ರಾಜ್ಯದ 5474 ಗ್ರಾಮ ಪಂಚಾಯಿತಿಗಳ ಒಟ್ಟು 88,208 ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಸೋಮವಾರ ಬೆಳಿಗ್ಗೆ ಆರಂಭಗೊಂಡಿದ್ದರೂ ಕೂಡ ಚುನಾವಣೆಗೆ ಮತಪತ್ರಗಳನ್ನು ಬಳಸಿದ್ದರಿಂದ ಆರು ಗಂಟೆ ವೇಳೆಗೆ ಶೇ.50ರಷ್ಟು ಫಲಿತಾಂಶವಷ್ಟೇ ಘೋಷಣೆಯಾಗಿತ್ತು. ಆ ಹಿನ್ನೆಲೆಯಲ್ಲಿ ಮತಎಣಿಕೆ ಕಾರ್ಯ ಹಲವೆಡೆ ಅಹೋರಾತ್ರಿ ಮುಂದುವರಿದಿದ್ದು ಮಂಗಳವಾರವಷ್ಟೇ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಬೆಳಿಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಿತ್ತು, ಮತಕೇಂದ್ರಗಳ ಸುತ್ತ ಅಭ್ಯರ್ಥಿಗಳ ಬೆಂಬಲಿಗರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಮಾರಾಮಾರಿ, ಲಾಠಿಪ್ರಹಾರ, ಕಲ್ಲುತೂರಾಟ, ವಾಗ್ವಾದದ ಘಟನೆಗಳು ನಡೆದವು. ಅಭ್ಯರ್ಥಿಗಳ ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬೆಂಬಲಿಗರು ಹರ್ಷ ವ್ಯಕ್ತಪಡಿಸಿ ವಿಜಯೋತ್ಸಾಹ ಆಚರಿಸಿದ್ದು ಅಲ್ಲಲ್ಲಿ ಕಂಡು ಬಂದಿತ್ತು.
ಬೀದರ್ ಜಿಲ್ಲೆಯ 170 ಪಂಚಾಯ್ತಿಗಳ ಪೈಕಿ 30 ಪಂಚಾಯ್ತಿಗಳ ಎಣಿಕೆ ಕಾರ್ಯ ರಾತ್ರಿ 9ಗಂಟೆಗೆ ಮುಗಿದಿತ್ತು. ಗುಲ್ಬರ್ಗ ಜಿಲ್ಲೆಯಲ್ಲಿ ಮತಎಣಿಕೆ ಕಾರ್ಯ ಮಂದಗತಿಯಲ್ಲಿ ಸಾಗಿದ್ದು, ಯಾವ ಫಲಿತಾಂಶವೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಕೊಪ್ಪಳ ಜಿಲ್ಲೆಯ 130 ಗ್ರಾ.ಪಂ. ಪೈಕಿ 10, ರಾಯಚೂರಿನಲ್ಲಿ 162 ಗ್ರಾ.ಪಂ. ಪೈಕಿ 51, ಯಾದಗಿರಿ ಜಿಲ್ಲೆಯ 114 ಪಂಚಾಯಿತಿಗಳ ಪೈಕಿ 70ರಲ್ಲಿ ಮತ ಎಣಿಕೆ ಪೂರ್ಣಗೊಂಡಿದೆ. ಉಳಿದ ಪಂಚಾಯಿತಿಗಳ ಮತಎಣಿಕೆ ನಡೆಯುತ್ತಿದ್ದು, ಮಂಗಳವಾರವಷ್ಟೇ ಪೂರ್ಣ ಫಲಿತಾಂಶ ಘೋಷಣೆ ಸಾಧ್ಯ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೈದಿಗಳು ಈಗ ಜನಪ್ರತಿನಿಧಿ: ಅಪರಾಧಿಗಳನ್ನು ಕೂಡ ಜನಪ್ರತಿಗಳನ್ನಾಗಿ ಆರಿಸುವುದರಲ್ಲಿ ಮತದಾರರು ಹಿಂದೆ ಬಿದ್ದಿಲ್ಲ ಎಂಬುದನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸಾಬೀತು ಪಡಿಸಿದ್ದಾರೆ. ಈ ಬಾರಿಯ ಗ್ರಾ.ಪಂ.ಚುನಾವಣೆಯಲ್ಲಿ ಮೂವರು ಜೈಲುಕಂಬಿಯ ಒಳಗೆ ಇದ್ದುಕೊಂಡೇ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಹುಸ್ಕೂರು ಗ್ರಾ.ಪಂ. ವ್ಯಾಪ್ತಿಯ ಬೆಚ್ಚನಗೆರೆಯ ಶೀನ ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿ. ಆದರೂ ಚುನಾವಣೆಯಲ್ಲಿ ಗೆಲುವಿನ ನಗು ಬೀರಿದ್ದಾರೆ.
ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕು ಅಲಮೇಲ ಗ್ರಾ.ಪಂ.ನಲ್ಲಿ ಜೈಲಿನಲ್ಲಿದ್ದೇ ಚುನಾವಣೆಗೆ ಸ್ಪರ್ಧಿಸಿದ್ದ ಭೀಮಸಿ ಬೊಮ್ಮನಹಳ್ಳಿ ಕೂಡ ಜಯ ಸಾಧಿಸಿದ್ದಾರೆ. ಅದೇ ರೀತಿ ಕೋಲಾರ ತಾಲೂಕು ಹೊನ್ನೇನಹಳ್ಳಿ ಗ್ರಾ.ಪಂ. ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಚಾರಣಾಧೀನ ಕೈದಿ ಕೃಷ್ಣಮೂರ್ತಿ ವಿಜಯಿಯಾಗಿದ್ದಾರೆ.
ಸೊನ್ನೆ ಸಂಪಾದನೆ: ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವುದು, ಒಂದು ಮತ ಗಳಿಸದಿರುವುದು ಸ್ವಾರಸ್ವಕರ ಸಂಗತಿ, ಅದು ಈ ಗ್ರಾ.ಪಂ.ಚುನಾವಣಾ ಮತಎಣಿಕೆಯಲ್ಲಿ ಪುನರಾವರ್ತನೆಯಾಗಿದೆ. ಬಿಜಾಪುರ ತಾಲೂಕಿನ ಅಲಿಯಾಬಾದ ಕ್ಷೇತ್ರದ ಅಭ್ಯರ್ಥಿ ಶಾರದಾ ತುಳಜಾರಾಮ ಕದಂ ಮತ್ತು ಚಿಕ್ಕಬಳ್ಳಾಪುರದ ಅಡ್ಡಗಲ್ ಅಭ್ಯರ್ಥಿ ವೆಂಕಟರೆಡ್ಡಿ ಒಂದೂ ಮತ ಪಡೆಯದೇ ಶೂನ್ಯ ಸಂಪಾದಿಸಿದ್ದಾರೆ.!
ಅದೃಷ್ಟದ ಗೆಲುವು: ತೀವ್ರ ಹಣಾಹಣಿಯಿಂದ ಕೂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ನಂದಗುಡಿ ಗ್ರಾ.ಪಂ. ವ್ಯಾಪ್ತಿಯ ಹಿಂದುಳಿದ ವರ್ಗ ಎ ಸಾಮಾನ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ ಎಂ.ರಾಮೇಗೌಡ ಅವರು ತಮ್ಮ ಪ್ರತಿಸ್ಪರ್ಧಿ ಎನ್.ನಾಗೇಶ್ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದ್ದಾರೆ.
ಏತನ್ಮಧ್ಯೆ ಸುಳ್ಯ ಮೀಸಲು ಕ್ಷೇತ್ರದ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಅವರು ಈ ಬಾರಿ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಡಿಪ್ಲೊಮೋ ವಿದ್ಯಾರ್ಥಿನಿ ಪಂಚಾಯ್ತಿ ಪ್ರವೇಶಿಸಿದ್ದಾಳೆ. ಅದೇ ರೀತಿ ಅತ್ತೆ-ಸೊಸೆ ಕಾದಾಟ, ಅತ್ತೆಗೆ ಸೋಲು, ಸೊಸೆಗೆ ಗೆಲುವು, ಸೊಸೆಗೆ ಸೋಲು, ಅತ್ತೆಗೆ ಗೆಲುವು ಹೀಗೆ ಹತ್ತು ಹಲವಾರು ವಿಶೇಷತೆಗಳು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಮುಖ ಹೈಲೈಟ್‌ಗಳಾಗಿವೆ.
ನಿರೀಕ್ಷೆಗೂ ಮೀರಿ ಜಯ-ಬಿ.ಎಸ್.ಯಡಿಯೂರಪ್ಪ: ಉಪ ಚುನಾವಣೆ, ಬಿಬಿಎಂಪಿ ಚುನಾವಣೆಯಲ್ಲಿ ಮತದಾರರು ಆಡಳಿತಾರೂಢ ಬಿಜೆಪಿ ಕೈ ಹಿಡಿದಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಮತದಾರರು ನಿರೀಕ್ಷೆಗೂ ಮೀರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಶೇ.60ರಷ್ಟು ಗೆಲುವು ನಮ್ಮದೇ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಗ್ರಾ.ಪಂ.ನಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಆಹ್ವಾನಿಸಿ ಒಂದು ದಿನದ ತರಬೇತಿ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.