ರಾಜ್ಯದ 5474 ಗ್ರಾಮ ಪಂಚಾಯಿತಿಗಳಿಗೆ ಮೇ 8 ಮತ್ತು 12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನೂಕು ನುಗ್ಗಲು, ಮತಎಣಿಕೆ ವಿಳಂಬ, ಬೆಂಬಲಿಗರ ಆಕ್ರೋಶ, ಪೊಲೀಸರಿಂದ ಲಾಠಿ ಚಾರ್ಜ್, ಗೆದ್ದವರ ಸಂಭ್ರಮ, ಸೋತವರ ಅಳಲು, ಹರ್ಷೋದ್ಗಾರದ ನಡುವೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದೆ.
ಸೋಮವಾರ ಬೆಳಿಗ್ಗೆ 8ಗಂಟೆಗೆ ಆರಂಭಗೊಂಡ ಮತ ಎಣಿಕೆ ಕಾರ್ಯ ರಾತ್ರಿ ಮುಕ್ತಾಯಗೊಂಡಿದ್ದು. ಒಟ್ಟಾರೆ ಫಲಿತಾಂಶದ ಆಧಾರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶದ ಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.
ಮೈಸೂರು ಭಾಗವನ್ನು ಹೊರತು ಪಡಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿ, ಜೆಡಿಎಸ್ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ರಾಜಕೀಯವಾಗಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಿರೀಕ್ಷಿತ ಸ್ಥಾನದಲ್ಲಿ ಜಯಗಳಿಸಿದ್ದು, ಬಿಜೆಪಿ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗು ಬೀರಿದ್ದಾರೆ.
ಸೊಸೆ ವಿರುದ್ಧ ಸ್ಪರ್ಧಿಸಿದ್ದ ಬೆಳಗಾವಿ ತಾಲೂಕಿನ ಅರಳಿಕಟ್ಟೆ ಗ್ರಾಮದಲ್ಲಿ ಅತ್ತೆ ಕಾಶವ್ವ ಸಿಂಗಡಗಿ ಗೆಲುವು ಸಾಧಿಸಿದ್ದಾರೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ಅಭ್ಯರ್ಥಿ ಲಕ್ಷ್ಮಮ್ಮ ಕೂಡ ಒಂದು ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಜಮಖಂಡಿ ತಾಲೂಕು ಆಲಗೂರು ಗ್ರಾಮಪಂಚಾಯ್ತಿನಿಂದ ಸ್ಪರ್ಧಿಸಿದ್ದ ಸೊಸೆ ಶಿವಕ್ಕ ಕಡಗೋಳು ಅವರನ್ನು ಅತ್ತೆ ಯಂಕವ್ವ ಕಡಗೋಳು ಸೋಲಿಸಿದ್ದಾರೆ. ಫಲಿತಾಂಶ ಹೊರಬಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದ್ದ ಅಭ್ಯರ್ಥಿಗಳು ಪಟಾಕಿ ಸಿಡಿಸಿ ವಿಜಯೋತ್ಸಾಹ ಆಚರಿಸಿದರು.
ಅದೇ ರೀತಿ ಮಂಡ್ಯ ತೂಬಿನಕೆರೆ ಗ್ರಾಮಪಂಚಾಯಿಯಲ್ಲಿ ಅತ್ತೆ ಜಯಮ್ಮ ವಿರುದ್ಧ ಸೊಸೆ ಪುಷ್ಪಲತಾ ಜಯಭೇರಿ ಬಾರಿಸಿದ್ದಾರೆ. ರಾತ್ರಿ ವೇಳೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳ ಫಲಿತಾಂಶ ಹೊರಬೀಳಲಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಗಳ ಚಿಹ್ನೆ ಮೇಲೆ ನಡೆಯದಿದ್ದರೂ ಕೂಡ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೆಂದು ಗ್ರಾಮ ಮಟ್ಟದಲ್ಲಿ ಬಿಂಬಿಸಿಕೊಂಡಿರುವುದರಿಂದ ಈ ಚುನಾವಣೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದವು.
ಗ್ರಾಮ ಪಂಚಾಯತ್ ರಾಜಕೀಯ ಸಮರದಲ್ಲಿ 2,31,161 ಅಭ್ಯರ್ಥಿಗಳು ಹಣಾಹಣಿ ನಡೆಸಿದ್ದು, ಬಹುತೇಕ ಅಭ್ಯರ್ಥಿಗಳು ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರಾಗಿದ್ದಾರೆ. ಮತ ಎಣಿಕೆ ನಿಮಿತ್ಯ ರಾಜ್ಯದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿತ್ತು.