ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೊಸ ಮುಹೂರ್ತ: ಇದು ಚಾಣಾಕ್ಷ ತಂತ್ರ; ಬಿಜೆಪಿಗೆ ಸಂಕಟ (Governor | Hansraj Bharadwaj | BJP Government | Karnataka Crisis | Vote Of Confidence)
ವಿಶ್ವಾಸಮತ ಯಾಚಿಸಿ, ಬಹುಮತ ಗಳಿಸಿದರೆ ಆರು ತಿಂಗಳ ಕಾಲ ಮತ್ತೆ ಅವಿಶ್ವಾಸಮತ ಗೊತ್ತುವಳಿ ಇಲ್ಲ ಎಂಬ ಸಾಂವಿಧಾನಿಕ ನಿಯಮವಿದ್ದು, ಗುರುವಾರ ಪುನಃ ವಿಶ್ವಾಸಮತ ಸಾಬೀತುಪಡಿಸುವಂತೆ ತಾನು ಮುಖ್ಯಮಂತ್ರಿಗೆ ಸೂಚಿಸಿರುವುದು ಕೇವಲ ಸ್ನೇಹ ಭಾವನೆಯ ನಡತೆ. ಇದು ಸಂವಿಧಾನದಲ್ಲೇನೂ ಇಲ್ಲ. ಅ.11ರ ವಿಶ್ವಾಸಮತ ಕಲಾಪವು ಅಸಮರ್ಪಕವಾಗಿತ್ತು. ಹೀಗಾಗಿ ಅವರಿಗೆ ಮತ್ತೊಂದು ಅವಕಾಶ ಮಾಡಿಕೊಡುತ್ತಿದ್ದೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಇದೇನೂ ಕಡ್ಡಾಯವೇನೂ ಅಲ್ಲ ಎಂದು ಬಿಜೆಪಿ ಬೆನ್ನುತಟ್ಟಿಕೊಳ್ಳಬಹುದಾದರೂ, ಹಾಗೆ ಮಾಡದಿದ್ದರೆ, ಅದು ರಾಷ್ಟ್ರಪತಿ ಆಳ್ವಿಕೆಯ ಶಿಫಾರಸಿಗೆ ಪುಷ್ಟಿ ನೀಡುತ್ತದೆ ಎಂದಾಗಬಹುದು. ಅಂದರೆ, ಸಾಂವಿಧಾನಿಕ ಮುಖ್ಯಸ್ಥನ ಮಾತಿಗೆ ಸರಕಾರ ಬೆಲೆ ಕೊಡುತ್ತಿಲ್ಲ ಎಂಬುದು ಬಿಜೆಪಿಗೆ ಮುಳುವಾಗಬಹುದು. ಹೀಗಾಗಿ ಈ ತಂತ್ರ ಅತ್ಯಂತ ಚಾಣಾಕ್ಷವಾಗಿದೆ.
ಅಪರೂಪವಾಗಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ರಾಜ್ಯಪಾಲರು, ಅ.11ರ ಕಲಾಪದಲ್ಲಿ ಸದಸ್ಯರಲ್ಲದವರೂ ಹಾಜರಿದ್ದರು. ಶಾಸಕರನ್ನು ಏಕಾಏಕಿ ಅನರ್ಹಗೊಳಿಸಲಾಯಿತು. ಅಂದು ಸಂವಿಧಾನಾತ್ಮಕವಾಗಿ, ಪ್ರಜಾಸತ್ತಾತ್ಮಕವಾಗಿ ಬಹುಮತ ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡುತ್ತಿದ್ದೇನೆ ಎಂದರು.
ಸ್ಪೀಕರ್ ವರದಿ ತೃಪ್ತಿ ತಂದಿಲ್ಲ. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂದ ಅವರು, ಸಿಎಂ ಟೀಕೆಯಿಂದ ನನಗೆ ನೋವಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದೇನೆ. ರೆಡ್ಡಿಗಳು ಆವತ್ತು 50 ಶಾಸಕರನ್ನು ಹೈಜಾಕ್ ಮಾಡಿದ್ದಾಗ ಅವರೇನಾದರೂ ಶಾಸಕರನ್ನು ಅನರ್ಹಗೊಳಿಸಿದ್ದರೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿದ ರಾಜ್ಯಪಾಲರು, ಅವರು ನನ್ನ ಮಾತನ್ನು ಕೇಳಿಲ್ಲ, ರಾಜಭವನಕ್ಕೆ ಬರುವಂತೆ ಆಹ್ವಾನಿಸಿದರೂ ಬರಲಿಲ್ಲ. ತನ್ನ ಯಾವುದೇ ಮಾತನ್ನೂ ಕೇಳಿಸಿಕೊಳ್ಳಲಿಲ್ಲ. ಒಂದೂವರೆ ವರ್ಷದಿಂದ ನೋಡುತ್ತಲೇ ಇದ್ದೇನೆ. ಸರಕಾರದ ಆಳ್ವಿಕೆ ತೀರಾ ವಿಷಾದಕರ. ಡಿನೋಟಿಫಿಕೇಶನ್ ಹಗರಣಗಳ ಆರೋಪಗಳು, ಭ್ರಷ್ಟಾಚಾರ ಇತ್ಯಾದಿ ನೋಡಿ ರೋಸಿ ಹೋಗಿದ್ದೇನೆ. ಅದೆಲ್ಲಾ ಚರ್ಚೆ ಮಾಡಲು ನಾನು ವಿಧಾನಸೌಧಕ್ಕೆ ಬರುವಂತಿಲ್ಲ ಎಂದರು ರಾಜ್ಯಪಾಲರು.
ಕಳೆದ ನಾಲ್ಕು ದಿನದಿಂದ ನಡೀತಿರೋ ನಾಟಕಗಳಿಗೆ ದುಡ್ಡೆಲ್ಲಿಂದ ಬರುತ್ತಿದೆ, ಎಲ್ಲಿಗೆ ಹೋಗುತ್ತಿದೆ ಎಂದೆಲ್ಲಾ ಅರ್ಥವಾಗುತ್ತಿಲ್ಲ ಎಂದ ಅವರು, ಮುಖ್ಯಮಂತ್ರಿಯೇನಾದರೂ ನನ್ನ ಬಳಿ ಬಂದಿದ್ದರೆ ನನ್ನ 28 ವರ್ಷಗಳ ಸಂಸದೀಯ ಅನುಭವವನ್ನು, ಐವತ್ತು ವರ್ಷಗಳ ರಾಜಕೀಯ ಅನುಭವದ ಮೂಲಕ ಸೂಕ್ತ ಸಲಹೆಗಳನ್ನು ನೀಡುತ್ತಿದ್ದೆ ಎಂದರು.
105 ಶಾಸಕರನ್ನು ಬಿಜೆಪಿಯರು ನನಗೆ ತೋರಿಸಲಿಲ್ಲ. ಅವರಲ್ಲಿ ಎಲ್ಲರೂ ಜತೆಗಿದ್ದಾರಾ ಎಂಬುದು ಗೊತ್ತಿಲ್ಲ. ಎಲ್ಲ ವರದಿಗಳನ್ನೂ ತರಿಸಿಕೊಂಡು ನೋಡಿದ್ದೇನೆ. ಅಲ್ಲಿ ಬಲಾಬಲ ಪರೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಮತ್ತು ಸ್ಪೀಕರ್ ನನ್ನ ಸಲಹೆಯನ್ನು ಕೇಳದೆ ತಮಗೆ ಬೇಕಾದಂತೆ ಸದನ ನಡೆಸಿದರು. ಎರಡನೇ ಬಾರಿ ವಿಶ್ವಾಸಮತಕ್ಕೆ ಕಾನೂನಿನ ಬದ್ಧತೆಯೇನೂ ಇಲ್ಲ. ಹಿಂದೆಂದೂ ಇಂತಹಾ ಪ್ರಕರಣ ನಡೆದ ಉದಾಹರಣೆಗಳಿಲ್ಲ. ಇದನ್ನು ಸ್ವೀಕರಿಸುವುದು ಅಥವಾ ಬಿಡುವುದು ಅವರಿಗೆ ಬಿಟ್ಟ ವಿಷಯ ಎಂದು ರಾಜ್ಯಪಾಲರು ಹೇಳುವ ಮೂಲಕ, ರಾಜ್ಯಪಾಲರ ಮಾತನ್ನು ಉಲ್ಲಂಘಿಸಿದರೆ ಎಚ್ಚರಿಕೆ ಎಂಬ ಕುರಿತ ಸುಳಿವನ್ನೂ ನೀಡಿದರು.