ಕರ್ನಾಟಕ ವಿಧಾನಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರಕಾರವು ಗೆದ್ದಿರುವ ವಿಶ್ವಾಸ ಮತ ಕಳಂಕಿತವಾದದ್ದು ಮತ್ತು ಅನೀತಿಯುತವಾದದ್ದು ಎಂದು ಕಾಂಗ್ರೆಸ್ ಹೈಕಮಾಂಡ್ ಬಣ್ಣಿಸಿದೆ.
ಬಿಜೆಪಿ ಸರಕಾರವು 106-100ರಿಂದ ಬಹುಮತ ಸಾಬೀತುಪಡಿಸಿದ ನಿರಾಸೆಗೊಳಗಾದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಇದು ಅನೀತಿಯುತವಾದದ್ದು ಎಂದು ಬಣ್ಣಿಸಿದರು.
16 ಶಾಸಕರ ಅನರ್ಹತೆ ವಿಚಾರದ ಕುರಿತು ಹೈಕೋರ್ಟ್ ತೀರ್ಪು ಬರುವವರೆಗೆ ವಿಶ್ವಾಸ ಮತ ಯಾಚಿಸುವುದು ಬೇಡ ಎಂದು ಪ್ರತಿಪಕ್ಷದ ನಾಯಕರು ಮನವಿ ಮಾಡಿಕೊಂಡಿದ್ದರು. ಆದರೂ ಅದನ್ನು ಲೆಕ್ಕಿಸದೆ ವಿಶ್ವಾಸ ಮತ ಯಾಚಿಸಲಾಗಿದೆ. ಇದು ಸರಿಯಲ್ಲ ಎಂದು ತಿವಾರಿ ಅಭಿಪ್ರಾಯಪಟ್ಟರು.
ಬಿಜೆಪಿಯು ತನ್ನ ಅಲ್ಪಸಂಖ್ಯೆಗೆ ಕುಸಿದಿದ್ದ ಸರಕಾರವನ್ನು ಬಹುಮತದ ಸರಕಾರವನ್ನಾಗಿ ಪರಿವರ್ತಿಸಲು ಆರಂಭದಿಂದಲೂ ಹಣ ಮತ್ತು ಅಧಿಕಾರವನ್ನು ಬಳಸಿಕೊಂಡಿದ್ದು, ಇದೀಗ ಅದು ವಿಶ್ವಾಸ ಮತ ಸಾಧಿಸಿ ತೋರಿಸಿರುವುದು ಕಳಂಕ ಪೂರಿತವಾದದ್ದು ಎಂದರು.
ಒಟ್ಟಾರೆ ಪ್ರಸಂಗದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಪಾತ್ರದ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದ್ದಕ್ಕೆ, ಕರ್ನಾಟಕದಲ್ಲಿ ಸಾಂವಿಧಾನಿಕ ಅಥವಾ ಯಾವುದೇ ರೀತಿಯ ಬಿಕ್ಕಟ್ಟು ಸೃಷ್ಟಿಯಾಗಿದ್ದಲ್ಲಿ ಅದಕ್ಕೆ ಬಿಜೆಪಿಯ ಆಂತರಿಕ ರಾಜಕೀಯವೇ ನೇರ ಕಾರಣ; ರಾಜ್ಯ ಸರಕಾರವು ಅಕ್ರಮ ಗಣಿಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ತನ್ನ ಅಧಿಕಾರವಧಿಯಲ್ಲಿ ಬೆಂಬಲ ನೀಡುತ್ತಾ ಬಂದಿದೆ ಎಂದು ನುಣುಚಿಕೊಂಡರು.
ಕರ್ನಾಟಕ ಹೈಕೋರ್ಟಿನಲ್ಲಿರುವ ಶಾಸಕರ ಅನರ್ಹತೆ ಪ್ರಕರಣದಿಂದಾಗಿ ಪ್ರಸಕ್ತ ಬಂದಿರುವ ವಿಶ್ವಾಸ ಮತದ ಫಲಿತಾಂಶವು ಹೆಚ್ಚಿನ ಮಹತ್ವ ಪಡೆಯುವುದಿಲ್ಲ. ಅದು ನ್ಯಾಯಾಲಯದ ತೀರ್ಪಿಗೆ ಒಳ ಪಟ್ಟಿರುತ್ತದೆ. ಹಾಗಾಗಿ ಅಂತಿಮ ನಿರ್ಧಾರ ಕೋರ್ಟ್ ತೀರ್ಮಾನದ ನಂತರವಷ್ಟೇ ಬರಲು ಸಾಧ್ಯ ಎಂದರು.
ಬಹುಮತ ತಾತ್ಕಾಲಿಕ: ಮೊಯ್ಲಿ ಯಡಿಯೂರಪ್ಪ ಸರಕಾರವು ಬಹುಮತ ಸಾಬೀತುಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕಾನೂನು ಸಚಿವ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ, ಇದು ತಾತ್ಕಾಲಿಕ; ಇಂತಹ ಬಹುಮತದೊಂದಿಗೆ ಯಾವ ಪಕ್ಷವೂ ಸ್ಥಿರ ಸರಕಾರವನ್ನು ನಡೆಸಲು ಸಾಧ್ಯವಿಲ್ಲ ಎಂದರು.
ಆಡಳಿತ ಪಕ್ಷವು ವಿಶ್ವಾಸ ಮತವನ್ನು ಗೆದ್ದಿರುವುದು ಕೇವಲ ತಾತ್ಕಾಲಿಕ ನೆಲೆಯಲ್ಲಿ ಮಾತ್ರ. ಈ ರೀತಿಯ ಬಹುಮತದಲ್ಲಿ ಯಾವ ಪಕ್ಷವೂ ಸ್ಥಿರ ಸರಕಾರವನ್ನು ನಡೆಸುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸೋಮವಾರ ವಿಶ್ವಾಸ ಮತ ಯಾಚಿಸುವ ಸಂದರ್ಭದಲ್ಲಿ ಬಿಜೆಪಿಯು ಸದನದಲ್ಲಿ ಮೋಸದಾಟವಾಡಿತು ಎಂದು ಆರೋಪಿಸಿದ ಅವರು, ಇಂದು ಸದನವು ಸುಧಾರಿತ ವಾತಾವರಣವನ್ನು ತೋರಿಸಿತು ಎಂದರು.