ಕಾಮಿ ಸ್ವಾಮಿ ನಿತ್ಯಾನಂದನ ರಾಸಲೀಲೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಬಂದಿದ್ದು, ಈ ಪ್ರಕರಣದ ವಿಚಾರಣೆಗೆ ತಮ್ಮ ಸಂಪೂರ್ಣ ಸಹಕಾರವಿದೆಯೆಂದು ನಟಿ ರಂಜಿತಾ ಸಿಐಡಿ ಪೊಲೀಸರಿಗೆ ಖುದ್ದಾಗಿ ತಿಳಿಸಿದ್ದಾಳೆ.
ದೂರವಾಣಿ ಮೂಲಕ ಸಿಐಡಿ ಅಧಿಕಾರಿಗಳೊಂದಿಗೆ ಮಾತನಾಡಿದ ಈಕೆ, ಅಗತ್ಯವಾದಲ್ಲಿ ತಾನೇ ಖುದ್ದು ಹಾಜರಾಗಿ ಪ್ರಕರಣದ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ನಿತ್ಯಾನಂದ ಸ್ವಾಮಿಯ ರಾಸಲೀಲೆ, ವಂಚನೆ ಪ್ರಕರಣಕ್ಕೆ ರಂಜಿತಾ ಮಧ್ಯಪ್ರವೇಶದಿಂದ ಹೊಸ ತಿರುವ ಪಡೆಯುವ ಸಾಧ್ಯತೆಗಳಿವೆ.
ಈ ಹಿಂದೆ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ರಂಜಿತಾ, ಬಳಿಕ ಅದು ಬಹಿರಂಗಗೊಳ್ಳುತ್ತಿದ್ದಂತೆ ತಾನು ಸ್ವಾಮಿಯ ಸೇವೆ ಮಾಡಿರುವುದಾಗಿ ತಿಳಿಸಿದ್ದಳು. ಆದರೆ ನಂತರ ರಂಜಿತಾ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದಾಗ ಆಕೆ ರಹಸ್ಯ ಸ್ಥಳಕ್ಕೆ ತಲೆಮರೆಸಿಕೊಂಡು ಹೋಗಿರುವುದು ತಿಳಿದು ಬಂದಿತ್ತು.
ಇದೀಗ ಸ್ವಾಮಿಯ ಬಂಧನದ ಬಳಿಕ ಇದರ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಪೊಲೀಸರಿಗೆ ರಂಜಿತಾ ಈ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಅಲ್ಲದೆ, ಈ ಬಗ್ಗೆ ವಿಚಾರಣೆಗೆ ಮೂರ್ನಾಲ್ಕು ದಿನಗಳಲ್ಲಿ ರಂಜಿತಾ ಸಿಐಡಿ ಪೊಲೀಸರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಏತನ್ಮಧ್ಯೆ ರಾಜ್ಯ ಸಿಐಡಿ ತಂಡವೇ ತಮಿಳುನಾಡಿಗೆ ತೆರಳಿ ಆಕೆಯನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.