ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾಲಪ್ಪ 'ಅಂತವರಲ್ಲ', ಹಾಲಿನಂತವರು: ಸಿಎಂ, ಈಶ್ವರಪ್ಪ (Haratalu Halappa | BJP minister | Karnataka Govt | Sexual harras)
Bookmark and Share Feedback Print
 
ಹರತಾಳು ಹಾಲಪ್ಪ ಅಂತವರಲ್ಲ, ಅವರು ಸಾತ್ವಿಕರು. ವಿರೋಧ ಪಕ್ಷಗಳು ಮತ್ತು ಇತರರು ಸೇರಿ ಮಾಡಿದ ಆಪಾದನೆಯೇ ಹೊರತು ಇದರಲ್ಲಿ ಯಾವುದೇ ನೈಜಾಂಶವಿಲ್ಲ. ಸತ್ಯ ಏನೆಂಬುದು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ -- ಹೀಗೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹರತಾಳು ಹಾಲಪ್ಪನವರು ಶಿವಮೊಗ್ಗದ ತನ್ನ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಇಂದು ರಾಜ್ಯಮಟ್ಟದ ಪತ್ರಿಕೆಯೊಂದು ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣವನ್ನು ಮುಂದೊಡ್ಡಿ ಹಾಲಪ್ಪನವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸ್ಥಾನಕ್ಕೆ ಬೆಳಿಗ್ಗೆಯೇ ರಾಜೀನಾಮೆ ಸಲ್ಲಿಸಿದ್ದರು.

ಹಾಲಪ್ಪ ಸಾತ್ವಿಕ ವ್ಯಕ್ತಿ: ಸಿಎಂ
ಹಾಲಪ್ಪ ಸಾತ್ವಿಕ ವ್ಯಕ್ತಿಯಾಗಿದ್ದು, ಪ್ರಕರಣದ ಈ ಹಂತದಲ್ಲಿ ಯಾವುದೇ ಸತ್ಯಾಂಶ ಕಂಡು ಬರುತ್ತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಇದು ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಪ್ರತಿಪಕ್ಷಗಳು ಮಾಡಿರುವ ಹುನ್ನಾರಕ್ಕೆ ನಡೆದಿರುವ ಬಲಿ. ನಿಜಕ್ಕೂ ಹಾಲಪ್ಪನವರು ಅಂತಹ ವ್ಯಕ್ತಿಯಲ್ಲ. ಅವರು ರಾಜೀನಾಮೆ ನೀಡಬೇಕಾಗಿ ಬಂದಿರುವುದು ನೋವಿನ ವಿಚಾರ ಎಂದು ಬೆಳಗಾವಿಯಲ್ಲಿ ತಿಳಿಸಿದರು.

ಹಾಲಪ್ಪ ಬೆಳಿಗ್ಗೆಯೇ ಫೋನ್ ಮಾಡಿ ಮಾತನಾಡಿದ್ದರು. ನಿಮಗೆ ಮತ್ತು ಸರಕಾರಕ್ಕೆ ಮುಜುಗರ ಉಂಟು ಮಾಡಲು ಬಯಸುವುದಿಲ್ಲ, ಹಾಗಾಗಿ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಆದರೂ ನಾನು ಬೆಂಗಳೂರಿಗೆ ಬರುವ ತನಕ ಯಾವುದೇ ಆತುರದ ನಿರ್ಧಾರಕ್ಕೆ ಬರಬೇಡಿ ಎಂದಿದ್ದೆ. ಅಷ್ಟರಲ್ಲಿ ಅವರು ಪತ್ರಿಕಾಗೋಷ್ಠಿ ಕರೆದು ರಾಜೀನಾಮೆ ನೀಡಿದ್ದಾರೆ ಎಂದು ಯಡಿಯೂರಪ್ಪ ಪ್ರಕರಣದ ಕುರಿತು ವಿವರಣೆ ನೀಡಿದರು.

ಶೀಘ್ರದಲ್ಲೇ ಹಾಲಪ್ಪ ನಿರ್ದೋಷಿ ಎನ್ನುವುದು ತಿಳಿದು ಬರಲಿದೆ. ಪತ್ರಿಕೆಯಲ್ಲಿ ವರದಿ ಬಂದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ಕೊಡಿಸುವ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ ಎನ್ನುವುದು ಈ ಮೂಲಕ ಸಾಬೀತಾಗಿದ್ದು, ಸರಕಾರಕ್ಕೆ ಇದೊಂದು ಅಗ್ನಿಪರೀಕ್ಷೆ ಎಂದು ಭಾವಿಸುತ್ತೇವೆ. ನಮ್ಮ ಗೌರವಕ್ಕೆ ಇದರಿಂದ ಯಾವುದೇ ರೀತಿಯಲ್ಲೂ ಚ್ಯುತಿ ಬಾರದು ಎಂದು ಮುಖ್ಯಮಂತ್ರಿ ಭರವಸೆ ವ್ಯಕ್ತಪಡಿಸಿದರು.

ಇದು ರಾಜಕೀಯ ಪಿತೂರಿ: ಈಶ್ವರಪ್ಪ
ಆರೋಪ ಬಂದ ತಕ್ಷಣ ಹಿಂದೆ ಮುಂದೆ ನೋಡದೆ ಪಕ್ಷದ ಹಿತದೃಷ್ಟಿಯಿಂದ ಸಚಿವ ಸ್ಥಾನಕ್ಕೆ ಹಾಲಪ್ಪ ರಾಜೀನಾಮೆ ನೀಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಿಂದಿಸುತ್ತೇನೆ. ಉಳಿದಂತೆ ಅವರ ಮೇಲಿರುವ ಆರೋಪ ರಾಜಕೀಯ ಷಡ್ಯಂತ್ರವೇ ಹೊರತು ನಿಜಾಂಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಬೆಳಗಾವಿಯಲ್ಲಿನ ಬಿಜೆಪಿ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿ ಮೂಲಕ ತೆರಳುತ್ತಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ನನಗೆ ಅವರು ಬೆಳಿಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು; ಇದು ಅವರ ರಾಜಕೀಯ ಎದುರಾಳಿಗಳು ಮತ್ತು ಸರಕಾರದ ವಿರೋಧಿಗಳು ನಡೆಸಿರುವ ಕುತಂತ್ರ. ಖಂಡಿತಾ ಹಾಲಪ್ಪನವರು ಇದರಿಂದ ಹೊರಗೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಸುದ್ದಿಗಳಿವು:
** ಸ್ನೇಹಿತನ ಪತ್ನಿ ಅತ್ಯಾಚಾರ ಆರೋಪ; ಸಚಿವ ಹಾಲಪ್ಪ ರಾಜೀನಾಮೆ
** ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಕಾಂಗ್ರೆಸ್
ಸಂಬಂಧಿತ ಮಾಹಿತಿ ಹುಡುಕಿ