ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುತಾಲಿಕ್ ಮುಖಕ್ಕೆ ಮಸಿ; ಹಲವೆಡೆ ಬಂದ್, ಕಲ್ಲುತೂರಾಟ (Pramod Mutalik | Srirama Sene | Prema Yuddha | valentines day)
Bookmark and Share Feedback Print
 
ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ ಬಳಿದ ಘಟನೆಯನ್ನು ವಿರೋಧಿಸಿ ರಾಜ್ಯದ ಹಲವು ನಗರಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಮಂಗಳೂರಿನಲ್ಲಿ ಹಲವು ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.

ಹುಬ್ಬಳ್ಳಿ-ಧಾರವಾಡ, ನವಲಗುಂದ, ಮಂಗಳೂರು ಮುಂತಾದೆಡೆ ಬಂದ್‌ಗೆ ಶ್ರೀರಾಮ ಸೇನೆ ಕರೆ ನೀಡಿದೆ. ಬಂದ್ ಬಗ್ಗೆ ಹೆಚ್ಚಿನ ಕಡೆ ಗಂಭೀರವಾಗಿ ಪರಿಗಣಿಸಲಾಗಿರದಿದ್ದರೂ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿದ ಕೆಲವು ಪ್ರಕರಣಗಳು ವರದಿಯಾಗಿವೆ.
Mutalik
PTI


ಖಾಸಗಿ ಟೀವಿ ವಾಹಿನಿಯೊಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಾಲೆಂಟೈನ್ಸ್ ಡೇ ಕುರಿತ 'ಪ್ರೇಮ ಯುದ್ಧ' ಎಂಬ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಹಾಗೂ ಗಿರಿಧರ್ ಅವರ ಜತೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೂಡ ಪಾಲ್ಗೊಂಡಿದ್ದರು.

ವಾಲೆಂಟೈನ್ಸ್ ಡೇ ಪರ-ವಿರೋಧ ಸಂವಾದ ತಾರಕಕ್ಕೇರುತ್ತಿದ್ದಂತೆ ಏಕಾಏಕಿ ವೇದಿಕೆಗೆ ನುಗ್ಗಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತಾಲಿಕ್ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ಸಂದರ್ಭದಲ್ಲಿ ನೆಲಕ್ಕುರುಳಿದರೂ ಮತ್ತೆ ಎದ್ದು ನಿಲ್ಲಿಸಿ ಮಸಿ ಬಳಿಯಲಾಯಿತು. ನಂತರ ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತು ಪೊಲೀಸರು ಅವರಿಗೆ ರಕ್ಷಣೆ ನೀಡಿದ್ದರು.

ಘಟನೆಯನ್ನು ಖಂಡಿಸಿದ್ದ ಮುತಾಲಿಕ್, ಇದು ನನ್ನ ಮೇಲಿನ ದಾಳಿಯಲ್ಲ. ಹಿಂದೂ ಸಮಾಜದ ಮೇಲೆ ನಡೆದ ದಾಳಿ. ಮುಖಕ್ಕೆ ಮಸಿ ಬಳಿಯುವ ಮೂಲಕ ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ ನಡೆಸಲಾಗಿದೆ. ಅಂತವರಿಗೆ ನಮ್ಮ ಕಾರ್ಯಕರ್ತರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಗುಡುಗಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು: ಯುವ ಕಾಂಗ್ರೆಸಿಗರಿಂದ ಮುತಾಲಿಕ್ ಮುಖಕ್ಕೆ ಮಸಿ

ಹುಬ್ಬಳ್ಳಿ-ಧಾರವಾಡ ಬಂದ್...
ಮುತಾಲಿಕ್ ಅವರಿಗೆ ಮಸಿ ಬಳಿದುದನ್ನು ಖಂಡಿಸಿ ಹುಬ್ಬಳ್ಳಿಯ ಶ್ರೀರಾಮ ಸೇನೆ ನಾಯಕರು ನಗರ ಬಂದ್‌ಗೆ ಗುರುವಾರ ರಾತ್ರಿಯೇ ಕರೆ ನೀಡಿದ್ದರು. ಆದರೆ ಬಂದ್‌ ಸಾಮಾನ್ಯ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಎಸಿಪಿ ಎನ್.ಎಸ್. ಪಾಟೀಲ್ ತಿಳಿಸಿದ್ದಾರೆ.

ಗುರುವಾರ ರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಹಲವು ಬಸ್ಸುಗಳಿಗೆ ಬೆಂಕಿ ಹಚ್ಚುವ ವಿಫಲ ಯತ್ನ ನಡೆಸಿದ್ದು, ಅವರನ್ನು ಬಂಧಿಸಲಾಗಿದೆ. ಮುನ್ನೆಚ್ಚೆರಿಕೆ ಕ್ರಮವಾಗಿ ಶ್ರೀರಾಮ ಸೇನೆಯ ಹಲವು ನಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವಲಗುಂದಾದಲ್ಲಿ ಬಸ್‌ಗೆ ಬೆಂಕಿ....
ನವಲಗುಂದಾದಲ್ಲಿ ಸರಕಾರಿ ಬಸ್ಸೊಂದಕ್ಕೆ ಆಕ್ರೋಶಿತ ಶ್ರೀರಾಮ ಸೇನೆ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ಘಟನೆಯಿಂದ ಬಸ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಗುರುವಾರ ಬೆಂಗಳೂರಿನಲ್ಲಿ ಮುತಾಲಿಕ್ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮಸಿ ಬಳಿದ ಸ್ವಲ್ಪವೇ ಹೊತ್ತಿನಲ್ಲಿ ನವಲಗುಂದಾದಲ್ಲಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ 15 ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಇಲ್ಲಿ ಖಾಸಗಿ ವಾಹನವೊಂದನ್ನೂ ಜಖಂಗೊಳಿಸಲಾಗಿದೆ. ಕೆಲವೆಡೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನೂ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಇಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ನಿಧಾನವಾಗಿ ಆರಂಭಗೊಂಡಿದೆ ಎಂದು ಮೂಲಗಳು ಹೇಳಿವೆ.

ಮಂಗಳೂರಿನಲ್ಲಿ ಹಿಂಸಾಚಾರ...
ಮಂಗಳೂರಿನಲ್ಲಿ 10ಕ್ಕೂ ಹೆಚ್ಚು ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಗಿದ್ದು, ಶ್ರೀರಾಮ ಸೇನೆ ನಾಯಕರು ಸೇರಿದಂತೆ ಸುಮಾರು 35 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಗೋಪಾಲ ಹೊಸೂರ್ ತಿಳಿಸಿದ್ದಾರೆ.

ವಾಮಂಜೂರು, ಕಂಕನಾಡಿ, ಪಂಪ್‌ವೆಲ್, ನಂತೂರು, ಮರೋಳಿ, ಕಪಿತಾನಿಯೋ, ಪಡೀಲ್, ನೀರುಮಾರ್ಗ ಮುಂತಾದೆಡೆ ಸರಕಾರಿ ಹಾಗೂ ಖಾಸಗಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಶ್ರೀರಾಮ ಸೇನೆ ಅನಧಿಕೃತವಾಗಿ ಮಂಗಳೂರು ಬಂದ್‌ಗೆ ಕರೆ ನೀಡಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಯಾವುದೇ ರೀತಿಯ ಕಿಡಿಗೇಡಿತನಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ