ನಟಿ ರಂಜಿತಾಳೊಂದಿಗಿನ ರಾಸಲೀಲೆ ಪ್ರಕರಣದಲ್ಲಿ ಬಂಧಿತನಾಗಿ, ಸಿಐಡಿ ಪೊಲೀಸರ ವಶದಲ್ಲಿರುವ ಕಾಮಿ ಸ್ವಾಮಿ ನಿತ್ಯಾನಂದನನ್ನು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಶುಕ್ರವಾರ ಮೇ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರಾಸಲೀಲೆ ಪ್ರಕರಣ ಬಯಲಾದ ನಂತರ ನಿತ್ಯಾನಂದ ನಾಪತ್ತೆಯಾಗಿದ್ದ, ತನದನಂತರ ಶಿಮ್ಲಾದಲ್ಲಿ ಸೆರೆಹಿಡಿಯಲ್ಪಟ್ಟು, ರಾಜ್ಯ ಸಿಐಡಿ ಪೊಲೀಸರು ನಗರಕ್ಕೆ ಕರೆತಂದ ನಂತರ ಎಂಟು ದಿನಗಳ ಕಾಲ ವಿಚಾರಣೆಗೆ ಗುರಿಪಡಿಸಿದ್ದರು. ನಿತ್ಯಾನಂದನ ಕಸ್ಟಡಿ ಅವಧಿ ಶುಕ್ರವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮತ್ತೆ ರಾಮನಗರ ಸೆಷನ್ಸ್ ಕೋರ್ಟ್‌ಗೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದರು.
ಆದರೆ ಇಂದು ನಿತ್ಯಾನಂದನನ್ನು ಮತ್ತೆ ಕಸ್ಟಡಿಗೆ ಒಪ್ಪಿಸುವಂತೆ ಸಿಐಡಿ ಪರ ವಕೀಲರು ಯಾವುದೇ ಮನವಿ ಸಲ್ಲಿಸಿರಲಿಲ್ಲವಾಗಿತ್ತು. ಹಾಗಾಗಿ ಮೇ 12 ರವರೆಗೆ ಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ನನಗೆ ಪೂಜೆ, ಧ್ಯಾನ ಮಾಡಲು ಅವಕಾಶ ಕೊಡಿ: ನಿತ್ಯಾನಂದನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ ಸಂದರ್ಭದಲ್ಲಿ, ತನಗೆ ನಿತ್ಯ ಪೂಜೆ ಹಾಗೂ ಧ್ಯಾನ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಪರಿಣಾಮ, ಕೋರ್ಟ್ ಅದಕ್ಕೂ ಒಪ್ಪಿಗೆ ಸೂಚಿಸಿದೆ.
ಸ್ವಾಮಿಗಾಗಿ ಪ್ರತ್ಯೇಕ ಸೆಲ್: ಸ್ವಾಮಿಯನ್ನು ಇತರ ಕೈದಿಗಳ ಜೊತೆ ಇರಿಸಿದಲ್ಲಿ, ಅನುಚಿತ ವರ್ತನೆ ತೋರಬಹುದು ಎಂಬ ಶಂಕೆಯಿಂದಾಗಿ, ಸ್ವಾಮಿಯನ್ನು ಪ್ರತ್ಯೇಕವಾಗಿ ಖಾಲಿ ಇರುವ ಮಹಿಳಾ ಸೆಲ್‌ನಲ್ಲಿ ಇರಿಸಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆಂದು ತಿಳಿಸಿದ್ದಾರೆ. ರಾಮನಗರ ಠಾಣೆಯ ಮಹಿಳಾ ಸೆಲ್‌ನಲ್ಲಿ ಮಹಿಳಾ ಕೈದಿಗಳು ಇಲ್ಲದಿರುವ ಕಾರಣ, ನಿತ್ಯಾನಂದನನ್ನು ಬಿಗಿ ಬಂದೋಬಸ್ತ್‌ನಲ್ಲಿ ಅಲ್ಲಿಯೇ ಇರಿಸುವುದಾಗಿ ಹೇಳಿದ್ದಾರೆ.
ಶ್ರೀಗಂಧ ಪ್ರಕರಣದಲ್ಲಿ ಜಾಮೀನು: ಏತನ್ಮಧ್ಯೆ ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿ ದೊರೆತ ಅಕ್ರಮ ಶ್ರೀಗಂಧ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಸೆಷನ್ಸ್ ನ್ಯಾಯಾಲಯ ನಿತ್ಯಾನಂದನಿಗೆ ಜಾಮೀನು ನೀಡಿದೆ.
ವಿಧಿವಿಜ್ಞಾನ ಪ್ರಯೋಗಾಲಯ ವರದಿ: ನಾನು ಪುರುಷನೇ ಅಲ್ಲ, ಷಂಡನಾಗಿದ್ದೇನೆ...ಹಾಗಾಗಿ ರಾಸಲೀಲೆ ನಡೆಸುವುದು ಹೇಗೆ ಎಂದು ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ನಿತ್ಯಾನಂದ ಮತ್ತೊಂದು ಸುಳ್ಳು ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದ. ಆದರೆ ಮಾಧ್ಯಮಗಳಲ್ಲಿ ಬಿತ್ತರವಾದ ರಾಸಲೀಲೆ ಸಿಡಿಯಲ್ಲಿ ಇರುವುದು ನಿತ್ಯಾನಂದ ಸ್ವಾಮಿಯೇ ಎಂಬ ಬಗ್ಗೆ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಿಡಿಯನ್ನು ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ನಿತ್ಯಾನಂದನ ರಾಸಲೀಲೆಯ 32ಸಿಡಿ ಹಾಗೂ ಹಾರ್ಡ್ ಡಿಸ್ಕ್‌ನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.