ಕರ್ನಾಟಕದ ಸಿಐಡಿ ಅಧಿಕಾರಿಗಳ ಮೂಲಕ ನಾನು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ ಎಂಬ ವರದಿಗಳೆಲ್ಲ ಸುಳ್ಳು ಎಂಬುದಾಗಿ ನಟಿ ರಂಜಿತಾ ತಿಳಿಸಿದ್ದು,ರಾಸಲೀಲೆ ವೀಡಿಯೋದಲ್ಲಿ ಇದ್ದದ್ದು ತಾನು ಅಲ್ಲವೇ ಅಲ್ಲ ಎಂಬ ಹೇಳಿಕೆ ನೀಡಿದ್ದಾಳೆ.
ನಿತ್ಯಾನಂದ ಸ್ವಾಮಿ ಜತೆಗಿನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತಾ ಅವರ ದೆಹಲಿ ಮೂಲದ ಕಾನೂನು ಸಲಹಾ ಸಂಸ್ಥೆ ಪಿ.ಎಂ.ಲಾ ಚೇಂಬರ್ಸ್, ಟಿವಿಗಳಲ್ಲಿ ಪ್ರಸಾರವಾದ ವೀಡಿಯೋ ದೃಶ್ಯಗಳನ್ನು ದುರುದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ತಿಳಿಸಿದೆ.
ಅಲ್ಲದೇ ಯೂ ಟ್ಯೂಬ್ ವೆಬ್‌ಸೈಟ್‌ಗಳು ತಮ್ಮಲ್ಲಿರುವ ರಾಸಲೀಲೆ ವೀಡಿಯೋ ದೃಶ್ಯಾವಳಿಗಳನ್ನು 72ಗಂಟೆಯೊಳಗೆ(ಮೇ 2) ತೆಗೆದು ಹಾಕುವಂತೆ ಸೂಚಿಸಿ ನೋಟಿಸ್ ಕಳುಹಿಸಿದೆ.
ಈ ರೀತಿಯ ದುರುದ್ದೇಶ ಪೂರಿತ ವೀಡಿಯೋದಿಂದಾಗಿ ನಮ್ಮ ಕಕ್ಷಿದಾರರ ಜೀವ ಮತ್ತು ಆಸ್ತಿಗೆ ಅಪಾಯ ಎದುರಾಗಿದೆ ಎಂದು ಸಂಸ್ಥೆ ದೂರಿದ್ದು, ವಿವಾದದ ಬಗ್ಗೆ ನಟಿ ರಂಜಿತಾ ಯಾವುದೇ ಸಂದರ್ಶನವನ್ನೂ ನೀಡಿಲ್ಲ, ಬೆಂಗಳೂರಿನಲ್ಲಿ ಸಿಐಡಿ ಪೊಲೀಸರಿಗೂ ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಂತೂ ನಿತ್ಯಾನಂದನ ರಾಸಲೀಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ರಂಜಿತಾ ಈ ಬಗ್ಗೆ ಇನ್ನು ಮುಂದೆ ತಾನು ಮಾಧ್ಯಮದ ಜೊತೆ ಮಾತನಾಡುವುದಿಲ್ಲ ಎಂದಿದ್ದು, ಸ್ವಾಮಿ ಜತೆಗೆ ರಾಸಲೀಲೆ ನಡೆಸಿದ್ದಾರೆ ಎಂಬ ಮಾಧ್ಯಮದ ವರದಿಗಳು ಅಪ್ಪಟ ಸುಳ್ಳು ಎಂದು ಹೇಳಿದ್ದಾರೆ.
ಏತನ್ಮಧ್ಯೆ ಕರ್ನಾಟಕ ಸಿಐಡಿ ಕೂಡ ನಟಿ ರಂಜಿತಾಳನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಹೇಳಿದೆ. ಅಲ್ಲದೇ ನಿತ್ಯಾನಂದನ ಜಾಮೀನು ಅರ್ಜಿ ವಿಚಾರಣೆ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಮೇ 3ಕ್ಕೆ ಮುಂದೂಡಿದೆ.