ಬಂಧಿತ ನಿತ್ಯಾನಂದ ಸ್ವಾಮಿ ಕೇವಲ ರಾಸಲೀಲೆ ಪ್ರಕರಣದಲ್ಲಿ ಮಾತ್ರ ಭಾಗಿಯಲ್ಲ, ವಿದೇಶಗಳಿಂದ ಆಗಮಿಸುವಾಗ ಪೊಲೀಸ್, ಕಸ್ಟಮ್ ಅಧಿಕಾರಿಗಳನ್ನು ವಂಚಿಸಿ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ಅಂಶವೂ ಇದೀಗ ಬಯಲಾಗಿದೆ.
ಇದೀಗ ಸಿಐಡಿ ಪೊಲೀಸರ ವಶದಲ್ಲಿರುವ ನಿತ್ಯಾನಂದ ಧ್ಯಾನ, ನಿದ್ದೆ, ಎದೆನೋವು ಎಂಬ ನಾಟಕವಾಡುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾನೆ. ಆದರೂ ಪಟ್ಟು ಬಿಡದ ಸಿಐಡಿ ಅಧಿಕಾರಿಗಳು ಹಲವಾರು ಮಹತ್ವದ ಮಾಹಿತಿಯನ್ನು ಕಲೆ ಹಾಕಿರುವುದಾಗಿ ತಿಳಿಸಿದ್ದಾರೆ.
ನಿತ್ಯಾನಂದನ ಆಶ್ರಮಕ್ಕೆ ಈ ಮೊದಲು ಎಲ್‌ಟಿಟಿಇಯ ಸದಸ್ಯರು ಭೇಟಿ ನೀಡಿರುವ ಬಗ್ಗೆಯೂ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆಂದು ವಿವರಿಸಿದ್ದಾರೆ. ಅಲ್ಲದೇ ಕಾಮಿಸ್ವಾಮಿ ಅಮೆರಿಕದಿಂದ ಭಾರತಕ್ಕೆ ವಾಪಾಸಾಗುತ್ತಿದ್ದ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ತರುತ್ತಿದ್ದಾನೆಂದು ಹೇಳಲಾಗಿದೆ. ಸ್ವಾಮಿಯಾಗಿದ್ದರಿಂದ ತನ್ನನ್ನು ಯಾರೂ ತಪಾಸಣೆಗೆ ಒಳಪಡಿಸುವುದಿಲ್ಲ ಎಂಬ ಅಂಶವನ್ನೇ ದುರುಪಯೋಗಪಡಿಸಿಕೊಂಡಿರುವ ನಿತ್ಯಾನಂದ ಸ್ಮಗ್ಲಿಂಗ್ ದಂಧೆಗೂ ಇಳಿದಿದ್ದ ಎನ್ನಲಾಗಿದೆ.
ಒಟ್ಟಾರೆ ವಿದೇಶಿ ವಿನಿಮಯ, ರಾಸಲೀಲೆ, ಎಲ್‌ಟಿಟಿಇ ಸಂಪರ್ಕ, ಸ್ಮಗ್ಲಿಂಗ್ ದಂಧೆ ಸೇರಿದಂತೆ ಹಲವು ಸ್ಫೋಟಕ ಮಾಹಿತಿಗಳು ಸಿಐಡಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಏತನ್ಮಧ್ಯೆ ನಿತ್ಯಾನಂದ ಕಾರು ಚಾಲಕನಾಗಿದ್ದ ಲೆನಿನ್ ಕರುಪ್ಪನ್‌ನನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಆತ ಕೂಡ ಸಾಕಷ್ಟು ಸ್ಫೋಟಕ ಮಾಹಿತಿಗಳನ್ನು ನೀಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆ ಎರಡು ದಿನ ಕಸ್ಟಡಿ ವಿಸ್ತರಣೆ: ನಾಲ್ಕು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದ ನಿತ್ಯಾನಂದನ ಕಸ್ಟಡಿ ಅವಧಿ ಸೋಮವಾರ ಮುಕ್ತಾಯವಾಗಿದ್ದರಿಂದ, ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಮತ್ತೆ ಎರಡು ದಿನ ಕಸ್ಟಡಿ ಅವಧಿ ವಿಸ್ತರಿಸಿತ್ತು. ಆದರೆ ಎದೆನೋವು ನಾಟಕದಿಂದ ಒಂದು ದಿನ ಆಸ್ಪತ್ರೆಯಲ್ಲಿ ಕಳೆದಿದ್ದರಿಂದ ವಿಚಾರಣೆಗೆ ಹಿನ್ನೆಡೆ ಉಂಟಾಗಿದೆ. ಆ ನಿಟ್ಟಿನಲ್ಲಿ 2ದಿನದ ಅವಧಿ ಬುಧವಾರ ಮುಕ್ತಾಯವಾಗುತ್ತಿರುವುದರಿಂದ ಇಂದು ಮತ್ತೆ ರಾಮನಗರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಮತ್ತೆ ಎರಡು ದಿನಗಳ ಕಾಲ ಕಸ್ಟಡಿ ಅವಧಿ ವಿಸ್ತರಿಸಿ ಸಿಐಡಿ ಪೊಲೀಸರ ವಶಕ್ಕೊಪ್ಪಿಸಿದೆ.