ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಸತ್ ಕಲಾಪ 'ಲೈವ್' ನೋಡಿ ಜನ ಗದ್ದಲ ಕಲ್ತಿದ್ದಾರೆ: ಜೈರಾಮ್ (BT Brinjal | Jairam Ramesh | Farmer | Bangalore)
Bookmark and Share Feedback Print
 
Jairam Ramesh
PTI
ಕುಲಾಂತರಿ ಬದನೆ ಬೇಕೇ ಬೇಡವೇ ಎಂದು ಜನಾಭಿಪ್ರಾಯ ಸಂಗ್ರಹಿಸಲು ಕರೆದಿದ್ದ ಸಭೆಯಲ್ಲಿ ಜನರ ಪ್ರತಿಭಟನೆ, ಗದ್ದಲ, ಕೂಗಾಟಕ್ಕೆ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ? "ಇನ್ನು ಮುಂದೆ ಲೋಕಸಭೆ ಕಲಾಪಗಳನ್ನು ನೇರ ಪ್ರಸಾರ ಮಾಡಬಾರದು"!

ಬೆಂಗಳೂರು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ, ಬಿಟಿ ಬದನೆಯನ್ನು ದೇಶದಲ್ಲಿ ಬೆಳೆಯಬೇಕೇ ಎಂದು ರೈತರು, ವಿಜ್ಞಾನಿಗಳು, ವೈದ್ಯರು, ಎನ್‌ಜಿಒಗಳಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದ ಸಮಾವೇಶದಲ್ಲಿ ಬಹುತೇಕರು ಕುಲಾಂತರಿ ಬದನೆಯನ್ನು ವಿರೋಧಿಸಿಯೇ ಮಾತನಾಡುತ್ತಿದ್ದರು.

ಕೇಂದ್ರ ಸಚಿವರು ಬಹುತೇಕರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುತ್ತಾ, ನಿಗದಿತ ಸಮಯದಲ್ಲಿ ಮುಗಿಸುವಂತೆ ಕೇಳಿಕೊಳ್ಳುತ್ತಿದ್ದರು. ಬಿಟಿ ಬದನೆ ವಿರೋಧಿಸಿದ ಭಾಷಣಕಾರರ ಮಾತುಗಳಿಗೆ ಸಾಕಷ್ಟು ಕರತಾಡನ, ಶಿಳ್ಳೆ, ಗದ್ದಲ ನಡುವೆಯೇ, ವಿರೋಧಿಸಿ ಕೂಗಾಡುವವರ ಸಂಖ್ಯೆಯೂ ಹೆಚ್ಚಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಸಭೆಯ ಕಲಾಪಗಳನ್ನು ನೇರ ಪ್ರಸಾರ ಮಾಡದಂತೆ ಸ್ಪೀಕರ್‌ಗೆ ಮನವಿ ಮಾಡಬೇಕಾಗಿದೆ ಎಂದರು. ಜನರು ಟಿವಿಯಲ್ಲಿ ನಮ್ಮ ಸಂಸದರು ಮಾಡಿದ್ದನ್ನು ನೋಡಿಯೇ ಈ ರೀತಿಯ ಸಮಾವೇಶಗಳಲ್ಲಿಯೂ ಗದ್ದಲ, ಕೂಗಾಟ, ಕೋಲಾಹಲ ಮಾಡುತ್ತಿದ್ದಾರೆ ಎಂಬುದು ಅವರ ಮಾತಿನ ಹಿಂದಿರುವ ತಥ್ಯವಾಗಿತ್ತು.

ಪಕ್ಕದಲ್ಲೇ ಕುಳಿತಿದ್ದ ಮಾಜಿ ಪ್ರಧಾನಿ, ಹಸಿರು ಶಾಲು ಹೊದ್ದ, ರೈತರ ಹೆಮ್ಮೆಯ ಪುತ್ರ ಎಚ್.ಡಿ.ದೇವೇಗೌಡರು ನಗುಮುಖದಿಂದಲೇ ಬದನೆಕಾಯಿಗಳನ್ನು ಕೈಯಲ್ಲಿ ಹಿಡಿದು ಪಿಳಿಪಿಳಿ ನೋಡುತ್ತಿದ್ದುದು ಗಮನ ಸೆಳೆಯಿತು.

ಎಲ್ಲರ ಸಲಹೆ ಅಭಿಪ್ರಾಯಗಳನ್ನು ಕೇಳುವುದು ಅಸಾಧ್ಯವಾದ ಮಾತು, ನಿಮ್ಮ ಅಭಿಪ್ರಾಯಗಳನ್ನು ಇ-ಮೇಲ್ ಮೂಲಕವೂ ತಿಳಿಸಬಹುದು ಎಂದು ಜೈರಾಮ್ ರಮೇಶ್ ಅವರು ತಮ್ಮ ಇ-ಮೇಲ್ ವಿಳಾಸವನ್ನೂ (jairam54 @ gmail.com) ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ