ಸದಸ್ಯರೊಳಗಿನ ವೈಯಕ್ತಿಕ ನಿಂದನೆ, ಆದೇಶ ಪಾಲಿಸದ ಸದಸ್ಯರುಗಳ ವರ್ತನೆಗಳಿಗೆ ಬೇಸತ್ತು ಸಭಾತ್ಯಾಗ ಮಾಡಿದ್ದ ವೀರಣ್ಣ ಮತ್ತಿಕಟ್ಟಿ ಅವರು ಗುರುವಾರ ಸದನದ ಕ್ಷಮೆ ಯಾಚಿಸಿದರು.
ಕಳೆದ ಎರಡು ದಿನಗಳಿಂದ ನಡೆದ ಘಟನೆಯಿಂದ ತೀವ್ರ ಬೇಸರವಾಗಿತ್ತು. ನನ್ನಲ್ಲೂ ಮನುಷ್ಯ ಸಹಜ ಕೋಪ ಉಂಟಾಗುತ್ತದೆ. ಯಾವುದೇ ದುರುದ್ದೇಶದಿಂದ ಸಭಾತ್ಯಾಗ ಮಾಡಿಲ್ಲ. ನನ್ನ ವರ್ತನೆಯಿಂದ ಮನಸ್ಸಿಗೆ ತೀವ್ರ ನೋವಾಗಿದೆ. ಹಾಗಾಗಿ ಸದನದ ಕ್ಷಮೆ ಯಾಚಿಸುತ್ತೇನೆ ಎಂದರು.
ಸದನದಲ್ಲಿ ವೈಯಕ್ತಿಕ ಸಂಘರ್ಷ, ಅಹಂ ಭಾವಗಳಿಗೆ ಎಡೆ ಮಾಡಿಕೊಡದೆ, ಸದನದ ಗೌರವಕ್ಕೆ ಧಕ್ಕೆಯಾಗದಂತೆ ಇನ್ನು ಮುಂದೆ ಎಲ್ಲರೂ ಸಹಕರಿಸಿ ಎಂದು ಈ ಸಂದರ್ಭದಲ್ಲಿ ಮತ್ತಿಕಟ್ಟಿ ಮನವಿ ಮಾಡಿದರು.
ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ಸಭಾಪತಿಯವರ ಸಭಾತ್ಯಾಗದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಜೆಡಿಎಸ್‌ನ ಎಂ.ಸಿ.ನಾಣಯ್ಯ ಮಾತನಾಡುತ್ತ, ಸದನದಲ್ಲಿ ನಡೆದ ಮಾತಿನ ಚಕಮಕಿ, ಕೆಲ ಸಚಿವರು ಬಳಸಿದ ಭಾಷೆ. ನಮ್ಮ ನಡುವಿನ ಭಿನ್ನಾಭಿಪ್ರಾಯ ಅಹಿತಕರ ಘಟನೆ ನಡೆಯಲು ಕಾರಣವಾಯಿತು ಎಂದರು.
ಆಡಳಿತ ಪಕ್ಷದವರು, ಸಚಿವರು ತಾಳ್ಮೆ ಮತ್ತು ಸಂಯಮದಿಂದ ವರ್ತಿಸಬೇಕು ಎಂದು ಹೇಳಿದ ಅವರು, ಸದನದ ಪರವಾಗಿ ಎಲ್ಲರ ಕ್ಷಮೆಯಾಚಿಸುತ್ತೇನೆ ಎಂದರು.