ಭೂಹಗರಣಗಳ ಆರೋಪ ಹಿನ್ನೆಲೆಯಲ್ಲಿ ಗುರುವಾರ ಸಾಯಂಕಾಲ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರನ್ನು ಬಿಜೆಪಿ ಕೇಂದ್ರೀಯ ನಾಯಕರು ದೆಹಲಿಗೆ ಕರೆಸಿಕೊಂಡಿದ್ದು, ರಾತ್ರಿ ವೇಳೆಗೆ ಅವರ ಭೇಟಿಯು ಅಷ್ಟೇ ವೇಗವಾಗಿ ರದ್ದಾಗಿದೆ. ಅಂತೆಯೇ, ಕೇಂದ್ರೀಯ ನಾಯಕರು ರಾಜ್ಯದ ನಾಯಕತ್ವ ಬದಲಾವಣೆಗೆ ಮುಂದಾಗದಿರುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ, ಭೂಹಗರಣಗಳ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಸಂಪುಟವು ತೀರ್ಮಾನ ಕೈಗೊಂಡಿದೆ.
ರಾಜ್ಯದಲ್ಲಿ ಬಿಜೆಪಿಯು ಇದೀಗ ಸಂಕೀರ್ಣ ಸ್ಥಿತಿಯಲ್ಲಿ ಸಿಲುಕಿಕೊಂಡಿರುವುದರಿಂದ ಸದ್ಯಕ್ಕೆ ನಾಯಕತ್ವವನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ ಎಂದು ಕೇಂದ್ರೀಯ ನಾಯಕರು ಕಂಡುಕೊಂಡಿದ್ದಾರೆ. ಹೀಗಾಗಿ ಆ ಸಾಧ್ಯತೆಗಳಿಲ್ಲ ಎಂದು ಮೂಲಗಳು ಹೇಳಿವೆ. ಹೀಗಾಗಿ, ಕೇಂದ್ರೀಯ ನಾಯಕರೇ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸುವ ಸಾಧ್ಯತೆಗಳಿವೆ.
ಭೂಹಗರಣಗಳ ಆರೋಪಗಳ ಸುಳಿಯಲ್ಲಿ ವಿಲವಿಲನೆ ಒದ್ದಾಡುತ್ತಿರುವ ರಾಜ್ಯದ ಬಿಜೆಪಿ ಸರಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಯಡಿಯೂರಪ್ಪರನ್ನು ದೆಹಲಿಗೆ ಕರೆಸಿಕೊಂಡಾಗ, ಮುಖ್ಯಮಂತ್ರಿಯ ತಲೆದಂಡವಾಗುತ್ತದೆಯೇ ಎಂಬ ಊಹಾಪೋಹಗಳು ಎದ್ದಿದ್ದವು.
ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್, ಕಾಮನ್ವೆಲ್ತ್ ಹಗರಣದ ಸುರೇಶ್ ಕಲ್ಮಾಡಿ ಮತ್ತು 2ಜಿ ಸ್ಪೆಕ್ಟ್ರಂ ಹಗರಣ ಆರೋಪದಲ್ಲಿ ಎ.ರಾಜಾ ಅವರ ಪದಚ್ಯುತಿಯಾದ ಬಳಿಕವೂ, ಜಂಟಿ ಸಂಸದೀಯ ಸಮಿತಿ ತನಿಖೆಗೆ ಪಟ್ಟು ಹಿಡಿದು ಗದ್ದಲವೆಬ್ಬಿಸುತ್ತಿರುವ ಬಿಜೆಪಿಗೆ, ಯಡಿಯೂರಪ್ಪ ತಲೆದಂಡದ ಅಸ್ತ್ರವನ್ನು ತೋರಿಸಿ ಕಾಂಗ್ರೆಸ್ ಪ್ರತ್ಯುತ್ತರ ನೀಡಿತ್ತು.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿತ್ತು. ಆದರೆ ಈ ಭೇಟಿಯೂ ಹಠಾತ್ ರದ್ದಾಯಿತು.
ಸಂಪುಟ ಸಭೆ: ನಿವೃತ್ತ ನ್ಯಾಯಾಧೀಶರಿಂದ ತನಿಖೆ ಈ ನಡುವೆ, ಸಂಜೆ ಸಭೆ ಸೇರಿದ ರಾಜ್ಯ ಸಚಿವ ಸಂಪುಟವು, ಹತ್ತು ವರ್ಷಗಳಿಂದ ನಡೆದಿರುವ ಎಲ್ಲ ಭೂ ವ್ಯವಹಾರಗಳ ಕುರಿತು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು.
ಆಪರೇಶನ್‌ಗೊಳಗಾದವರಿಗೆ ನಿಗಮ ಮಂಡಳಿ ಸ್ಥಾನ ಅಂತೆಯೇ, ರಾಜ್ಯದ 29 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನೂ ನೇಮಿಸಲಾಗಿದ್ದು, ಆಪರೇಶನ್ ಕಮಲದ ಮೂಲಕ ಬೇರೆ ಪಕ್ಷಗಳಿಂದ ಬಂದ ಮೂವರು ಈಗ ಮಾಜಿಗಳಾಗಿರುವ ಶಾಸಕರಿಗೂ ಅಧಿಕಾರ ದೊರೆತಿದೆ.
ಕುಮಾರಸ್ವಾಮಿ ಅವರಿಂದ ವಜ್ರ ಎಂದು ಹೊಗಳಿಸಿಕೊಂಡಿದ್ದ ಜೆಡಿಎಸ್ ಶಾಸಕರಲ್ಲೊಬ್ಬರಾಗಿದ್ದ ಚನ್ನಪಟ್ಟಣದ ಅಶ್ವತ್ಥ್ ಅವರಿಗೆ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷತೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದ ಜಗಳೂರಿನ ರಾಮಚಂದ್ರ ಅವರಿಗೆ ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷತೆ ಹಾಗೂ ಬಂಗಾರಪೇಟೆ ಕಾಂಗ್ರೆಸ್ ಕುಳವಾಗಿದ್ದ ನಾರಾಯಣ ಸ್ವಾಮಿಗೆ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನದ ಬಹುಮಾನ ನೀಡಲಾಗಿದೆ.
ಅದೇ ರೀತಿ, ಬಿಜೆಪಿಯ ಜಗದೀಶ್ ಮೆಟಗುಡ್ಡ ಎಂಎಸ್ಐಎಲ್ ಮೈಸೂರು ಮಿನರಲ್ಸ್, ಚಿಕ್ಕನಗೌಡ ಭೂಸೇನಾ ನಿಗಮ ಅಧ್ಯಕ್ಷ, ಬಸವರಾಜ ನಾಯ್ಕರಿಗೆ ಬಂಜಾರ ಅಭಿವೃದ್ಧಿ ನಿಗಮ, ಸಿದ್ದು ಸವದಿ ಅವರಿಗೆ ಸೇರಿದಂತೆ ಬಿಜೆಪಿಯ 7 ಶಾಸಕರಿಗೂ ನಿಗಮ ಮಂಡಳಿ ಅಧ್ಯಕ್ಷತೆ ಲಭಿಸಿದೆ.