ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಗೆ ತಾತ್ಕಾಲಿಕ ಗೆಲುವು; ಸೋಲು ಖಚಿತ: ಕುಮಾರಸ್ವಾಮಿ (BJP | Kumaraswamy | Siddaramaiah | JDS | Varthuru prakash | Congress)
ವಿಧಾನಸಭೆಯಲ್ಲಿ ಎರಡನೇ ಬಾರಿ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾತ್ಕಾಲಿಕ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಮುಂದೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬಿಡದಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾತ್ಕಾಲಿಕ ಗೆಲುವಿನಿಂದ ಮುಖ್ಯಮಂತ್ರಿಗಳು ಖುಷಿಪಡಲಿ, ನ್ಯಾಯಾಲಯದ ತೀರ್ಪಿನ ನಂತರ ಬಹುಮತವಿಲ್ಲದ ಬಿಜೆಪಿ ಸರಕಾರ ಏನಾಗಲಿದೆ ಎನ್ನುವುದು ಗೊತ್ತಾಗಲಿದೆ ಎಂದರು.
ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ದುರುಪಯೋಗಪಡಿಸಿಕೊಂಡು 16 ಶಾಸಕರನ್ನು ಅನರ್ಹಗೊಳಿಸಿ ಯಡಿಯೂರಪ್ಪ ವಿಶ್ವಾಸಮತ ಗೆದ್ದಿರಬಹುದು. ಆದರೆ ಅದು ದೀರ್ಘ ಕಾಲದವರೆಗೆ ನಿಲ್ಲಲಿದೆಯೇ ಎಂದು ಪ್ರಶ್ನಿಸಿದರು. ಶಾಸಕರ ಅನರ್ಹತೆ ಪ್ರಕರಣದ ಕುರಿತು ನ್ಯಾಯಾಲಯ ನೀಡುವ ಅಂತಿಮ ತೀರ್ಪಿನ ನಂತರದ ಬೆಳವಣಿಗೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.
ಐವರು ಪಕ್ಷೇತರರ ಶಾಸಕರನ್ನು ಅನರ್ಹಗೊಳಿಸಿರುವ ವಿವಾದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿದೆ. ಅದೇ ರೀತಿ ಬಿಜೆಪಿಯ 11 ಮಂದಿ ಶಾಸಕರ ಪ್ರಕರಣ ಕೂಡ ನ್ಯಾಯಾಲಯದಲ್ಲಿದೆ. ಆ ನಿಟ್ಟಿನಲ್ಲಿ ಆ ಎಲ್ಲಾ ವಿವಾದದ ಬಗ್ಗೆ ಹೈಕೋರ್ಟ್ ಅಂತಿಮ ತೀರ್ಪು ಹೊರಬಿದ್ದ ನಂತರವೇ ಬಿಜೆಪಿ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ. ಇಂದಿನ ವಿಶ್ವಾಸಮತ ಯಾವ ಲೆಕ್ಕಕ್ಕೂ ಇಲ್ಲ ಎಂದ ಅವರು, ಇಂದಿನ ವಿಶ್ವಾಸಮತ ಕೋರ್ಟ್ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವೇ ಆದೇಶದಲ್ಲಿ ಸ್ಪಷ್ಟಪಡಿಸಿದೆ ಎಂದರು.
ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಸ್ವತಂತ್ರರು. ಅವರು ಯಾರಿಗೆ ಬೇಕಾದರೂ ಬೆಂಬಲ ನೀಡಬಹುದು. ಅವರ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.