ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಜ-ಗಜಾಂತರ...ಏನಿದು ಶೋಭಾ ಕರಂದ್ಲಾಜೆ ಹಗರಣ? (B S Yeddyurappa | Shobha Karandlaje | Lokayukta | MD | Congress)
Bookmark and Share Feedback Print
 
NRB
ಆಡಳಿತಾರೂಢ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪುತ್ರರು, ಸಚಿವರಾದ ಕಟ್ಟಾ, ಅಶೋಕ್, ರಾಜ್ಯಾಧ್ಯಕ್ಷ ಈಶ್ವರಪ್ಪ, ಪುತ್ರರು ಭೂ ಹಗರಣದ ಸುಳಿಯಲ್ಲಿ ಸಿಕ್ಕಿದ್ದರೆ, ಇದೀಗ ಇಂಧನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧವೂ ಗಂಭೀರವಾದ ಆರೋಪ ಕೇಳಿ ಬರುವ ಮೂಲಕ ಬಿಜೆಪಿ ಪಾಳಯದ ಭ್ರಷ್ಟಾಚಾರ ಒಂದೊಂದಾಗಿಯೇ ಹೊರಬರತೊಡಗಿದೆ.

ಏನಿದು ಆರೋಪ?: ಶೋಭಾ ಕರಂದ್ಲಾಜೆ ಅವರು ನಗರದಲ್ಲಿನ ಆದರ್ಶ ಡೆವಲಪರ್ಸ್ ಕಂಪೆನಿಯಿಂದ 3.5 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ಹಣದಿಂದ ಅವರು ಕೊಡಗಿನಲ್ಲಿ ಸುಮಾರು 166 ಎಕರೆ ಜಮೀನನ್ನು ಅನಾಮಧೇಯ ಕಂಪನಿ ಹೆಸರಿನಲ್ಲಿ ಖರೀದಿ ಮಾಡಿದ್ದಾರೆನ್ನಲಾಗಿದೆ. ಇದು ಕಪಿಲಾ ಮಂಜುಶ್ರೀ ಅಪಾರೆಲ್ಸ್ ಹೆಸರಿನ ಅಸ್ತಿತ್ವದಲ್ಲಿ ಇಲ್ಲದೇ ಇರುವ ಕಂಪನಿ ಹೆಸರಿಗೆ ಸಾಲ ಪಡೆಯಲಾಗಿದೆ. ಅಲ್ಲದೆ ಶೋ ರೂಮ್ ವಹಿವಾಟು, ಮಿನರಲ್ಸ್‌ನಲ್ಲಿ ಹಣ ಹೂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಶೋಭಾ ಕಪಿಲಾ ಕಂಪನಿಯ ವಿಳಾಸವನ್ನು ನಂ.18, ಕ್ರೆಸೆಂಟ್ ರಸ್ತೆ ಬೆಂಗಳೂರು ಎಂದು ನೀಡಿದ್ದಾರೆ. ಆದರೆ ಈ ವಿಳಾಸದಲ್ಲಿ ಆ ಕಂಪನಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಕೇವಲ ತನಗೆ ಬರುವ 15 ಸಾವಿರ ರೂಪಾಯಿ ಸಂಬಳದಲ್ಲಿ ಬದುಕುತ್ತಿದ್ದೇನೆ ಎಂದು ಹೇಳುತ್ತಿದ್ದ ಶೋಭಾ ಇದೀಗ 3.5 ಕೋಟಿ ರೂಪಾಯಿ ಸಾಲ ಯಾವ ಆಧಾರದ ಮೇಲೆ ಪಡೆದಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದರು.

ಈ ಕಂಪನಿಗೆ ಶೋಭಾ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಮ್ಮ ಸಹೋದರ ಲಕ್ಷ್ಮಣ ಗೌಡ ಕರಂದ್ಲಾಜೆ ಅವರನ್ನು ಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ. ಶೋಭಾ ಕಂಪನಿಯಿಂದ ವರ್ಷಕ್ಕೆ ಒಂಬತ್ತು ಲಕ್ಷ ರೂಪಾಯಿ ಸಂಬಳ ಕೂಡ ಪಡೆಯುತ್ತಿದ್ದಾರೆ!

ಈ ಕಂಪನಿ 2007 ಏಪ್ರಿಲ್ 26ರಂದು ಅಸ್ತಿತ್ವಕ್ಕೆ ಬಂದಿತ್ತು. ಶೋಭಾ ಅವರು 2008ರ ಮೇ 30ರಂದು ಪಂಚಾಯತ್ ರಾಜ್ ಸಚಿವೆಯಾಗಿದ್ದರು. ಹಾಗಿದ್ದರೆ ಸಚಿವೆಯಾದ ನಂತರ ಶೋಭಾ ಅವರು ಎರಡೆರಡು ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದು ಕಾನೂನು ಪ್ರಕಾರ ಸರಿಯೇ? ಸಚಿವೆಯಾಗಿ ಲಾಭದಾಯಕ ಹುದ್ದೆಯಲ್ಲಿ ಮುಂದುರಿದಿದ್ದಾರಲ್ಲ ಈ ಬಗ್ಗೆ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೋಭಾ, ಫೆಡರಲ್ ಬ್ಯಾಂಕಿನಲ್ಲಿ ತಮ್ಮ ಬಿಡಿಎ ನಿವೇಶನ ಅಡವಿಟ್ಟು 3.5 ಕೋಟಿ ರೂ.ಸಾಲ ಪಡೆದಿರುವುದಾಗಿ ಹಾಗೂ ಆದರ್ಶ ಡೆವಲಪರ್ಸ್‌ನಿಂದ ಶೇ.7.2 ಬಡ್ಡಿ ದರದಲ್ಲಿ ಉಳಿದ ಹಣ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಕ್ರೆಸೆಂಟ್ ರಸ್ತೆಯಲ್ಲಿ ತಮ್ಮ ಮನೆ ಇದ್ದು ಅಲ್ಲಿಯೇ ಕಂಪನಿ ಕಚೇರಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಕಂಪನಿಯ ವಿಳಾಸವನ್ನು ಕ್ರೆಸೆಂಟ್ ರಸ್ತೆ, ಶ್ರೀಕಂಠಯ್ಯ ಲೇಔಟ್, ಹೈಗ್ರೌಂಡ್ಸ್ ಬೆಂಗಳೂರು ಎಂದು ನಮೂದಿಸಿದ್ದರು. ಆದರೆ ಲೋಕಾಯುಕ್ತರು ಪರಿಶೀಲನೆ ನಡೆಸಿದಾಗ ಆ ವಿಳಾಸದಲ್ಲಿ ಯಾವುದೇ ಶೋಭಾ ನೀಡಿರುವ ಹೆಸರಿನ ಕಂಪನಿ ಇಲ್ಲ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲ ಆದರ್ಶ ಡೆವಲಪರ್ಸ್‌ನಿಂದ ಸಾಲ ಪಡೆದಿರುವುದಾಗಿ ಹೇಳಿರುವ ಅವರು, ಜಾಮೀನುದಾರರ ಬಗ್ಗೆಯಾಗಲಿ, ಇಷ್ಟು ದೊಡ್ಡ ಮೊತ್ತದ ಸಾಲವನ್ನು ಯಾವ ಆಧಾರದ ಮೇಲೆ ನೀಡಿದ್ದಾರೆಂಬ ಕುರಿತು ಮಾಹಿತಿ ನೀಡಿಲ್ಲ. ಆ ನಿಟ್ಟಿನಲ್ಲಿ ಶೋಭಾ ಕರಂದ್ಲಾಜೆ ಲೋಕಾಯುಕ್ತಕ್ಕೂ ಅಮರ್ಪಕವಾಗಿ ಆಸ್ತಿ ವಿವರವನ್ನು ಸಲ್ಲಿಸಿದ್ದು, ಈ ಬಗ್ಗೆ ಲೋಕಾಯುಕ್ತ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ