಿಪ್ರಾಯವ್ಯಕ್ತಪಡಿಸಿದರು. ನಮ್ಮ ದೇಶೀಯ ರೈತರನ್ನು ತಜ್ಞರ ಹಿಂದೆ ಹೋಗುವಂತೆ ಮಾಡಬೇಡಿ. ಯಾಕೆಂದರೆ ನಮ್ಮ ರೈತರಿಗೂ ಅಗಾಧವಾದ ಜ್ಞಾನವಿದೆ. ಬಿಟಿ ಬದನೆ ಬೆಳೆಯುವುದರಿಂದ ಸ್ಥಳೀಯ ಸೊಗಡು ನಾಶವಾಗುತ್ತದೆ. ನಾನು ಯಾವ ಕಂಪನಿಯ ವಕ್ತಾರನಾಗಿ ಮಾತಾಡುತ್ತಿಲ್ಲ, ನಾನೊಬ್ಬ ಜನಪ್ರತಿನಿಧಿಯಾಗಿ ಅಭಿಪ್ರಾಯ ಹಂಚಿಕೊಂಡಿದ್ದೇನೆ ಎಂದರು.

ರೈತನ ಮೇಲೆ ಪ್ರಯೋಗ ಬೇಡ-ದೇವೇಗೌಡ: ಬಿಟಿ ಬದನೆ ಕುರಿತಂತೆ ವಿಜ್ಞಾನಿಗಳಲ್ಲಿಯೇ ಪರ-ವಿರೋಧದ ಅಭಿಪ್ರಾಯಗಳಿವೆ. ಇದರಿಂದಾಗಿ ಜನಸಾಮಾನ್ಯರಿಗೆ ಗೊಂದಲ ಮೂಡುತ್ತೆ. ಏನೇ ಆದರೂ ವಿಜ್ಞಾನಿಗಳು ಯಾವುದನ್ನೂ ರೈತನ ಮೇಲೆ ಪ್ರಯೋಗ ಮಾಡಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂವಾದದ ಅಂತಿಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಟಿ ಬದನೆ ಬೆಳೆ ಕುರಿತಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೂ ಮನವಿ ಪತ್ರ ಬರೆದಿದ್ದೇನೆ, ತಮಗೂ(ಸಚಿವ ರಮೇಶ್) ಕೂಡ ಮನವಿ ಪತ್ರ ಬರೆದಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಬಿಟಿ ಬದನೆ ಬೆಳೆ ಕುರಿತಂತೆ ದೇಶದ 7ರಾಜ್ಯಗಳಲ್ಲಿ ಸುಮಾರು ಎಂಟು ಸಾವಿರ ಜನರೊಡನೆ ಸಂವಾದ ನಡೆಸಲಾಗಿದೆ. ಅದರಲ್ಲಿ ಶೇ.50ರಷ್ಟು ಪರವಾಗಿದ್ದರೆ, ಶೇ.50ರಷ್ಟು ವಿರೋಧವಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಫೆ.10ರಂದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಜೈರಾಂ ರಮೇಶ್ ಸಂವಾದದ ಅಂತ್ಯದಲ್ಲಿ ಸ್ಪಷ್ಟಪಡಿಸಿದರು.

ಕಲಾಪ ನೋಡಿ ಜನ ಗದ್ದಲ ಕಲಿತಿದ್ದಾರೆ-ಜೈರಾಂ
ಸಂಬಂಧಿತ ಮಾಹಿತಿ ಹುಡುಕಿ